ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳ ಲಿಸ್ಟಿಂಗ್, ಪೀಠಗಳ ಬದಲಾವಣೆ ಕುರಿತು ಸಿಜೆಐಗೆ ಬಹಿರಂಗ ಪತ್ರ ಬರೆದ ಹಿರಿಯ ವಕೀಲ ದುಷ್ಯಂತ್ ದವೆ
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯು ಪ್ರಕರಣಗಳ ಲಿಸ್ಟಿಂಗ್ ಮಾಡುವ ವಿಚಾರದ ಕೆಲ ಬೆಳವಣಿಗೆಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿ ಹಿರಿಯ ವಕೀಲ ದುಷ್ಯಂತ್ ದವೆ ಅವರು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಪತ್ರದ ಪ್ರತಿಗಳನ್ನು ಸುಪ್ರೀಂ ಕೋರ್ಟಿನ ಇತರ ನ್ಯಾಯಮೂರ್ತಿಗಳಿಗೂ ಕಳುಹಿಸಲಾಗಿದೆ.
ವಿಚಾರಣೆಗೆ ಪಟ್ಟಿ ಮಾಡಲಾದ ಕೆಲವು ಪ್ರಕರಣಗಳ ನ್ಯಾಯಪೀಠಗಳನ್ನು ಬದಲಾಯಿಸಲಾಗಿದೆ ಎಂದು ತಮ್ಮ ಪತ್ರದಲ್ಲಿ ದವೆ ಹೇಳಿಕೊಂಡಿದ್ದಾರೆ.
“ಮೊದಲು ವಿಚಾರಣೆಗೆ ಪಟ್ಟಿ ಮಾಡಲ್ಪಟ್ಟಾಗ ಒಂದು ನ್ಯಾಯಪೀಠದೆದುರು ಇರುವ ಪ್ರಕರಣಗಳನ್ನು ನಂತರ ಬೇರೆ ಪೀಠಗಳಿಗೆ ವರ್ಗಾಯಿಸಿದ ಹಲವು ಪ್ರಕರಣಗಳನ್ನು ಗಮನಿಸಿದ್ದೇನೆ. ಮೊದಲ ಕೋರಂ ಲಭ್ಯವಿರುವ ಹೊರತಾಗಿಯೂ ಎರಡನೇ ಕೋರಂ ನೇತೃತ್ವದ ಪೀಠಗಳ ಮುಂದೆ ಪ್ರಕರಣಗಳನ್ನು ಪಟ್ಟಿ ಮಾಡಲಾಗಿದೆ,” ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
2,4,6,7 ಕೋರ್ಟುಗಳ ಮುಂದೆ ಪಟ್ಟಿ ಮಾಡಲಾದ ಪ್ರಕರಣಗಳನ್ನು ನಿಯಮಗಳನ್ನು ಪರಿಗಣಿಸದೆ ಬೇರೆ ಪೀಠಗಳಿಗೆ ವರ್ಗಾಯಿಸಲಾಗಿದೆ, ಹೀಗೆ ಮಾಡುವಾಗ ಮೊದಲ ಕೋರಂ ಅವರ ಜ್ಯೇಷ್ಥತೆಯನ್ನೂ ಕಡೆಗಣಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಮೊದಲು ಒಂದು ನ್ಯಾಯಪೀಠದ ಮುಂದೆ ಇರಿಸಲಾದ ಪ್ರಕರಣವನ್ನು ನಂತರ ಬೇರೆ ಪೀಠಕ್ಕೆ ವರ್ಗಾಯಿಸಿದ ಹಲವು ಪ್ರಕರಣಗಳ ಕುರಿತು ಸಹೋದ್ಯೋಗಿಗಳು ಗಮನಕ್ಕೆ ತಂದಿದ್ದಾರೆ. ಈ ಹೆಚ್ಚಿನ ಪ್ರಕರಣಗಳು ಇನ್ನೂ ಬಾಕಿಯಿರುವುದರಿಂದ ಅವುಗಳನ್ನು ವಿವರಿಸುವುದು ಸರಿಯಲ್ಲ ಆದರೆ ಈ ಪ್ರಕರಣಗಳು ಮಾನವ ಹಕ್ಕುಗಳು, ವಾಕ್ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಂವಿಧಾನಿಕ ಸಂಸ್ಥೆಗಳ ಕಾರ್ಯನಿರ್ವಹಣೆ ಕುರಿತಾಗಿವೆ ಎಂದು ಹೇಳಬಲ್ಲೆ ಎಂದು ಅವರು ಹೇಳಿದ್ದಾರೆ.
“ಮಾಸ್ಟರ್ ಆಫ್ ರೋಸ್ಟರ್” ಆಗಿ ಸಿಜೆಐ ಅವರ ಪಾತ್ರವನ್ನು ಪತ್ರದಲ್ಲಿ ಉಲ್ಲೇಖಿಸಿ ತಮಗೆ ಸಿಜೆಐ ಅವರ ಮೇಲೆ ಅತ್ಯಂತ ಗೌರವವಿದೆ ಎಂದೂ ದವೆ ಹೇಳಿದ್ದಾರಲ್ಲದೆ ಸಿಜೆಐ ಅವರನ್ನು ಭೇಟಿ ಮಾಡುವ ಯತ್ನ ಕೈಗೂಡದೇ ಇರುವುದರಿಂದ ತಾವು ಈ ಬಹಿರಂಗ ಪತ್ರ ಬರೆದಿರುವುದಾಗಿ ಅವರು ತಿಳಿಸಿದ್ಧಾರೆ. “ನಿಮ್ಮ ನಾಯಕತ್ವದಲ್ಲಿ ಸುಪ್ರೀಂ ಕೋರ್ಟಿನಲ್ಲಿ ಈ ರೀತಿ ನಡೆಯುತ್ತಿರುವುದು ಸರಿಯಲ್ಲ, ತಕ್ಷಣ ಇದನ್ನು ಪರಿಗಣನೆಗೆ ತೆಗೆದುಕೊಂಡು ಸೂಕ್ತ ಪರಿಹಾರೋಪಾಯಗಳನ್ನು ಕೈಗೊಳ್ಳಬೇಕು,” ಎಂದು ಅವರು ಆಗ್ರಹಿಸಿದ್ದಾರೆ.