ವಿಭಜನೆಯಿಂದ ಬೇರ್ಪಟ್ಟಿದ್ದ ಭಾರತ-ಪಾಕ್ ಕುಟುಂಬಗಳು 75 ವರ್ಷಗಳ ಬಳಿಕ ಮಕ್ಕಾದಲ್ಲಿ ಪುನರ್‌ಮಿಲನ

Update: 2023-11-21 12:43 GMT

Photo credit: Punjabi Lehar TV

ಹೊಸದಿಲ್ಲಿ: 17 ತಿಂಗಳುಗಳ ಕಾಯುವಿಕೆ, ಅನುಮತಿ ನಿರಾಕರಣೆಗಳು ಮತ್ತು ತೀವ್ರ ಆತಂಕದಿಂದ ಕೂಡಿದ್ದ ಹೋರಾಟದ ಬಳಿಕ ಕೊನೆಗೂ ಪಾಕಿಸ್ತಾನದ 105ರ ಹರೆಯದ ಹಾಜಿರಾ ಬೀಬಿ ಮಕ್ಕಾದ ಕಅಬಾದಲ್ಲಿ ಕಳೆದ ವಾರ ಭಾರತದಲ್ಲಿಯ ತನ್ನ ಸೋದರಿಯ ಪುತ್ರಿ ಹನೀಫಾನ್ (60)ನ್ನು ಭೇಟಿಯಾಗಿದ್ದಾರೆ. ಇದು 1947ರ ವಿಭಜನೆಯಿಂದ ಬೇರ್ಪಟ್ಟ ಎರಡು ಕುಟುಂಬಗಳ 75 ವರ್ಷಗಳ ನಂತರದ ಪುನರ್‌ಮಿಲನವಾಗಿತ್ತು.

ಇದಕ್ಕೂ ಮೊದಲು ಪರಸ್ಪರ ಭೇಟಿಯಾಗಲು ಈ ಕುಟುಂಬಗಳು ಹಲವಾರು ಪ್ರಯತ್ನಗಳನ್ನು ನಡೆಸಿದ್ದವು ಮತ್ತು ಹಲವಾರು ಕಾರಣಗಳಿಂದ ಅವೆಲ್ಲವೂ ವಿಫಲಗೊಂಡಿದ್ದವು.

ಅಂತಿಮವಾಗಿ ಕಳೆದ ವರ್ಷದ ಜೂನ್‌ನಲ್ಲಿ ನಡೆದ ಭಾವನಾತ್ಮಕ ದೂರವಾಣಿ ಮಾತುಕತೆ ಮತ್ತು ಪಾಕಿಸ್ತಾನದ ಯೂಟ್ಯೂಬರ್ ಪ್ರಯತ್ನ ಕೊನೆಗೂ ಮಕ್ಕಾದಲ್ಲಿ ಹಾಜಿರಾ ಬೀಬಿ ಮತ್ತು ಹನೀಫಾನ್ ಭೇಟಿಯನ್ನು ಸಾಧ್ಯವಾಗಿಸಿದೆ.

ಗುರುದ್ವಾರಾ ಕರ್ತಾರ್‌ಪುರ ಸಾಹಿಬ್‌ನಲ್ಲಿ ಭೇಟಿಯಾಗಲು ಉಭಯ ಕುಟುಂಬಗಳು ಹಲವಾರು ಸಲ ಪ್ರಯತ್ನಿಸಿದ್ದವು. ವೀಸಾ ಮುಕ್ತ ಬಾರ್ಡರ್ ಕ್ರಾಸಿಂಗ್ ಆಗಿರುವ ಇದು ಪಾಕಿಸ್ತಾನದ ಗುರುದ್ವಾರಾ ದರ್ಬಾರ್ ಸಾಹಿಬ್ ಮತ್ತು ಪಂಜಾಬಿನ ಗುರುದಾಸಪುರದಲ್ಲಿಯ ಗುರುದ್ವಾರಾ ಬಾಬಾ ನಾನಕ್ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ. ಆದರೆ ಪ್ರತಿಸಲವೂ ಅಗತ್ಯ ಅನುಮತಿಯನ್ನು ಪಡೆಯುವ ಅವರ ಪ್ರಯತ್ನ ವಿಫಲಗೊಂಡಿತ್ತು.

ಪಂಜಾಬಿನ ಕಪುರ್ತಲಾ ನಿವಾಸಿಯಾಗಿರುವ ಹನೀಫಾನ್ ಅವರು ಹಾಜಿರಾ ಬೀಬಿಯನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಲು ಅಲ್ಲಿಯ ಸರಕಾರದಿಂದ ವೀಸಾಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಅದು ನಂತರ ನಿರಾಕರಿಸಲ್ಪಟ್ಟಿತ್ತು.

ಕಳೆದ ವರ್ಷದ ಜೂನ್‌ನಲ್ಲಿ ಹಾಜಿರಾ ಬೀಬಿ ಮೊದಲ ಬಾರಿಗೆ ಹನೀಫಾನ್‌ಗೆ ವೀಡಿಯೊ ಕರೆಯನ್ನು ಮಾಡಿದ್ದರು. ಆ ಸಂದರ್ಭದಲ್ಲಿ ಅವರು ತನ್ನ ಸೋದರಿ ಮಜೀದಾರನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಆದರೆ ಕೆಲವು ಸಮಯದ ಹಿಂದೆಯೇ ಮಜೀದಾ ನಿಧನರಾಗಿದ್ದು, ಈ ವಿಷಯ ಹಾಜಿರಾ ಬೀಬಿಯನ್ನು ಶೋಕಸಾಗರದಲ್ಲಿ ಮುಳುಗಿಸಿತ್ತು.

ಪರಸ್ಪರ ಭೇಟಿಯಾಗುವ ಕನಸು ಈ ಜನ್ಮದಲ್ಲಿ ನನಸಾಗುವುದಿಲ್ಲ ಎಂದು ಉಭಯ ಕುಟುಂಬಗಳು ಭಾವಿಸಿದ್ದಾಗಲೇ ಪಾಕಿಸ್ತಾನಿ ಯೂಟ್ಯೂಬರ್ ನಾಸಿರ್ ಧಿಲ್ಲಾನ್ ಮತ್ತು ಅಮೆರಿಕದಲ್ಲಿ ವಾಸವಿರುವ ಸಿಖ್ ವ್ಯಕ್ತಿ ಪಾಲ್ ಸಿಂಗ್ ಗಿಲ್ ಅವರ ನೆರವಿಗೆ ಬಂದಿದ್ದರು. ಮಕ್ಕಾಕ್ಕೆ ಈ ಎರಡೂ ಕುಟುಂಬಗಳ ಪ್ರಯಾಣ ಮತ್ತು ಕಳೆದ ವಾರ ಪರಸ್ಪರ ಭೇಟಿಯನ್ನು ಸಾಧ್ಯವಾಗಿಸಿದ್ದರು.

‘ನಾವು ಹಾಜಿರಾ ಬೀಬಿಯವರ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದು ಭಾರತದ ಪಂಜಾಬಿನಲ್ಲಿಯ ಅವರ ಸೋದರಿಯ ಕುಟುಂಬವನ್ನು ಪತ್ತೆ ಹಚ್ಚಲು ನಮಗೆ ನೆರವಾಗಿತ್ತು. 1947ರ ವಿಭಜನೆ ಸಂದರ್ಭದಲ್ಲಿ ಹಾಜಿರಾ ಬೀಬಿ ಪಾಕಿಸ್ತಾನಕ್ಕೆ ಬಂದಿದ್ದರೆ ಅವರ ತಂಗಿ ಮಜೀದಾ ಭಾರತದಲ್ಲಿಯೇ ಉಳಿಯಲು ನಿರ್ಧರಿಸಿದ್ದರು’ ಎಂದು ದಿಲ್ಲಾನ್ ಹೇಳಿದರು.

ಧಿಲ್ಲಾನ್ ಕೂಡ ಮಕ್ಕಾಕ್ಕೆ ಪ್ರಯಾಣಿಸಿದ್ದು, ತನ್ನ ಯೂಟ್ಯೂಬ್ ಚಾನೆಲ್ ‘ಪಂಜಾಬಿ ಲೆಹರ್ ’ಗಾಗಿ ಕಅಬಾದಲ್ಲಿ ಹಾಜಿರಾ ಬೀಬಿ ಮತ್ತು ಹನೀಫಾನ್ ಅವರ ಹೃದಯಸ್ಪರ್ಶಿ ಪುನರ್‌ಮಿಲನಕ್ಕೆ ಸಾಕ್ಷಿಯಾಗಿದ್ದರು. ಅವರಿಬ್ಬರೂ ದೂರವಾಣಿಯಲ್ಲಿ ಸಂಪರ್ಕದಲ್ಲಿದ್ದರಾದರೂ ಇದು ಅವರ ಮೊದಲ ವ್ಯಕ್ತಿಗತ ಭೇಟಿಯಾಗಿತ್ತು.

ಎರಡೂ ಕುಟುಂಬಗಳು ಆರ್ಥಿಕವಾಗಿ ಸದೃಢವಾಗಿರಲಿಲ್ಲ ಮತ್ತು ಪಾಲ್ ಸಿಂಗ್ ಗಿಲ್ ಅವರ ಮಕ್ಕಾ ಭೇಟಿಗಾಗಿ ಹಣಕಾಸು ನೆರವನ್ನು ಒದಗಿಸಿದ್ದರು.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News