ಟ್ರಂಪ್ ಸುಂಕ ಸಂಕಷ್ಟ ; ಅಪಾಯದಂಚಿಗೆ ತಲುಪಿದ ಕಾಶ್ಮೀರದ ಶತಮಾನಗಳಷ್ಟು ಹಳೆಯ ಕಾರ್ಪೆಟ್ ಉದ್ಯಮ!
Photo | AP
ಶ್ರೀನಗರ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ವ್ಯಾಪಕ ಸುಂಕಗಳು ಶತಮಾನಗಳಷ್ಟು ಹಳೆಯದಾದ,ಪ್ರಸಿದ್ಧ ಕಾಶ್ಮೀರಿ ಕಾರ್ಪೆಟ್ ತಯಾರಿಕೆ ಉದ್ಯಮದ ಅಸ್ತಿತ್ವಕ್ಕೇ ಅಪಾಯವೊಡ್ಡಿದೆ.
ಕೈಯಿಂದ ಗಂಟು ಹಾಕಿದ ಅಪ್ಪಟ ಕಾಶ್ಮೀರಿ ರತ್ನಗಂಬಳಿಗಳನ್ನು ಶುದ್ಧ ರೇಷ್ಮೆ ಮತ್ತು ಕೆಲವೊಮ್ಮೆ ಶುದ್ಧ ಉಣ್ಣೆಯಿಂದ ತಯಾರಿಸಲಾಗುತ್ತಿದ್ದು, ಇದು ಹೆಚ್ಚು ಸವಾಲಿನ ಕೆಲಸವಾಗಿದೆ.
ಕುಶಲಕರ್ಮಿಗಳು ತಲೆಮಾರುಗಳಿಂದಲೂ ರತ್ನಗಂಬಳಿಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು, ಈ ಅಪರೂಪದ ಕಲೆ ನಶಿಸದಂತೆ ನೋಡಿಕೊಂಡಿದ್ದಾರೆ. ರತ್ನಗಂಬಳಿಗಳು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತವೆ. ಆದರೆ ಅವುಗಳನ್ನು ತಯಾರಿಸುವ ಕುಶಲಕರ್ಮಿಗಳು ತಮ್ಮ ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ.
ಈ ವಿವಾದಿತ ಪ್ರದೇಶದ ಕುರಿತು ಪರಮಾಣು ವೈರಿಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ದಶಕಗಳ ಕಾಲದ ಸಂಘರ್ಷಗಳ ನಡುವೆಯೂ ಕಾರ್ಪೆಟ್ ಉದ್ಯಮವು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಕಾಲಕ್ಕೆ ತಕ್ಕಂತೆ ಬದಲಾಗುವ ಫ್ಯಾಷನ್ ಗೆ ಸವಾಲೊಡ್ಡಿ ಬೇಡಿಕೆಯನ್ನು ಉಳಿಸಿಕೊಂಡಿರುವ ಕಾಶ್ಮೀರಿ ರತ್ನಗಂಬಳಿಗಳು ಮಹಲುಗಳು ಮತ್ತು ವಸ್ತು ಸಂಗ್ರಹಾಲಯಗಳನ್ನು ಅಲಂಕರಿಸಿವೆ.
ಆದರೆ ಕಾಶ್ಮೀರಿ ವ್ಯಾಪಾರಿಗಳ ಪ್ರಕಾರ ಕಡಿಮೆ ವೆಚ್ಚದ ಬೃಹತ್ ಉತ್ಪಾದನೆಗಳು ಮತ್ತು ಕುಶಲ ಕರ್ಮಿಗಳು ಉದ್ಯಮವನ್ನು ತೊರೆಯುತ್ತಿರುವ ನಡುವೆ ಈಗಾಗಲೇ ನಲುಗಿರುವ ಕಾರ್ಪೆಟ್ ಉದ್ಯಮಕ್ಕೆ ಅಮೆರಿಕದ ಆಮದುಗಳ ಮೇಲೆ ಟ್ರಂಪ್ ಸುಂಕಗಳಿಂದಾಗಿ ತೀವ್ರ ಹೊಡೆತ ಬೀಳಬಹುದು.
ಈ ಸುಂಕಗಳು ಪ್ರಾಥಮಿಕವಾಗಿ ಚೀನಾದಂತಹ ಪ್ರಮುಖ ರಫ್ತುದೇಶಗಳನ್ನು ಗುರಿಯಾಗಿಸಿಕೊಂಡಿದ್ದರೂ ಅವು ಉಳಿವಿಗಾಗಿ ಅಮೆರಿಕ ಮತ್ತು ಐರೋಪ್ಯ ಮಾರುಕಟ್ಟೆಗಳನ್ನೇ ಅವಲಂಬಿಸಿರುವ ಕಾಶ್ಮೀರದಂತಹ ಪ್ರದೇಶಗಳ ಸಾಂಪ್ರದಾಯಿಕ ಕರಕುಶಲ ಕೈಗಾರಿಕೆಗಳನ್ನು ಅನುದ್ದಿಷ್ಟವಾಗಿ ಅಪಾಯಕ್ಕೆ ಸಿಲುಕಿಸಿವೆ. ಅಧಿಕೃತ ದತ್ತಾಂಶಗಳ ಪ್ರಕಾರ,ಭಾರತದಿಂದ ವಿಶ್ವಾದ್ಯಂತ ಎರಡು ಶತಕೋಟಿ ಡಾ.ಮೌಲ್ಯದ ರತ್ನಗಂಬಳಿಗಳನ್ನು ರಫ್ತು ಮಾಡಲಾಗುತ್ತಿದ್ದು, ಈ ಪೈಕಿ ಅಮೆರಿಕವೊಂದಕ್ಕೇ ಕಾರ್ಪೆಟ್ ರಫ್ತಿನ ಮೌಲ್ಯ 1.2 ಶತಕೋಟಿ ಡಾ.ಗಳಷ್ಟಿದೆ.
ಶ್ರೀನಗರದಲ್ಲಿ ಕಾರ್ಪೆಟ್ ತಯಾರಿಕೆಯಲ್ಲಿ ತೊಡಗಿಕೊಂಡಿದ್ದ ನೂರಕ್ಕೂ ಅಧಿಕ ಕುಶಲಕರ್ಮಿಗಳು ಸುಮಾರು ಎರಡು ದಶಕಗಳ ಹಿಂದೆಯೇ ಇತರ ಉದ್ಯೋಗಗಳನ್ನು ಅಪ್ಪಿಕೊಂಡಿದ್ದು, ಸದ್ಯ ತಾನು ನಗರದಲ್ಲಿ ಉಳಿದುಕೊಂಡಿರುವ ಏಕೈಕ ನೇಕಾರನಾಗಿದ್ದೇನೆ ಎಂದು ಮುಹಮ್ಮದ್ ಯೂಸುಫ್ ದಾರ್(50) ಹೇಳಿದರು. ‘ಒಂದು ರತ್ನಗಂಬಳಿಯನ್ನು ತಯಾರಿಸಲು ನನಗೆ ತಿಂಗಳುಗಳೇ ಬೇಕಾಗುತ್ತವೆ. ಆದರೆ ಬೇಡಿಕೆಯಿಲ್ಲದಿದ್ದರೆ ನಮ್ಮ ಕೌಶಲ್ಯ ವ್ಯರ್ಥವಾದಂತೆ ಅನಿಸುತ್ತದೆ’ ಎಂದರು.
ಈಗಲೂ ಕಾಶ್ಮೀರದಲ್ಲಿ ಸಾವಿರಾರು ಕುಟುಂಬಗಳು ತಮ್ಮ ಬದುಕಿಗಾಗಿ ಈ ಕರಕೌಶಲ್ಯವನ್ನೇ ನೆಚ್ಚಿಕೊಂಡಿವೆ.
ಸುಂಕವನ್ನು ಶೇ.28ರಷ್ಟು ತೀವ್ರವಾಗಿ ಹೆಚ್ಚಿಸಿರುವುದರಿಂದ ಅಮೆರಿಕದ ಬಳಕೆದಾರರು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಆಮದು ಮಾಡಿಕೊಂಡ ರತ್ನಗಂಬಳಿಗಳು ಹೆಚ್ಚು ದುಬಾರಿಯಾಗಲಿವೆ.
ತಜ್ಞರು ಹೇಳುವಂತೆ ಅಮೆರಿಕದಲ್ಲಿ ಬಳಕೆದಾರರು ದುಬಾರಿ ಬೆಲೆಗಳನ್ನು ತೆತ್ತು ಕಾರ್ಪೆಟ್ ಗಳನ್ನು ಖರೀದಿಸುವುದರಿಂದ ಇಲ್ಲಿಯ ನೇಕಾರರ ವೇತನ ಹೆಚ್ಚುವುದಿಲ್ಲ,ಬದಲಾಗಿ ಆಗಾಗ್ಗೆ ಕಡಿಮೆ ಆರ್ಡರ್ಗಳು,ಕಡಿಮೆ ಆದಾಯ ಮತ್ತು ಕುಶಲಕರ್ಮಿಗಳಲ್ಲಿ ಹೆಚ್ಚಿನ ಅನಿಶ್ಚಿತತೆಗೆ ಕಾರಣವಾಗುತ್ತದೆ.
ಕಾಶ್ಮೀರಿ ಕಾರ್ಪೆಟ್ ಗಳ ದುಬಾರಿ ಬೆಲೆಯಿಂದಾಗಿ ಬಳಕೆದಾರರು ಅಗ್ಗದ,ಯಂತ್ರದಿಂದ ತಯಾರಿತ ಪರ್ಯಾಯಗಳತ್ತ ಹೊರಳಬಹುದು ಮತ್ತು ಕಾಶ್ಮೀರಿ ಕುಶಲಕರ್ಮಿಗಳು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ.
ಸಾಂಪ್ರದಾಯಿಕ ಕೈಗಾರಿಕೆಗಳನ್ನು ರಕ್ಷಿಸಲು ಅಂತರರಾಷ್ಟ್ರೀಯ ವ್ಯಾಪಾರ ನೀತಿಗಳು ಬದಲಾಗದಿದ್ದರೆ ಕಾಶ್ಮೀರದ ಕೈಯಿಂದ ರತ್ನಗಂಬಳಿಗಳನ್ನು ಹೆಣೆಯುವ ಪರಂಪರೆ ಅವಸಾನದತ್ತ ಸಾಗಲಿದೆ ಎಂದು ಉದ್ಯಮದ ಒಳಗಿನವರು ಆತಂಕ ವ್ಯಕ್ತಪಡಿಸಿದ್ದಾರೆ.
ಅಮೆರಿಕ,ಜರ್ಮನಿ ಮತ್ತು ಫ್ರಾನ್ಸ್ ಗೆ ಕಾರ್ಪೆಟ್ ಗಳನ್ನು ರಫ್ತು ಮಾಡುವ ತನ್ನ ವ್ಯಾಪಾರ ಪಾಲುದಾರರು ಈಗಾಗಲೇ ತಯಾರಿಕೆ ಹಂತದಲ್ಲಿರುವ ಕನಿಷ್ಠ ಒಂದು ಡಜನ್ ಆರ್ಡರ್ಗಳನ್ನು ರದ್ದುಮಾಡಿದ್ದಾರೆ ಮತ್ತು ಕೆಲವು ಡಜನ್ ಕಾರ್ಪೆಟ್ ಗಳನ್ನು ವಾಪಸ್ ಕೂಡ ಮಾಡಿದ್ದಾರೆ ಎಂದು ಕಾಶ್ಮೀರಿ ರತ್ನಗಂಬಳಿಗಳ ಪೂರೈಕೆದಾರ ವಿಲಾಯತ್ ಅಲಿ ಅಳಲು ತೋಡಿಕೊಂಡರು.