ಪಂಜಾಬ್ | ಜಲಂಧರ್ ನ ಬಿಜೆಪಿ ನಾಯಕರ ನಿವಾಸದ ಬಳಿ ಸ್ಫೋಟ ಪ್ರಕರಣ: ಇಬ್ಬರ ಬಂಧನ

Update: 2025-04-08 21:07 IST
ಪಂಜಾಬ್ | ಜಲಂಧರ್ ನ ಬಿಜೆಪಿ ನಾಯಕರ ನಿವಾಸದ ಬಳಿ ಸ್ಫೋಟ ಪ್ರಕರಣ: ಇಬ್ಬರ ಬಂಧನ

PC : PTI 

  • whatsapp icon

ಚಂಡೀಗಢ: ಪಂಜಾಬ್ ರಾಜ್ಯದ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾರ ಜಲಂಧರ್ ನಿವಾಸದ ಬಳಿ ನಡೆದಿದ್ದ ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಂಗಳವಾರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಅಪರಾಧ ಪ್ರಕರಣದಲ್ಲಿ ಬಳಸಲಾಗಿದ್ದ ಇ-ರಿಕ್ಷಾವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಶೇಷ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅರ್ಪಿತ್ ಶುಕ್ಲಾ, ಕೋಮು ಸಾಮರಸ್ಯವನ್ನು ಹಾಳುಗೆಡವಲು ಈ ಕೃತ್ಯವನ್ನು ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ.

“ಇದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ನ ಪ್ರಮುಖ ಪಿತೂರಿಯಾಗಿದೆ. ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಸಹಚರ ಝೀಶನ್ ಅಖ್ತರ್ ಹಾಗೂ ಪಾಕಿಸ್ತಾನದ ಗ್ಯಾಂಗ್ ಸ್ಟರ್ ಶಾಝಾದ್ ಭಟ್ಟಿ ಜೊತೆಯಾಗಿ ಈ ಪಿತೂರಿಯನ್ನು ಹೆಣೆದಿದ್ದಾರೆ” ಎಂದು ಅವರು ಹೇಳಿದ್ದಾರೆ.

ಈ ಕೃತ್ಯದಲ್ಲಿ ಬಬ್ಬರ್ ಖಾಲ್ಸಾ ಇಂಟರ್ ನ್ಯಾಶನಲ್ ಸಂಘಟನೆಯ ಕೈವಾಡವೇನಾದರೂ ಇದೆಯೆ ಎಂಬ ಕುರಿತೂ ತನಿಖೆ ಪ್ರಗತಿಯಲ್ಲಿದೆ. ಈ ಸಂಬಂಧ ಪಂಜಾಬ್ ಪೊಲೀಸರು ಕೇಂದ್ರ ತನಿಖಾ ಸಂಸ್ಥೆಗಳೊಂದಿಗೂ ಸಂಪರ್ಕದಲ್ಲಿವೆ ಎಂದೂ ಅವರು ತಿಳಿಸಿದ್ದಾರೆ.

ಮಂಗಳವಾರ ಮುಂಜಾನೆ ಜಲಂಧರ್ ನಲ್ಲಿರುವ ಮನೋರಂಜನ್ ಕಾಲಿಯಾ ನಿವಾಸದ ಬಳಿ ಸಂಭವಿಸಿದ ಸ್ಫೋಟದಲ್ಲಿ ಅವರ ನಿವಾಸದ ಅಲ್ಯುಮಿನಿಯಂ ವಿಭಜಕಕ್ಕೆ ಹಾನಿಯಾಗಿ, ಕಿಟಕಿಯ ಗಾಜುಗಳು ಪುಡಿಪುಡಿಯಾಗಿದ್ದವು. ಇದರೊಂದಿಗೆ, ಮನೆಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಅವರು ಕಾರು ಹಾಗೂ ಮೋಟರ್ ಬೈಕ್ ಕೂಡಾ ಜಖಂಗೊಂಡಿದ್ದವು. ಆದರೆ, ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದ ಪೊಲೀಸರು ತಿಳಿಸಿದ್ದಾರೆ.

ಈ ಸ್ಫೋಟ ಸಂಭವಿಸಿದಾಗ, ಪಂಜಾಬ್ ರಾಜ್ಯದ ಮಾಜಿ ಸಂಪುಟ ಸಚಿವ ಹಾಗೂ ಪಂಜಾಬ್ ಬಿಜೆಪಿಯ ಮಾಜಿ ಅಧ್ಯಕ್ಷ ಮನೋರಂಜನ್ ಕಾಲಿಯಾ ತಮ್ಮ ನಿವಾಸದಲ್ಲೇ ಇದ್ದರು ಎನ್ನಲಾಗಿದೆ. ಅವರೀಗ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರೂ ಆಗಿದ್ದಾರೆ.

ಕಳೆದ ನಾಲ್ಕೈದು ತಿಂಗಳಲ್ಲಿ ಅಮೃತಸರ ಹಾಗೂ ಗುರುದಾಸ್ ಪುರ್ ನಲ್ಲಿನ ಪೊಲೀಸ್ ಹೊರ ಠಾಣೆಗಳನ್ನು ಗುರಿಯಾಗಿಸಿಕೊಂಡು ಇಂತಹ ಹಲವು ಸ್ಫೋಟದ ಘಟನೆಗಳು ಸಂಭವಿಸಿದ್ದರೂ, ಪ್ರಮುಖ ರಾಜಕಾರಣಿಯೊಬ್ಬರನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆದಿರುವುದು ಇದೇ ಮೊದಲಾಗಿದೆ. ಕಳೆದ ತಿಂಗಳು ಅಮೃತಸರದಲ್ಲಿನ ದೇವಾಲಯವೊಂದರ ಹೊರಗೆ ಸ್ಫೋಟವೊಂದು ಸಂಭವಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News