ಮನೆಯಲ್ಲೇ ನವಜಾತ ಶಿಶುವಿಗೆ ಜನ್ಮ ನೀಡಿದ ಮಹಿಳೆಯ ಮೃತ್ಯು ಪ್ರಕರಣ: ಇಬ್ಬರ ಸೆರೆ

ಸಾಂದರ್ಭಿಕ ಚಿತ್ರ | PC : freepik.com
ಮಲಪ್ಪುರಂ: ಇತ್ತೀಚೆಗೆ ಉತ್ತರ ಕೇರಳ ಜಿಲ್ಲೆಯಲ್ಲಿ ಮನೆಯಲ್ಲೇ ನವಜಾತ ಶಿಶುವಿಗೆ ಜನ್ಮ ನೀಡುವಾಗ ಮೃತಪಟ್ಟಿದ್ದ 35 ವರ್ಷದ ಮಹಿಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಪೊಲೀಸರು ಇನ್ನೂ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಗರ್ಭಿಣಿ ಮಹಿಳೆಯ ಹೆರಿಗೆಗೆ ನೆರವು ನೀಡಿದ ಆರೋಪದ ಮೇಲೆ ಒತ್ತುಕ್ಕುಂಗಲ್ ನಿವಾಸಿಯಾದ ಫಾತಿಮಾ ಹಾಗೂ ಅವರ ಪುತ್ರ ಅಬೂಬಕರ್ ಸಿದ್ದಿಕಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗರ್ಭಿಣಿ ಮಹಿಳೆ ಸಾವಿನ ಕುರಿತು ಪ್ರಗತಿಯಲ್ಲಿರುವ ತನಿಖೆಯಲ್ಲಿ ಈ ಇಬ್ಬರನ್ನು ವಿಸ್ತೃತ ತನಿಖೆಗೊಳಪಡಿಸಲಾಗುವುದು ಎಂದೂ ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ, ಮೃತ ಗರ್ಭಿಣಿ ಮಹಿಳೆಯ ಪತಿ ಸಿರಾಜುದ್ದೀನ್ (39) ಅನ್ನು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105 ಹಾಗೂ ಸೆಕ್ಷನ್ 238ರ ಅಡಿ ಪೊಲೀಸರು ಬಂಧಿಸಿದ್ದರು.
ಚತ್ತಿಪರಂಬ ನಿವಾಸಿಯಾದ ಅಸ್ಮಾ ಎಂಬ ಗರ್ಭಿಣಿ ಮಹಿಳೆಯು ರವಿವಾರ ತನ್ನ ಐದನೆ ಮಗುವಿಗೆ ಜನ್ಮ ನೀಡುವಾಗ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ನಂತರ, ಆಕೆಯ ಪತಿ ಸಿರಾಜುದ್ದೀನ್ ಆಕೆಯ ಮೃತ ದೇಹವನ್ನು ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್ ನಲ್ಲಿರುವ ತನ್ನ ನಿವಾಸಕ್ಕೆ ಸಾಗಿಸಿದ್ದರು ಎಂದು ಹೇಳಲಾಗಿದೆ.
ಈ ಕುರಿತು ಮಾಹಿತಿ ದೊರೆತ ನಂತರ, ಸಿರಾಜುದ್ದೀನ್ ನಿವಾಸಕ್ಕೆ ಆಗಮಿಸಿದ್ದ ಪೆರುಂಬವೂರ್ ಠಾಣೆಯ ಪೊಲೀಸರು, ಆಕೆಯ ಮೃತ ದೇಹವನ್ನು ಪೆರಂಬವೂರ್ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರಿಸಿದ್ದರು.
ಮಗುವಿಗೆ ಜನ್ಮ ನೀಡುವಾಗ ಅಧಿಕ ಪ್ರಮಾಣದ ರಕ್ತಸ್ರಾವ ಸಂಭವಿಸಿದ್ದರಿಂದ ಅಸ್ಮಾ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷಾ ವರದಿ ದೃಢಪಡಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದರ ಬೆನ್ನಿಗೇ, ಸಿರಾಜುದ್ದೀನ್ ಅವರನ್ನು ಬಂಧಿಸಲಾಗಿದ್ದು, ಘಟನೆಯ ಕುರಿತು ವಿಸ್ತೃತ ತನಿಖೆಗೆ ಚಾಲನೆ ನೀಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.