ಉತ್ತರ ಪ್ರದೇಶ: 3,100 ರೂ. ಸಾಲ ಮರುಪಾವತಿಸದ ಬೆಳ್ಳುಳ್ಳಿ ವ್ಯಾಪಾರಿಯನ್ನು ವಿವಸ್ತ್ರಗೊಳಿಸಿ ಹಲ್ಲೆ; ವಿಡಿಯೋ ವೈರಲ್
ನೋಯ್ಡಾ: 3,100 ರೂ ಸಾಲವನ್ನು ಮರುಪಾವತಿಸಿಲ್ಲ ಎಂದು 35 ವರ್ಷದ ಬೆಳ್ಳುಳ್ಳಿ ಮಾರಾಟಗಾರರೊಬ್ಬನನ್ನು ವಿವಸ್ತ್ರಗೊಳಿಸಿ ಥಳಿಸಲಾಗಿದೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಗೌತಮ್ ಬುದ್ಧ ನಗರ ಪೊಲೀಸರು ಮಂಗಳವಾರ ಕಮಿಷನ್ ಏಜೆಂಟ್ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಬೆತ್ತಲೆಯಾಗಿದ್ದ ವ್ಯಕ್ತಿಗೆ ದೊಣ್ಣೆಯಿಂದ ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಆರೋಪಿಗಳು ಗ್ರೇಟರ್ ನೋಯ್ಡಾದ ಗೌರ್ ನಗರದ ನಿವಾಸಿ ಸುಂದರ್ ಸಿಂಗ್ ಮತ್ತು ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ನಿವಾಸಿ ಭಗಂದಾಸ್ ಎಂದು ಗುರುತಿಸಲಾಗಿದೆ.
ಸಂತ್ರಸ್ತನನ್ನು ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಅಮಿತ್ ಸಿಂಗ್ ಎಂದು ಗುರುತಿಸಲಾಗಿದೆ.
“ಸಂತ್ರಸ್ತ ಅಮಿತ್, ನೋಯ್ಡಾ ಸಬ್ಜಿ ಮಂಡಿಯ ಸೆಕ್ಟರ್ 88 ರಲ್ಲಿ ಗಾಡಿಯಲ್ಲಿ ಬೆಳ್ಳುಳ್ಳಿ ಮಾರಾಟ ಮಾಡುತ್ತಿದ್ದ. ವ್ಯಾಪಾರಕ್ಕಾಗಿ ಮಂಡಿಯಲ್ಲಿ ಕಮಿಷನ್ ಏಜೆಂಟ್ ಆಗಿರುವ ಸುಂದರ್ ಎಂಬುವವರಿಂದ ಅಮಿತ್ 5,600 ರೂಪಾಯಿ ಸಾಲ ಪಡೆದಿದ್ದರು. ಸೋಮವಾರ 2,500 ರೂಪಾಯಿಯನ್ನು ಸುಂದರ್‌ಗೆ ಹಿಂದಿರುಗಿಸಿದ ಅಮಿತ್, ಉಳಿದ ಹಣವನ್ನು ಶೀಘ್ರದಲ್ಲೇ ಹಿಂದಿರುಗಿಸುವುದಾಗಿ ತಿಳಿಸಿದ್ದರು. ಆದರೆ ಸುಂದರ್ ತನ್ನ ಸಹಾಯಕರೊಂದಿಗೆ ಅಮಿತ್ ಗೆ ಅಮಾನುಷವಾಗಿ ಥಳಿಸಿ, ವಿವಸ್ತ್ರಗೊಳಿಸಿ, ಕೊಲೆ ಬೆದರಿಕೆ ಕೂಡಾ ಹಾಕಿದ್ದಾರೆ ಎಂದು ಪೊಲೀಸ್ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.