ಆಸ್ಟ್ರೇಲಿಯ ವಿರುದ್ಧ ಅಂಡರ್-19 ಟೆಸ್ಟ್ | ಭಾರತದ ಪರ ವೇಗದ ಶತಕ ಸಿಡಿಸಿದ 13ರ ಬಾಲಕ ವೈಭವ್ ಸೂರ್ಯವಂಶಿ

Update: 2024-10-01 15:54 GMT

ವೈಭವ್ ಸೂರ್ಯವಂಶಿ | PTI  

ಹೊಸದಿಲ್ಲಿ : ಅಂಡರ್-19 ಟೆಸ್ಟ್‌ನಲ್ಲಿ 13ರ ಹರೆಯದ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಭಾರತದ ಪರ ವೇಗದ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ.

ಚೆನ್ನೈನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಆಸ್ಟ್ರೇಲಿಯ ವಿರುದ್ಧ ನಡೆದ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ವೈಭವ್ ಈ ಸಾಧನೆ ಮಾಡಿದ್ದಾರೆ. ವೈಭವ್ ಕೇವಲ 58 ಎಸೆತಗಳಲ್ಲಿ ತನ್ನ ಶತಕ ಪೂರೈಸಿದರು. 104 ರನ್‌ಗೆ ರನೌಟಾಗಿರುವ ವೈಭವ್ ಇನಿಂಗ್ಸ್‌ನಲ್ಲಿ 14 ಬೌಂಡರಿ ಹಾಗೂ 4 ಸಿಕ್ಸರ್‌ಗಳಿದ್ದವು.

ತನ್ನ ಸ್ಫೋಟಕ ಇನಿಂಗ್ಸ್‌ನ ಹೊರತಾಗಿಯೂ ಸೂರ್ಯವಂಶಿ ಅವರು ಅಂಡರ್-19 ಟೆಸ್ಟ್ ಕ್ರಿಕೆಟ್ ಪಟ್ಟಿಯಲ್ಲಿ ವೇಗದ ಶತಕ ದಾಖಲಿಸಿರುವ ಇಂಗ್ಲೆಂಡ್‌ನ ಕ್ರಿಕೆಟಿಗ ಮೊಯಿನ್ ಅಲಿ ದಾಖಲೆಯನ್ನು ಮುರಿಯುವುದರಿಂದ ವಂಚಿತರಾದರು. ಮೊಯಿನ್ ಅಲಿ 2005ರಲ್ಲಿ 56 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

ಕಳೆದ ಋತುವಿನಲ್ಲಿ ಮುಂಬೈ ಹಾಗೂ ಬಿಹಾರ ನಡುವಿನ ರಣಜಿ ಪಂದ್ಯದಲ್ಲಿ ಕ್ರಿಕೆಟಿಗೆ ಪಾದಾರ್ಪಣೆಗೈದಿದ್ದ ವೈಭವ್ ರಣಜಿ ಟ್ರೋಫಿ ಇತಿಹಾಸದಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಕಿರಿಯ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾಗಿ ಸುದ್ದಿಯಾಗಿದ್ದರು. ವೈಭವ್ ಬಿಹಾರದ ಪರ ಆಡಿದಾಗ ಕೇವಲ 12 ವರ್ಷ ವಯಸ್ಸಾಗಿತ್ತು.

ವೈಭವ್ ಅವರು ಕ್ರಿಕೆಟ್ ಲೆಜೆಂಡ್‌ಗಳಾದ ಸಚಿನ್ ತೆಂಡುಲ್ಕರ್ ಹಾಗೂ ಯುವರಾಜ್ ಸಿಂಗ್ ದಾಖಲೆಯನ್ನು ಮುರಿದಿದ್ದರು. ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್(15 ವರ್ಷ,57 ದಿನ)ತನ್ನ ಚೊಚ್ಚಲ ಪ್ರಥಮ ದರ್ಜೆ ಪಂದ್ಯ ಆಡಿದಾಗ ಸಚಿನ್(15 ವರ್ಷ, 230 ದಿನಗಳು)ಗಿಂತ ಕಿರಿಯರಾಗಿದ್ದರು.

ಎಡಗೈ ಬ್ಯಾಟರ್ ವೈಭವ್‌ಗೆ ವೆಸ್ಟ್‌ಇಂಡೀಸ್‌ನ ಲೆಜೆಂಡ್ ಬ್ರಿಯಾನ್ ಲಾರಾ ಸ್ಫೂರ್ತಿಯಾಗಿದ್ದಾರೆ. ವೈಭವ್ ಬಳಿ ಲಾರಾ ಅವರ ವೀಡಿಯೊದ ಸಂಗ್ರಹವಿದೆ. 2004ರಲ್ಲಿ ಆ್ಯಂಟಿಗುವಾದಲ್ಲಿ ಇಂಗ್ಲೆಂಡ್ ವಿರುದ್ಧ ಔಟಾಗದೆ ಗಳಿಸಿರುವ 400 ರನ್ ಸಹಿತ ಲಾರಾ ಅವರ ಹಲವು ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ನೋಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News