ನಾಳೆ ಕೇಂದ್ರ ಬಜೆಟ್ ಮಂಡನೆ | ಗರಿಗೆದರಿದ ನಿರೀಕ್ಷೆ

ನಿರ್ಮಲಾ ಸೀತಾರಾಮನ್ | PC : PTI
ಹೊಸದಿಲ್ಲಿ: ಸಂಸತ್‌ನ ಬಜೆಟ್ ಅಧಿವೇಶನವು ಶುಕ್ರವಾರ ಆರಂಭಗೊಂಡಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಶನಿವಾರ 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಸತತವಾಗಿ ಎಂಟನೇ ಬಾರಿ ಮಂಡಿಸಲಿರುವ ಬಜೆಟ್ ಇದಾಗಿದೆ.
ನೂತನ ಬಜೆಟ್ ದೇಶದ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ನಿರೀಕ್ಷೆಯಿದೆ ಹಾಗೂ ಕುಂಠಿತವಾಗುವ ಲಕ್ಷಣಗಳನ್ನು ಪ್ರದರ್ಶಿಸುತ್ತಿರುವ ಜಿಡಿಪಿಯ ಸಮಗ್ರ ಬೆಳವಣಿಗೆಗೆ ಉತ್ತೇಜನ ನೀಡುವಂತಹ ಕ್ರಮಗಳನ್ನು ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆಯಿದೆಯೆನ್ನಲಾಗಿದೆ.
ನಿರ್ಮಲಾ ಸೀತಾರಾಮನ್ ಅವರು ಶನಿವಾರ ಬೆಳಗ್ಗೆ 11:00 ಗಂಟೆಗೆ ಬಜೆಟ್ ಭಾಷಣವನ್ನು ಆರಂಭಿಸಲಿದ್ದಾರೆ.
ಮೋದಿ ಸರಕಾರದ ಮೂರನೇ ಅವಧಿಯಲ್ಲಿ ನಿರ್ಮಲಾ ಅವರು ಮಂಡಿಸಿದ ಎರಡನೇ ಪೂರ್ಣ ಬಜೆಟ್ ಇದಾಗಿದೆ. ನಿರ್ಮಲಾ ಸೀತಾರಾಮನ್ ಅವರು ವಿತ್ತ ಸಚಿವೆಯಾಗಿ ಈವರೆಗೆ ಒಟ್ಟು ಆರು ಸಮಗ್ರ ಬಜೆಟ್‌ಗಳನ್ನು ಹಾಗೂ ಎರಡು ಮಧ್ಯಂತರ ಬಜೆಟ್‌ಗಳನ್ನು ಮಂಡಿಸಿದ್ದಾರೆ.
ಕಳೆದ ವರ್ಷದಂತೆ ಈ ವರ್ಷವೂ ಬಜೆಟ್ ಸಂಪೂರ್ಣ ಡಿಜಿಟಲ್ ಆಗಲಿದ್ದು, ಈ ಪದ್ಧತಿ ಈ ವರ್ಷವೂ ಮುಂದುವರಿಯಲಿದೆ.