ಕೇಂದ್ರ ಸಚಿವ ಜಿತನ್ ಮಾಂಝಿಯ ಮೊಮ್ಮಗಳಿಗೆ ಗುಂಡಿಕ್ಕಿ ಹತ್ಯೆ

Update: 2025-04-09 20:30 IST
Sushma Devi, Jitan Ram Manjhi

ಸುಷ್ಮಾ ದೇವಿ, ಜಿತನ್ ರಾಮ್ ಮಾಂಝಿ | PC :  NDTV 

  • whatsapp icon

ಪಾಟ್ನಾ: ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಮೊಮ್ಮಗಳನ್ನು ಆಕೆಯ ಪತಿಯೇ ಗುಂಡು ಹಾರಿಸಿ ಹತ್ಯೆಗೈದ ಘಟನೆ ಬಿಹಾರದ ಗಯಾದಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟ ಮಹಿಳೆಯನ್ನು ಸುಷ್ಮಾ ದೇವಿ ಎಂದು ಗುರುತಿಸಲಾಗಿದೆ. ಸುಷ್ಮಾ ದೇವಿ, ಆಕೆಯ ಮಕ್ಕಳು ಹಾಗೂ ಸಹೋದರಿ ಪೂನಂ ಕುಮಾರಿ ಅತ್ರಿ ಬ್ಲಾಕ್‌ನ ವ್ಯಾಪ್ತಿಯ ಟೆಟುವಾ ಗ್ರಾಮದ ತಮ್ಮ ಮನೆಯಲ್ಲಿದ್ದ ಸಂದರ್ಭ ಈ ಘಟನೆ ನಡೆದಿದೆ.

ಗಯಾ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕೇಂದ್ರದ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮ ಖಾತೆಯ ಸಚಿವ ಮಾಂಝಿ ಘಟನೆ ಕುರಿತು ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ.

ಸುಷ್ಮಾ ಅವರ ಪತಿ ರಮೇಶ್ ಕೆಲಸ ಮುಗಿಸಿ ಮಧ್ಯಾಹ್ನ 12 ಗಂಟೆಗೆ ಮನೆಗೆ ಹಿಂದಿರುಗಿದ ಬಳಿಕ ಪತಿ-ಪತ್ನಿಯರ ನಡುವೆ ಜಗಳ ಆರಂಭವಾಯಿತು. ಈ ಸಂದರ್ಭ ರಮೇಶ್ ದೇಶಿ ನಿರ್ಮಿತ ಪಿಸ್ತೂಲ್‌ ನಿಂದ ಸುಷ್ಮಾ ಮೇಲೆ ಗುಂಡು ಹಾರಿಸಿದ ಹಾಗೂ ಅಲ್ಲಿಂದ ಪರಾರಿಯಾದ ಎಂದು ಪೂನಂ ತಿಳಿಸಿದ್ದಾರೆ.

ಇನ್ನೊಂದು ಕೊಠಡಿಯಲ್ಲಿದ್ದ ಪೂನಂ ಹಾಗೂ ಸುಷ್ಮಾ ಅವರ ಮಕ್ಕಳು ಸುಷ್ಮಾ ಅವರ ಕೋಣೆಗೆ ಧಾವಿಸಿದಾಗ ಅವರ ಮೃತದೇಹ ರಕ್ತದ ಮಡುವಿನಲ್ಲಿ ಬಿದಿತ್ತು.

‘‘ರಮೇಶ್‌ ಗೆ ಮರಣದಂಡನೆ ವಿಧಿಸುವಂತೆ ನಾವು ಆಗ್ರಹಿಸುತ್ತೇವೆ. ನನ್ನ ಸಹೋದರಿಯನ್ನು ಹತ್ಯೆಗೈದಿರುವುದಕ್ಕಾಗಿ ಆತನನ್ನು ನೇಣಿಗೆ ಹಾಕಬೇಕು’’ ಎಂದು ಪೂನಂ ಹೇಳಿದ್ದಾರೆ.

ಆರೋಪಿಯನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರೂಪಿಸಲಾಗಿದೆ ಎಂದು ಗಯಾದ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಆನಂದ್ ಕುಮಾರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News