ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಉತ್ತರ ಪ್ರದೇಶ ಪೊಲೀಸರು ಭದ್ರತೆ ಹಿಂಪಡೆದಿದ್ದಾರೆ: ಸಿಎಂ ಆದಿತ್ಯನಾಥ್ ಗೆ ಪತ್ರ ಬರೆದ ಮಾಜಿ ಕೇಂದ್ರ ಸಚಿವ ಬಲ್ಯಾನ್
ಲಕ್ನೋ : ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ರಾಜ್ಯ ಪೊಲೀಸರು ತನಗೆ ನೀಡಿದ್ದ ಭದ್ರತೆಯನ್ನು ಹಿಂಪಡೆದುಕೊಂಡಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಗೆ ಪತ್ರ ಬರೆದಿದ್ದಾರೆ.
ಮುಜಾಫರ್ ನಗರದಿಂದ ಎರಡು ಬಾರಿ ಸಂಸದರಾಗಿರುವ ಬಲ್ಯಾನ್ ಅವರು 2024ರವರೆಗೆ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆದರೆ, ಕಳೆದ ಚುನಾವಣೆಯಲ್ಲಿ ಅವರು ಕಡಿಮೆ ಅಂತರದ ಮತಗಳಿಂದ ಸೋತಿದ್ದರು.
ಮುಜಾಫರ್ ನಗರದಲ್ಲಿ ದೇವಸ್ಥಾನ ಮತ್ತು ಧರ್ಮಶಾಲೆಯ ಜಮೀನನ್ನು ಹಿಂದಿನ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿ ಮನ್ಸೂರ್ ಪುರ ಡಿಸ್ಟಿಲರಿಗೆ ಅಕ್ರಮವಾಗಿ ವರ್ಗಾವಣೆ ಮಾಡಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕೆ ನನ್ನ ಭದ್ರತೆಯನ್ನು ಹಿಂಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಲೋಕಸಭಾ ಚುನಾವಣೆಯ ವೇಳೆ ನನ್ನ ಮೇಲೆ ದಾಳಿ ನಡೆದಿರುವುದು ನಿಮಗೆ ತಿಳಿದಿದೆ. ಭವಿಷ್ಯದಲ್ಲಿ ನನ್ನ ಮೇಲೆ ದಾಳಿಯಾದರೆ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಜವಾಬ್ದಾರರಾಗುತ್ತಾರೆ. ಮಾಜಿ ಕೇಂದ್ರ ಸಚಿವರನ್ನು ಈ ರೀತಿ ನಡೆಸಿಕೊಳ್ಳುತ್ತಿದ್ದರೆ, ಸಾಮಾನ್ಯ ಬಿಜೆಪಿ ಕಾರ್ಯಕರ್ತರು ಎದುರಿಸುತ್ತಿರುವ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ ಎಂದು ಬಲ್ಯಾನ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.