ಉತ್ತರಪ್ರದೇಶ | ದೇವಾಲಯದ ಅರ್ಚಕನ ಲೈಂಗಿಕ ದೌರ್ಜನ್ಯದ ಕೃತ್ಯ ಬಹಿರಂಗಪಡಿಸುವುದಾಗಿ ಹೇಳಿದ್ದ ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ

Update: 2025-04-11 13:03 IST
ಉತ್ತರಪ್ರದೇಶ | ದೇವಾಲಯದ ಅರ್ಚಕನ ಲೈಂಗಿಕ ದೌರ್ಜನ್ಯದ ಕೃತ್ಯ ಬಹಿರಂಗಪಡಿಸುವುದಾಗಿ ಹೇಳಿದ್ದ ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ

Photo credit: X/@sitapurpolice

  • whatsapp icon

ಲಕ್ನೋ : ಉತ್ತರಪ್ರದೇಶದ ಸೀತಾಪುರದಲ್ಲಿ ನಡೆದಿದ್ದ ಪತ್ರಕರ್ತ ರಾಘವೇಂದ್ರ ಬಾಜಪೇಯ್ ಹತ್ಯೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಕೃತ್ಯಕ್ಕೆ ಸಂಬಂಧಿಸಿ ದೇವಾಲಯವೊಂದರ ಅರ್ಚಕ ಮತ್ತು ಆತನ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ಮಹೋಲಿಯಲ್ಲಿರುವ ಕರೆದೇವ್ ಬಾಬಾ ದೇವಸ್ಥಾನ ಅರ್ಚಕ ಶಿವಾನಂದ್ ಬಾಬಾ ಅಲಿಯಾಸ್ ವಿಕಾಸ್ ರಾಥೋಡ್ ಮತ್ತು ಆತನ ಸಹಚರರಾದ ನಿರ್ಮಲ್ ಸಿಂಗ್ ಮತ್ತು ಅಸ್ಲಾಂ ಘಾಜಿ ಬಂಧಿತರು. ಇಬ್ಬರು ಶೂಟರ್‌ಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.

ಮಾರ್ಚ್ 8ರಂದು ಮಹೋಲಿಯಲ್ಲಿ ಹಿಂದಿ ದಿನಪತ್ರಿಕೆ ʼದೈನಿಕ್ ಜಾಗರಣ್ ʼನಲ್ಲಿ ವರದಿಗಾರರಾಗಿದ್ದ ರಾಘವೇಂದ್ರ ಬಾಜಪೇಯ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪತ್ರಕರ್ತನ ಹತ್ಯೆ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಯುನೆಸ್ಕೋ ಮಹಾನಿರ್ದೇಶಕರು, ಪತ್ರಕರ್ತರನ್ನು ರಕ್ಷಿಸುವ ಸಮಿತಿ ಸೇರಿದಂತೆ ಹಲವಾರು ಜಾಗತಿಕ ಪತ್ರಿಕಾ ಸಂಘಗಳು ಮತ್ತು ಸಂಘಟನೆಗಳು ಪತ್ರಕರ್ತನ ಹತ್ಯೆಯನ್ನು ಖಂಡಿಸಿತ್ತು. ಪ್ರಕರಣದ ತನಿಖೆಗೆ ಪೊಲೀಸರು ಹಲವು ತಂಡಗಳನ್ನು ರಚಿಸಿದ್ದರು.

ರಾಘವೇಂದ್ರ ಬಾಜಪೇಯ್ ಕೊಲೆ ನಡೆದಿದ್ದೇಕೆ?

ರಾಘವೇಂದ್ರ ಬಾಜಪೇಯ್ ಕೊಲೆ ಪ್ರಕರಣವನ್ನು ಕೊನೆಗೂ ಉತ್ತರಪ್ರದೇಶದ ಸೀತಾಪುರ ಪೊಲೀಸರು ಭೇದಿಸಿದ್ದಾರೆ. ಮಹೋಲಿಯಲ್ಲಿರುವ ಕರೆದೇವ್ ಬಾಬಾ ದೇವಸ್ಥಾನದ ಅರ್ಚಕ ದೇವಸ್ಥಾನದ ಆವರಣದಲ್ಲಿ ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿರುವುದನ್ನು ರಾಘವೇಂದ್ರ ಬಾಜಪೇಯ್ ನೋಡಿದ್ದರು. ಕೃತ್ಯವನ್ನು ಬಹಿರಂಗಪಡಿಸುವುದಾಗಿಯೂ ಅರ್ಚಕನಿಗೆ ಹೇಳಿದ್ದರು. ಇದರಿಂದಾಗಿ ಅರ್ಚಕ ಶಿವಾನಂದ್ ಪತ್ರಕರ್ತನನ್ನೇ ಕೊಲೆಗೆ ಸಂಚು ರೂಪಿಸಿದನು. ತನ್ನ ಇಬ್ಬರು ಸಹಚರರಾದ ನಿರ್ಮಲ್ ಸಿಂಗ್ ಮತ್ತು ಅಸ್ಲಾಂ ಘಾಝಿಯನ್ನು ಮಧ್ಯವರ್ತಿಗಳಾಗಿ ಬಳಸಿಕೊಂಡು ಗುತ್ತಿಗೆ ಕೊಲೆಗಾರರಿಗೆ 4 ಲಕ್ಷ ರೂ. ಪಾವತಿಸಿದನು.

ಪೊಲೀಸರು ಹೇಳಿದ್ದೇನು?

ಸೀತಾಪುರ ಎಸ್ಪಿ ಚಕ್ರೇಶ್ ಮಿಶ್ರ ಈ ಕುರಿತು ಪ್ರತಿಕ್ರಿಯಿಸಿ, ಬಾಜಪೇಯಿ ಅವರು ಮಹೋಲಿಯಲ್ಲಿರುವ ಕರೆದೇವ್ ಬಾಬಾ ದೇವಸ್ಥಾನಕ್ಕೆ ಆಗಾಗ್ಗೆ ಬೇಟಿ ನೀಡುತ್ತಿದ್ದರು. ಅವರಿಗೆ ದೇವಸ್ಥಾನದ ಅರ್ಚಕನ ಪರಿಚಯವಾಗಿತ್ತು. ಫೆಬ್ರವರಿಯಲ್ಲಿ ಒಂದು ದಿನ ದೇವಸ್ಥಾನಕ್ಕೆ ಹೋಗಿದ್ದ ವೇಳೆ, ಅರ್ಚಕ ಬಾಲಕನಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿರುವುದು ರಾಘವೇಂದ್ರ ಬಾಜಪೇಯ್ ಕಣ್ಣಿಗೆ ಬಿದ್ದಿತ್ತು. ಅವರು ಅರ್ಚಕನನ್ನು ತರಾಟೆಗೆ ತೆಗೆದುಕೊಂಡು ಕೃತ್ಯವನ್ನು ಬಹಿರಂಗಡಿಸುವುದಾಗಿಯೂ ಹೇಳಿದ್ದರು. ಇದರಿಂದಾಗಿ ಸಾರ್ವಜನಿಕ ಅವಮಾನ ಮತ್ತು ಕ್ರಿಮಿನಲ್ ಮೊಕದ್ದಮೆಗಳಿಗೆ ಹೆದರಿ ಅರ್ಚಕ ಶಿವಾನಂದ್ ಪತ್ರಕರ್ತನ ಕೊಲೆಗೆ ಸಂಚು ರೂಪಿಸಿದ್ದಾನೆ. ತನ್ನ ಕೃತ್ಯಕ್ಕೆ ನಿರ್ಮಲ್ ಸಿಂಗ್ ಮತ್ತು ಅಸ್ಲಂ ಘಾಜಿಯ ಸಹಾಯ ಕೋರಿದ್ದು, ಇವರು ಬಾಜಪೇಯಿ ಹತ್ಯೆಗೆ ಶೂಟರ್‌ಗಳನ್ನು ನೇಮಿಸಿದ್ದರು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News