ಉತ್ತರ ಪ್ರದೇಶ | ಆಗ್ರಾದ ಜಾಮಾ ಮಸೀದಿಯೊಳಗೆ ಪ್ರಾಣಿಯೊಂದರ ಮಾಂಸ ಇಟ್ಟ ಆರೋಪ: ಓರ್ವನ ಬಂಧನ

Credit: X/@agrapolice
ಲಕ್ನೊ: ಆಗ್ರಾದ ಜಾಮಾ ಮಸೀದಿಯೊಳಗೆ ಪ್ರಾಣಿಯೊಂದರ ಮಾಂಸ ಇಟ್ಟ ಆರೋಪದ ಮೇಲೆ ಶುಕ್ರವಾರ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಪಿಯನ್ನು ಆಗ್ರಾ ನಗರದ ತೀಲಾ ನಂದ್ರಮ್ ಗ್ರಾಮದ ನಿವಾಸಿ ನಝ್ರುದ್ದೀನ್ ಎಂದು ಗುರುತಿಸಲಾಗಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆಗ್ರಾ ಪೊಲೀಸ್ ಕಮಿಷನರೇಟ್, “ ಶುಕ್ರವಾರ ಬೆಳಗ್ಗೆ ಮಂತೋಲ ಪೊಲೀಸ್ ಠಾಣೆ ವ್ಯಾಪ್ತಿಯ ಮಸೀದಿಯೊಂದರಲ್ಲಿ ಪ್ರಾಣಿಯೊಂದರ ಮಾಂಸದ ತುಂಡು ಪತ್ತೆಯಾದ ಘಟನೆ ನಡೆದಿದ್ದು, ಈ ಸಂಬಂಧ ರಚಿಸಲಾಗಿದ್ದ ಪೊಲೀಸ್ ತಂಡಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಸಿಸಿಟಿವಿ ಇತ್ಯಾದಿಗಳ ನೆರವಿನಿಂದ ಆರೋಪಿಯನ್ನು ಬಂಧಿಸಿವೆ” ಎಂದು ಹೇಳಿದೆ.
आज दिनांक 11.04.25 को थाना मंटोला क्षेत्रांतर्गत मस्जिद में मांस का टुकड़ा मिलने की घटना पर गठित पुलिस टीमों द्वारा सीसीटीवी आदि की सहायता से तत्परता से कार्यवाही करते हुए अभियुक्त को गिरफ्तार किया गया है एवं की जा रही वैधानिक कार्यवाही के संबंध में @DCPCityAgra द्वारा दी गई बाइट pic.twitter.com/ncnpMApSUI
— POLICE COMMISSIONERATE AGRA (@agrapolice) April 11, 2025
ಬಂಧಿತ ಆರೋಪಿಯನ್ನು ವಿಚಾರಣೆಗೊಳಪಡಿಸಿದ ಪೊಲೀಸರು, ಆರೋಪಿಯ ಕೃತ್ಯದ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ್ದಾರೆ. ಆದರೆ, ವಿಚಾರಣೆಯ ವೇಳೆ ಬೆಳಕಿಗೆ ಬಂದಿರುವ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.
ಆರೋಪಿಯ ಬಂಧನದ ಕುರಿತು ವಿವರಗಳನ್ನು ನೀಡಿದ ನಗರ ಉಪ ಪೊಲೀಸ್ ಆಯುಕ್ತ ಸೋನಂ ಕುಮಾರ್, ಘಟನೆಯ ಕುರಿತು ನಮಗೆ ಬೆಳಗ್ಗೆ ಸುಮಾರು 7.30ರ ವೇಳೆಗೆ ಮಾಹಿತಿ ದೊರೆಯಿತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ವ್ಯಕ್ತಿಯೊಬ್ಬ ಮಾಂಸವಿರುವ ಪೊಟ್ಟಣವೊಂದನ್ನು ಗುರುವಾರ ತಡ ರಾತ್ರಿ ಮಸೀದಿಯೊಳಗೆ ಇಟ್ಟು, ಹೊರಗೆ ಹೋಗುತ್ತಿರುವುದು ಪತ್ತೆಯಾಯಿತು ಎಂದು ತಿಳಿಸಿದ್ದಾರೆ.
ಇದಾದ ನಂತರ, ಕಾರ್ಯಾಚರಣೆಗೆ 100 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ, ಮಾಂಸದ ಪೊಟ್ಟಣವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಯಿತು ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ತನಿಖೆಯ ವೇಳೆ ಮಾಂಸದ ಪೊಟ್ಟಣವನ್ನು ಅಂಗಡಿಯಿಂದ ತರಲು ಸ್ಕೂಟಿಯೊಂದನ್ನು ಬಳಸಲಾಗಿತ್ತು ಎಂಬ ಸಂಗತಿ ತಿಳಿದು ಬಂದಿತು ಎಂದೂ ಅವರು ಹೇಳಿದ್ದಾರೆ.
ಈ ಸಂಬಂಧ ಅಂಗಡಿ ಮಾಲಕನನ್ನು ವಿಚಾರಣೆಗೊಳಪಡಿಸಿದಾಗ, ಆರೋಪಿ ನಝ್ರುದ್ದೀನ್ ಕೃತ್ಯ ಬೆಳಕಿಗೆ ಬಂದಿತು ಎಂದು ಅವರು ತಿಳಿಸಿದ್ದಾರೆ.
ಈ ಸಂಬಂಧ ಆರೋಪಿಯ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿಕೊಳ್ಳಲಾಗಿದ್ದು, ಸದ್ಯ ಆತ ಜೈಲಿನಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.