ಉತ್ತರ ಪ್ರದೇಶ | ಪತ್ನಿ ಹಾಗೂ ಸೋದರಳಿಯನ ನಡುವಿನ ಅಕ್ರಮ ಸಂಬಂಧಕ್ಕೆ ದುಬೈನಿಂದ ಮರಳಿದ್ದ ಪತಿ ಬಲಿ!

Update: 2025-04-22 18:51 IST
ಉತ್ತರ ಪ್ರದೇಶ | ಪತ್ನಿ ಹಾಗೂ ಸೋದರಳಿಯನ ನಡುವಿನ ಅಕ್ರಮ ಸಂಬಂಧಕ್ಕೆ ದುಬೈನಿಂದ ಮರಳಿದ್ದ ಪತಿ ಬಲಿ!

PC : indiatoday.in

  • whatsapp icon

ದಿಯೋರಿಯ (ಉತ್ತರ ಪ್ರದೇಶ): ಇತ್ತೀಚೆಗಷ್ಟೆ ದುಬೈನಿಂದ ಮರಳಿದ್ದ ವ್ಯಕ್ತಿಯೊಬ್ಬರು, ತಮ್ಮ ಪತ್ನಿ ಹಾಗೂ ಸೋದರಳಿಯನ ನಡುವಿನ ಅಕ್ರಮ ಸಂಬಂಧದ ಕಾರಣಕ್ಕೆ ಹತ್ಯೆಯಾಗಿರುವ ಘಟನೆ ರವಿವಾರ ಉತ್ತರ ಪ್ರದೇಶದ ದಿಯೋರಿಯ ಜಿಲ್ಲೆಯಿಂದ ವರದಿಯಾಗಿದೆ. ಸೋದರಳಿಯನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮೃತ ವ್ಯಕ್ತಿಯ ಪತ್ನಿಯು, ಸೋದರಳಿಯ ಹಾಗೂ ಆತನ ಸ್ನೇಹಿತನ ನೆರವಿನೊಂದಿಗೆ ತನ್ನ ಪತಿಯನ್ನೇ ಹತ್ಯೆಗೈದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು 37 ವರ್ಷದ ಮಾಯಿಲ್ ಪ್ರದೇಶದ ಭಟೌಲಿ ಗ್ರಾಮದ ನಿವಾಸಿ ನೌಶಾದ್ ಎಂದು ಗುರುತಿಸಲಾಗಿದ್ದು, ಆತನ ಮೃತ ದೇಹವು ತರ್ಕುಲ್ವಾಲ ಪೊಲೀಸ್ ಠಾಣೆ ವ್ಯಾಪ್ತಿಯ ಪಕ್ಡಿ ಪಟ್ಖೌಲಿ ಗ್ರಾಮದ ಬಳಿಯ ಕಟಾವಾದ ಗೋಧಿ ಹೊಲದಲ್ಲಿ ಪತ್ತೆಯಾಗಿದೆ. ಗೋಧಿಯನ್ನು ಕಟಾವು ಮಾಡಲು ಅಲ್ಲಿಗೆ ಕಟಾವು ಯಂತ್ರ ತಂದಿದ್ದ ರೈತರೊಬ್ಬರು, ಹೊಲದಲ್ಲಿ ಬ್ಯಾಗ್ ಒಂದು ಬಿದ್ದಿರುವುದನ್ನು ಕಂಡು, ಈ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ದುಬೈನಲ್ಲಿ ಕೆಲಸ ಮಾಡಿದ ನಂತರ, 10 ದಿನಗಳ ಹಿಂದಷ್ಟೆ ನೌಶಾದ್ ತಮ್ಮ ಗ್ರಾಮಕ್ಕೆ ಮರಳಿದ್ದರು. ಅವರು ತಮ್ಮ ವಯಸ್ಸಾದ ತಂದೆ, ಪತ್ನಿ ಹಾಗೂ ಕಿರಿಯ ವಯಸ್ಸಿನ ಪುತ್ರಿಯೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ. ಬ್ಯಾಗ್‌ ನೊಳಗೆ ಪತ್ತೆಯಾದ ಪಾಸ್‌ ಪೋರ್ಟ್ ಅನ್ನು ಆಧರಿಸಿ ಮೃತ ದೇಹದ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ನೌಶಾದ್‌ ರನ್ನು ಮನೆಯಲ್ಲೇ ಹತ್ಯೆಗೈದು, ಅವರು ವಿದೇಶದಿಂದ ಮರಳುವಾಗ ತಂದಿದ್ದ ಟ್ರಾಲಿ ಬ್ಯಾಗ್‌ ನಲ್ಲೇ ಅವರ ಮೃತ ದೇಹವನ್ನು ತುಂಬಿ, 60 ಕಿಮೀ ದೂರದಲ್ಲಿರುವ ಹೊಲಕ್ಕೆ ಸಾಗಿಸಲಾಗಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಈ ಸಂಬಂಧ ನೌಶಾದ್ ಮನೆಯಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದಾಗ, ಮತ್ತೊಂದು ಟ್ರಾಲಿ ಬ್ಯಾಗ್ ಮೇಲೆ ರಕ್ತದ ಕಲೆಗಳಿರುವುದು ಪತ್ತೆಯಾಗಿದೆ. ನಂತರ, ನೌಶಾದ್‌ರ ಪತ್ನಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಈ ವೇಳೆ ತಾನು ಅಕ್ರಮ ಸಂಬಂಧ ಹೊಂದಿದ್ದ ಅದೇ ಗ್ರಾಮದ ತನ್ನ ಸೋದರಳಿಯನ ಹೆಸರನ್ನು ಆಕೆ ಬಾಯಿ ಬಿಟ್ಡಿದ್ದಾಳೆ. ಸದ್ಯ ಪೊಲೀಸರು ಆತನ ಪತ್ತೆಗಾಗಿ ಶೋಧ ಕೈಗೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು, "ಪತಿಯನ್ನು ತನ್ನ ಸೋದರಳಿಯ ಹಾಗೂ ಆತನ ಸ್ನೇಹಿತನ ನೆರವಿನೊಂದಿಗೆ ಹತ್ಯೆಗೈದೆ ಎಂದು ಆರೋಪಿ ಮಹಿಳೆಯು ತಪ್ಪೊಪ್ಪಿಕೊಂಡಿದ್ದಾಳೆ. ನಾವು ಈ ಪ್ರಕರಣವನ್ನು ಕೇವಲ ಆರು ಗಂಟೆಗಳಲ್ಲೇ ಭೇದಿಸಿದ್ದರೂ, ಆರೋಪಿ ಮಹಿಳೆಯ ಸೋದರಳಿಯ ಹಾಗೂ ಆತನ ಸ್ನೇಹಿತ ಇನ್ನೂ ತಲೆ ಮರೆಸಿಕೊಂಡಿದ್ದಾರೆ" ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News