ವಂದೇ ಭಾರತ್ ಸೇರಿದಂತೆ ಎಲ್ಲ ರೈಲುಗಳಲ್ಲಿ ಎಸಿ ಕಾರ್, ಎಕ್ಸಿಕ್ಯೂಟಿವ್ ಕ್ಲಾಸ್ ದರ ಶೇ.25ರವರೆಗೆ ಕಡಿತ

Update: 2023-07-08 16:09 GMT

Photo: PTI

ಹೊಸದಿಲ್ಲಿ: ವಂದೇ ಭಾರತ ಸೇರಿದಂತೆ ಎಲ್ಲ ರೈಲುಗಳಲ್ಲಿ ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಗಳಲ್ಲಿ ಹಾಗೂ ಅನುಭೂತಿ ಮತ್ತು ವಿಸ್ಟಾಡೋಮ್ ಕೋಚ್ ಗಳಲ್ಲಿ ಪ್ರಯಾಣದರಗಳನ್ನು ಲಭ್ಯತೆಗೆ ಅನುಗುಣವಾಗಿ ಶೇ.25ರವರೆಗೆ ತಗ್ಗಿಸಲಾಗುವುದು ಎಂದು ರೈಲ್ವೆ ಮಂಡಳಿಯು ತನ್ನ ಆದೇಶದಲ್ಲಿ ತಿಳಿಸಿದೆ. ರಿಯಾಯಿತಿ ದರಗಳು ಸ್ಪರ್ಧಾತ್ಮಕ ಸಾರಿಗೆ ವಿಧಾನಗಳ ದರಗಳ ಮೇಲೂ ಅವಲಂಬಿಸಿರುತ್ತದೆ.

ಸ್ಥಳಾವಕಾಶದ ಬಳಕೆಯನ್ನು ಉತ್ತಮಗೊಳಿಸುವ ದೃಷ್ಟಿಯಿಂದ ರೈಲ್ವೆ ಸಚಿವಾಲಯವು ರೈಲ್ವೆ ವಲಯಗಳ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಿಗೆ ಅನುಭೂತಿ ಮತ್ತು ವಿಸ್ಟಾಡೋಮ್ ಕೋಚ್ ಗಳು ಸೇರಿದಂತೆ ಎಸಿ ಆಸನಗಳನ್ನು ಹೊಂದಿರುವ ಎಲ್ಲ ರೈಲುಗಳಲ್ಲಿ ರಿಯಾಯಿತಿ ದರದ ಯೋಜನೆಗಳನ್ನು ಜಾರಿಗೊಳಿಸುವ ಅಧಿಕಾರಗಳನ್ನು ನೀಡಲು ನಿರ್ಧರಿಸಿದೆ.

ಮೂಲದರದ ಶೇ.25ರವರೆಗೆ ರಿಯಾಯಿತಿಯನ್ನು ನೀಡಲಾಗುವುದು. ಅನ್ವಯಗೊಳ್ಳುವ ರಿಜರ್ವೇಷನ್, ಸೂಪರ್‌ಫಾಸ್ಟ್ ಸರ್‌ಚಾರ್ಜ್, ಜಿಎಸ್ಟಿ ಇತ್ಯಾದಿಯಂತಹ ಇತರ ಶುಲ್ಕಗಳನ್ನು ಪ್ರತ್ಯೇಕವಾಗಿ ವಿಧಿಸಲಾಗುವುದು. ಆಸನಗಳ ಲಭ್ಯತೆ ಆಧಾರದಲ್ಲಿ ಯಾವುದೇ ಅಥವಾ ಎಲ್ಲ ವರ್ಗಗಳಲ್ಲಿ ರಿಯಾಯಿತಿಯನ್ನು ಒದಗಿಸಬಹುದು ಎಂದು ರೈಲ್ವೆ ಮಂಡಳಿಯು ಆದೇಶದಲ್ಲಿ ತಿಳಿಸಿದೆ.

ಕಳೆದ 30 ದಿನಗಳಲ್ಲಿ ಶೇ.50ಕ್ಕೂ ಕಡಿಮೆ ಆಸನಗಳು ಭರ್ತಿಯಾಗಿದ್ದ ವರ್ಗಗಳನ್ನು ಹೊಂದಿರುವ ರೈಲುಗಳನ್ನು ರಿಯಾಯಿತಿಗೆ ಪರಿಗಣಿಸಲಾಗುವುದು ಎಂದು ಅದು ಹೇಳಿದೆ. ರಿಯಾಯಿತಿಯು ತಕ್ಷಣದಿಂದಲೇ ಜಾರಿಗೊಳ್ಳಲಿದೆ. ಆದರೆ ಈಗಾಗಲೇ ಆಸನಗಳನ್ನು ಕಾದಿರಿಸಿರುವ ಪ್ರಯಾಣಿಕರಿಗೆ ಶುಲ್ಕವನ್ನು ಮರುಪಾವತಿಸಲು ಅವಕಾಶವಿರುವುದಿಲ್ಲ.

ರಜಾದಿನಗಳಲ್ಲಿ ಅಥವಾ ಹಬ್ಬಗಳ ಸಂದರ್ಭದಲ್ಲಿ ಓಡಿಸಲಾಗುವ ವಿಶೇಷ ರೈಲುಗಳಿಗೆ ಈ ಯೋಜನೆಯು ಅನ್ವಯಿಸುವುದಿಲ್ಲ ಎಂದು ರೈಲ್ವೆ ಮಂಡಳಿಯು ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News