ಉತ್ತರ ಪ್ರದೇಶ: ಮುಸ್ಲಿಮ್ ವ್ಯಾಪಾರಿಗಳನ್ನು ಬಹಿಷ್ಕರಿಸುವಂತೆ ಬಲಪಂಥೀಯರು ನೀಡಿದ್ದ ಕರೆಗೆ ಬಾಂಕೆ ಬಿಹಾರಿ ಮಂದಿರದ ತಿರಸ್ಕಾರ

ಬಾಂಕೆ ಬಿಹಾರಿ ಮಂದಿರ | PC : newindianexpress.com
ಮಥುರಾ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಲಪಂಥೀಯ ಗುಂಪುಗಳು ದೇವಸ್ಥಾನಕ್ಕೆ ಸೇವೆಗಳನ್ನು ಒದಗಿಸುತ್ತಿರುವ ಮುಸ್ಲಿಮರನ್ನು ಬಹಿಷ್ಕರಿಸುವಂತೆ ನೀಡಿದ್ದ ಕರೆಯನ್ನು ವೃಂದಾವನದ ಪ್ರಸಿದ್ಧ ಬಾಂಕೆ ಬಿಹಾರಿ ಮಂದಿರವು ತಿರಸ್ಕರಿಸಿದೆ.
ಇದಕ್ಕೂ ಮುನ್ನ ಮಥುರಾ ಮತ್ತು ವೃಂದಾವನದಲ್ಲಿ ಬಲಪಂಥೀಯರು ಅಲ್ಪಸಂಖ್ಯಾತ ಸಮುದಾಯದೊಂದಿಗೆ ವ್ಯಾಪಾರ ಮಾಡಬೇಡಿ ಎಂದು ಹಿಂದೂ ಅಂಗಡಿಕಾರರು ಮತ್ತು ಯಾತ್ರಿಗಳನ್ನು ಆಗ್ರಹಿಸಿದ್ದರು. ಅಂಗಡಿಗಳ ನಾಮಫಲಕಗಳ ಮೇಲೆ ಮಾಲಿಕರ ಹೆಸರು ಬರೆಯುವಂತೆ ಅವರು ಮುಸ್ಲಿಮ್ ವ್ಯಾಪಾರಿಗಳಿಗೆ ಸೂಚಿಸಿದ್ದರು.
ಬಲಪಂಥೀಯ ಗುಂಪುಗಳ ಕರೆಗೆ ಪ್ರತಿಕ್ರಿಯಿಸಿದ ಬಾಂಕೆ ಬಿಹಾರಿ ಮಂದಿರದ ಅರ್ಚಕ ಹಾಗೂ ಆಡಳಿತ ಸಮಿತಿಯ ಸದಸ್ಯ ಜ್ಞಾನೇಂದ್ರ ಕಿಶೋರ ಗೋಸ್ವಾಮಿಯವರು, ಅದು ಪ್ರಾಯೋಗಿಕವಲ್ಲ. ಮುಸ್ಲಿಮರು, ವಿಶೇಷವಾಗಿ ಕುಶಲಕರ್ಮಿಗಳು ಮತ್ತು ನೇಕಾರರು ಮಂದಿರದೊಂದಿಗೆ ಗಾಢವಾಗಿ ಗುರುತಿಸಿಕೊಂಡಿದ್ದಾರೆ. ದಶಕಗಳಿಂದಲೂ ಬಾಂಕೆ ಬಿಹಾರಿಯ ಉಡುಪುಗಳ ನೇಯ್ಗೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಲ್ಲಿ ಹಲವರು ಬಾಂಕೆ ಬಿಹಾರಿಯಲ್ಲಿ ಬಲವಾದ ನಂಬಿಕೆಯನ್ನು ಹೊಂದಿದ್ದಾರೆ ಮತ್ತು ಮಂದಿರಕ್ಕೆ ಭೇಟಿಯನ್ನೂ ನೀಡುತ್ತಿರುತ್ತಾರೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದರು.
ವೃಂದಾವನದಲ್ಲಿ ದೇವರಿಗಾಗಿ ಕೆಲವು ಕಿರೀಟಗಳು ಮತ್ತು ಬಳೆಗಳನ್ನೂ ಮುಸ್ಲಿಮರೇ ತಯಾರಿಸಿದ್ದಾರೆ ಎಂದರು. ಗೋಸ್ವಾಮಿಯವರ ಹೇಳಿಕೆಗೆ ಹೆಚ್ಚಿನ ಅರ್ಚಕರು ಮತ್ತು ಸ್ಥಳೀಯರು ಸಹಮತ ವ್ಯಕ್ತಪಡಿಸಿದರು.
‘ನಿಜ, ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಭಯೋತ್ಪಾದಕರನ್ನು ಕಠಿಣವಾಗಿ ಶಿಕ್ಷಿಸಬೇಕು ಮತ್ತು ನಾವು ಸಂಪೂರ್ಣವಾಗಿ ಸರಕಾರದ ಜೊತೆಯಲ್ಲಿದ್ದೇವೆ. ಆದರೆ ವೃಂದಾವನದಲ್ಲಿ ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳು ಶಾಂತಿ ಮತ್ತು ಸಾಮರಸ್ಯದಿಂದ ಸಹಬಾಳ್ವೆ ನಡೆಸುತ್ತಿದ್ದಾರೆ’ ಎಂದೂ ಗೋಸ್ವಾಮಿ ಹೇಳಿದರು.
ದೇವಸ್ಥಾನದಿಂದ ಅನತಿ ದೂರದಲ್ಲಿ ‘ಸ್ಟಾರ್ ಮುಕುಟ್’ ಹೆಸರಿನ ಅಂಗಡಿಯನ್ನು ನಡೆಸುತ್ತಿರುವ ಜಾವೇದ್ ಅಲಿ, ‘ಪ್ರತಿಭಟನಾಕಾರರು ನನ್ನ ಅಂಗಡಿಗೆ ಬಂದು ನಾಮಫಲಕದ ಮೇಲೆ ಮಾಲಕನ ಹೆಸರು ಬರೆಯುವಂತೆ ಸೂಚಿಸಿದ್ದರು, ಇಲ್ಲದಿದ್ದರೆ ಜಾಗವನ್ನು ತೆರವು ಮಾಡುವಂತೆ ಎಚ್ಚರಿಕೆ ನೀಡಿದ್ದರು. ಅರ್ಚಕರ ನಿಲುವು ನಮಗೆ ಬಹು ಅಗತ್ಯವಾದ ಬೆಂಬಲವನ್ನು ನೀಡಿದೆ. ನಾನು 20 ವರ್ಷಗಳಿಗೂ ಹೆಚ್ಚು ಸಮಯದಿಂದ ಈ ಅಂಗಡಿಯನ್ನು ನಡೆಸುತ್ತಿದ್ದೇನೆ. ನನ್ನ ತಂದೆ ಇಲ್ಲಿ ದರ್ಜಿಯಾಗಿ ಕೆಲಸ ಮಾಡುತ್ತಿದ್ದರು. ಗ್ರಾಹಕರು ಇಲ್ಲಿ ವಸ್ತುಗಳನ್ನು ಖರೀದಿಸಿದಾಗೆಲ್ಲ ನಾನು ಅವರಿಗೆ ನನ್ನ ಹೆಸರು ಮತ್ತು ಮೊಬೈಲ್ ಸಂಖ್ಯೆ ಮುದ್ರಿತವಾಗಿರುವ ರಸೀದಿಯನ್ನು ನೀಡುತ್ತೇನೆ. ನಾವು ಮರೆ ಮಾಡುವಂತಹದು ಏನೂ ಇಲ್ಲ’ ಎಂದು ಹೇಳಿದರು.
ಅಲಿ ಅಂಗಡಿಯ ಪಕ್ಕದಲ್ಲಿಯೇ ವ್ಯಾಪಾರ ನಡೆಸುತ್ತಿರುವ ನಿಖಿಲ್ ಅಗರವಾಲ್ ಅವರು, ಈ ಎಲ್ಲ ವರ್ಷಗಳಲ್ಲಿ ನಮಗೆಂದಿಗೂ ಸಮಸ್ಯೆ ಎದುರಾಗಿಲ್ಲ ಮತ್ತು ನಾವು ಪರಸ್ಪರರನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ವಿಧ್ಯುಕ್ತ ದೂರು ಈವರೆಗೆ ಬಂದಿಲ್ಲ ಎಂದು ಪೋಲಿಸರು ತಿಳಿಸಿದರು.