ಉತ್ತರಪ್ರದೇಶ | ಬಾಟಲಿಯಲ್ಲಿ ಪೆಟ್ರೋಲ್ ನೀಡಲು ನಿರಾಕರಿಸಿದ ಬಂಕ್ ಮ್ಯಾನೇಜರ್‌ ನನ್ನು ಗುಂಡಿಕ್ಕಿ ಹತ್ಯೆ

Update: 2025-04-10 21:30 IST
ಉತ್ತರಪ್ರದೇಶ | ಬಾಟಲಿಯಲ್ಲಿ ಪೆಟ್ರೋಲ್ ನೀಡಲು ನಿರಾಕರಿಸಿದ ಬಂಕ್ ಮ್ಯಾನೇಜರ್‌ ನನ್ನು ಗುಂಡಿಕ್ಕಿ ಹತ್ಯೆ

PC : X 

  • whatsapp icon

ಬುಲಂದ್‌ಶಹರ್: ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿಕೊಡಲು ನಿರಾಕರಿಸಿದ್ದಕ್ಕಾಗಿ ದುಷ್ಕರ್ಮಿಗಳಿಬ್ಬರು ಪೆಟ್ರೋಲ್‌ ಬಂಕ್‌ ನ ಮ್ಯಾನೇಜರ್‌ ನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಉತ್ತರಪ್ರದೇಶದ ಬುಲಂದಶಹರ್ ಜಿಲ್ಲೆಯ ಸಿಕಂದರಬಾದ್‌ನಲ್ಲಿ ವರದಿಯಾಗಿದೆ.

ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಮೋಟಾರ್‌ ಸೈಕಲ್‌ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ವಾಹನಕ್ಕೆ ಪೆಟ್ರೋಲ್ ತುಂಬಿಸಿದರು. ಆನಂತರ ಅವರು ಪ್ಲಾಸ್ಟಿಕ್ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿಕೊಡುವಂತೆ ಸಿಬ್ಬಂದಿಗೆ ತಿಳಿಸಿದಾಗ ಅದಕ್ಕವರು ನಿರಾಕರಿಸಿದರು. ಆನಂತರ ಅವರು ಪೆಟ್ರೋಲ್‌ ಬಂಕ್‌ ನ ಮ್ಯಾನೇಜರ್ ರಾಜುಶರ್ಮಾ ಅವರಲ್ಲಿಗೆ ತೆರಳಿ, ಪೆಟ್ರೋಲ್‌ ಗಾಗಿ ಒತ್ತಾಯಿಸಿದರು.

ಆದರೆ ಶರ್ಮಾ ಕೂಡಾ ಬೈಕ್ ಸವಾರರ ಬೇಡಿಕೆಯನ್ನು ನಿರಾಕರಿಸಿದಾಗ ವಾಗ್ವಾದವಾಯಿತು. ಈ ಸಂದರ್ಭದಲ್ಲಿ ಬೈಕ್ ಸವಾರರು ಶರ್ಮಾ ಅವರಿಗೆ ಪಿಸ್ತೂಲಿನಿಂದ ಗುಂಡಿ ಹಾರಿಸಿ, ಸ್ಥಳದಿಂದ ಪರಾರಿಯಾಗಿದ್ದರು.

ಗುಂಡಿನೇಟಿನಿಂದ ಗಂಭೀರ ಗಾಯಗೊಂಡ ಶರ್ಮಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿರುವಾಗಲೇ ಕೊನೆಯುಸಿರೆಳೆದರು ಎಂದು ಹಿರಿಯ ಪೊಲೀಸ್ ಅಧೀಕ್ಷಕ ಶ್ಲೋಕ್ ಕುಮಾರ್ ತಿಳಿಸಿದ್ದಾರೆ.

ಸಿಸಿಟಿವಿ ಕ್ಯಾಮರಾದ ವೀಡಿಯೊ ನೆರವಿನಿಂದ ಆರೋಪಿಗಳನ್ನು ಗುರುತಿಸಲಾಗಿದ್ದು, ಅವರ ಬಂಧನಕ್ಕೆ ಜಾಲವನ್ನು ಬೀಸಲಾಗಿದೆ ಎಂದು ಶ್ಲೋಕ್ ಕುಮಾರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News