ಉತ್ತರ ಪ್ರದೇಶ | ಸಾಮೂಹಿಕ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಆರೋಪದಲ್ಲಿ ಬಿಜೆಪಿ ಶಾಸಕ, ಇತರ 15 ಜನರ ವಿರುದ್ಧ ಪ್ರಕರಣ
ಲಕ್ನೋ: ಉತ್ತರ ಪ್ರದೇಶದ ಬದಾಯುನ್‌ನಲ್ಲಿ ಸಾಮೂಹಿಕ ಅತ್ಯಾಚಾರ,ವಂಚನೆ,ಕ್ರಿಮಿನಲ್ ಬೆದರಿಕೆ ಆರೋಪಗಳಡಿ ಬಿಜೆಪಿ ಶಾಸಕ ಹರೀಶಚಂದ್ರ ಶಾಖ್ಯ,ಅವರ ಇಬ್ಬರು ಸೋದರರು ಮತ್ತು ಇತರ 13 ಜನರ ವಿರುದ್ಧ ಪೋಲಿಸರು ಎಫ್‌ಐಆರ್ ದಾಖಲಿಸಿದ್ದಾರೆ.
10 ದಿನಗಳ ಹಿಂದೆ ವಿಶೇಷ ನ್ಯಾಯಾಲಯವು ನೀಡಿದ್ದ ನಿರ್ದೇಶನದ ಮೇರೆಗೆ ಪೋಲಿಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಈ ಸಂಬಂಧ ಉಝಾನಿ ಕೊತ್ವಾಲಿ ಪ್ರದೇಶದ ಗ್ರಾಮಸ್ಥನೋರ್ವ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ್ದ. ಬದಾಯುನ್‌ನ ಪ್ರಮುಖ ಸ್ಥಳದಲ್ಲಿರುವ ಜಮೀನನ್ನು ಮಾರಾಟ ಮಾಡುವಂತೆ ಶಾಖ್ಯ ಮತ್ತು ಅವರ ಸಹಚರರು 2022ರಿಂದಲೂ ತನ್ನ ಕುಟುಂಬದ ಮೇಲೆ ಒತ್ತಡವನ್ನು ಹೇರಿದ್ದರು. ಬಿಘಾವೊಂದಕ್ಕೆ 80 ಲಕ್ಷ ರೂ.ದರದಲ್ಲಿ ಜಮೀನು ಮಾರಾಟ ಮಾಡುವಂತೆ ಬಿಲ್ಸಿ ಶಾಸಕ ಶಾಖ್ಯ ಒತ್ತಾಯಿಸಿದ್ದರು. ಅದರಂತೆ ಜಮೀನಿನ ಮೌಲ್ಯ 17 ಕೋಟಿ ರೂ.ಗಳಾಗಿದ್ದವು. ಆದರೆ ಒತ್ತಡಕ್ಕೊಳಗಾಗಿ 16.50 ಕೋಟಿ ರೂ.ಗೆ ಜಮೀನು ಮಾರಾಟಕ್ಕೆ ತನ್ನ ಕುಟುಂಬ ಒಪ್ಪಿಕೊಂಡಿತ್ತು. ಒಪ್ಪಂದದಂತೆ ಶೇ.40ರಷ್ಟು ಹಣವನ್ನು ಮುಂಗಡವಾಗಿ ಮತ್ತು ಉಳಿದ ಹಣವನ್ನು ಕ್ರಯ ಪತ್ರದ ಸಂದರ್ಭದಲ್ಲಿ ನೀಡಬೇಕಿತ್ತು. ಆದರೆ ಕುಟುಂಬಕ್ಕೆ ಕೇವಲ ಒಂದು ಲಕ್ಷ ರೂ.ಮುಂಗಡ ನೀಡಲಾಗಿತ್ತು ಮತ್ತು ಬಳಿಕ ಶಾಸಕರ ಸಹಚರರು ಜಮೀನನ್ನು ವರ್ಗಾಯಿಸುವಂತೆ ತನ್ನ ಕುಟುಂಬದ ಮೇಲೆ ಒತ್ತಡ ಹೇರತೊಡಗಿದ್ದರು. ಆದರೆ ಪೂರ್ಣ ಮೊತ್ತ ಪಾವತಿಯಾಗದೇ ಕ್ರಯ ಪತ್ರಕ್ಕೆ ತನ್ನ ಕುಟುಂಬ ನಿರಾಕರಿಸಿತ್ತು. ಇದಕ್ಕೆ ಪ್ರತಿಯಾಗಿ ತಮ್ಮ ವಿರುದ್ಧ ಎರಡು ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿತ್ತು ಎಂದು ಗ್ರಾಮಸ್ಥ ತನ್ನ ದೂರಿನಲ್ಲಿ ತಿಳಿಸಿದ್ದ.
ಶಾಖ್ಯ ಮತ್ತು ಸಹಚರರು ಕೇವಲ ನಾಲ್ಕು ಕೋಟಿ ರೂ.ಗೆ ಜಮೀನು ಮಾರಾಟ ಒಪ್ಪಂದಕ್ಕೆ ಹೆಬ್ಬೆರಳ ಮುದ್ರೆಯೊತ್ತುವಂತೆಯೂ ತನ್ನ ಕುಟುಂಬದವರನ್ನು ಬಲವಂತಗೊಳಿಸಿದ್ದರು ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.
ವಿಷಯವನ್ನು ಇತ್ಯರ್ಥಗೊಳಿಸಲು ತನ್ನ ಪತ್ನಿ ಸೆ.17ರಂದು ಶಾಸಕರನ್ನು ಭೇಟಿಯಾಗಲು ತೆರಳಿದ್ದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿತ್ತು ಎಂದೂ ದೂರುದಾರ ಆರೋಪಿಸಿದ್ದಾನೆ.
ಎಲ್ಲ ಆರೋಪಿಗಳು ಬದಾಯುನ್ ನಿವಾಸಿಗಳಾಗಿದ್ದಾರೆ.
ತನ್ನ ವಿರುದ್ಧದ ಆರೋಪಗಳು ಆಧಾರರಹಿತ ಎಂದು ಬಣ್ಣಿಸಿರುವ ಶಾಖ್ಯ, ಇದು ತನ್ನ ವರ್ಚಸ್ಸಿಗೆ ಕಳಂಕ ತರುವ ಪಿತೂರಿಯ ಭಾಗವಾಗಿದೆ. ಜಮೀನು ವ್ಯವಹಾರಕ್ಕೂ ತನಗೂ ಯಾವುದೇ ಸಂಬಂಧವಿಲ್ಲ,ತಾನೆಂದಿಗೂ ದೂರುದಾರ ಕುಟುಂಬವನ್ನು ಭೇಟಿಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.