ಉತ್ತರ ಪ್ರದೇಶ | ತಂದೆಯ ಹಂತಕನನ್ನು 15 ವರ್ಷಗಳ ಬಳಿಕ ಕೊಂದು ಸೇಡು ತೀರಿಸಿಕೊಂಡ ಮಕ್ಕಳು !

ಸಾಂದರ್ಭಿಕ ಚಿತ್ರ
ಲಕ್ನೋ: ಸೋದರರು 15 ವರ್ಷಗಳ ಹಿಂದೆ ತಮ್ಮ ತಂದೆಯನ್ನು ಹತ್ಯೆಗೈದಿದ್ದ ವ್ಯಕ್ತಿಯನ್ನು ಸಾರ್ವಜನಿಕರ ಕಣ್ಣೆದುರೇ ಕೊಂದು ಸೇಡು ತೀರಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಬಹನಗಾಂವ್ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಮಹಿಳೆಯರು ಸೇರಿದಂತೆ 18 ಜನರನ್ನು ಪೋಲಿಸರು ಮಂಗಳವಾರ ಬಂಧಿಸಿದ್ದಾರೆ.
ಪೋಲಿಸರ ಪ್ರಕಾರ ರಾಮಪಾಲ್ ಎಂಬಾತನ ಹತ್ಯೆಗಾಗಿ ಸರಪಂಚ ಮಹಾವತ್(48) ಮತ್ತು ಆತನ ಸೋದರ ಬಬ್ಲೂ ಜೈಲುಶಿಕ್ಷೆಗೆ ಗುರಿಯಾಗಿದ್ದರು. 13 ವರ್ಷಗಳ ಬಳಿಕ ಕೋವಿಡ್ ಸಂದರ್ಭದಲ್ಲಿ ಮಹಾವತ್ ಬಿಡುಗಡೆಗೊಂಡಿದ್ದ. ಆಗಿನಿಂದ ದಿನಗೂಲಿ ಕಾರ್ಮಿಕನಾಗಿ ಲಖಿಂಪುರ ಖೇರಿಯಲ್ಲಿ ವಾಸವಾಗಿದ್ದ ಮಹಾವತ್ ಹರ್ದೋಯಿಯಲ್ಲಿನ ತನ್ನ ಹುಟ್ಟೂರು ಬಹನಗಾಂವ್ ಗ್ರಾಮಕ್ಕೆ ಭೇಟಿ ನೀಡುವುದರಿಂದ ದೂರವಿದ್ದ.
ಎ.7ರಂದು ಮಹಾವತ್ ತನ್ನ ಹುಟ್ಟೂರಿಗೆ ಭೇಟಿ ನೀಡಿದ್ದು,ಆತನನ್ನು ಗುರುತಿಸಿದ್ದ ಗ್ರಾಮಸ್ಥನೋರ್ವ ರಾಮ್ ಪಾಲ್ ಕುಟುಂಬಕ್ಕೆ ಮಾಹಿತಿ ನೀಡಿದ್ದ. ಇದು ಗೊತ್ತಾದಾಗ ಮಹಾವತ್ ಮನೆಯೊಂದರಲ್ಲಿ ಅಡಗಿಕೊಳ್ಳಲು ಪ್ರಯತ್ನಿಸಿದ್ದ. ಆದರೆ ರಾಮಪಾಲ್ ನ ಪುತ್ರರು ಮತ್ತು ಸಂಬಂಧಿಗಳು ಆತನನ್ನು ಹೊರಗೆಳೆದು ದೊಣ್ಣೆಗಳಿಂದ ಥಳಿಸಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೋಲಿಸರು ಆತನನ್ನು ಗುಂಪಿನಿಂದ ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರಾದರೂ ತೀವ್ರವಾಗಿ ಗಾಯಗೊಂಡಿದ್ದ ಆತ ಆ ವೇಳೆಗಾಗಲೇ ಮೃತಪಟ್ಟಿದ್ದ.
ಮಹಾವತ್‌ನ ಪತ್ನಿ ನಿರ್ಮಲ ದೇವಿ ತನ್ನ ದೂರಿನಲ್ಲಿ 12 ಜನರನ್ನು ಹೆಸರಿಸಿದ್ದು, ಹತ್ಯೆಯಲ್ಲಿ ಇನ್ನೂ 25-30 ಅಪರಿಚಿತ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾಳೆ.
ಅರ್ಧ ಡಝನ್ ಗೂ ಅಧಿಕ ಮಹಿಳೆಯರು ಸೇರಿದಂತೆ 18 ಜನರನ್ನು ಬಂಧಿಸಿರುವ ಪೋಲಿಸರು ಇತರ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.