ಉತ್ತರ ಪ್ರದೇಶ | ಅಕ್ಕಿ ಗಿರಣಿಯ ಒಣಗಿಸುವ ಯಂತ್ರ ಹೊರ ಸೂಸಿದ ಹೊಗೆ ಸೇವಿಸಿ ಐವರು ಮೃತ್ಯು

ಸಾಂದರ್ಭಿಕ ಚಿತ್ರ
ಬಹರಾಯಿಚ್ : ಇಲ್ಲಿನ ಅಕ್ಕಿ ಗಿರಣಿಯೊಂದರ ದೋಷಪೂರಿತ ಒಣಗಿಸುವ ಯಂತ್ರದಿಂದ ಶುಕ್ರವಾರ ಸೂಸಿದ ಹೊಗೆ ಸೇವಿಸಿ ಕನಿಷ್ಠ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಗೆ ಸೇವಿಸಿ ಇತರ ಮೂವರು ಕಾರ್ಮಿಕರು ಪಜ್ಞೆ ಕಳೆದುಕೊಂಡಿದ್ದಾರೆ. ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು.
ಒಣಗಿಸುವ ಯಂತ್ರದ ತಾಂತ್ರಿಕ ದೋಷದಿಂದಾಗಿ ಹೊಗೆ ಹೊರ ಸೂಸಲು ಆರಂಭವಾಯಿತು. ಹೊಗೆ ಸೇವನೆಯಿಂದ ಮೂವರಿಗೆ ಉಸಿರಾಟದ ತೊಂದರೆ ಉಂಟಾಯಿತು ಎಂದು ಪ್ರಾಥಮಿಕ ತನಿಖೆ ತಿಳಿಸಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಇಲ್ಲಿನ ರಾಜ್‌ಗರಿಯಾದಲ್ಲಿರುವ ಅಕ್ಕಿ ಗಿರಣಿಯ ಒಣಗಿಸುವ ಯಂತ್ರದಿಂದ ಹೊಗೆ ಹೊರ ಸೂಸುತ್ತಿರುವುದನ್ನು ಪರಿಶೀಲಿಸಲು ಹಲವು ಕಾರ್ಮಿಕರು ಬೆಳಗ್ಗೆ ತೆರಳಿದ್ದರು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಮಾನಂದ್ ಪ್ರಸಾದ್ ಕುಶ್ವಾಹ ತಿಳಿಸಿದ್ದಾರೆ.
ಹೊಗೆ ಎಷ್ಟು ತೀವ್ರವಾಗಿತ್ತೆಂದರೆ, ಅಲ್ಲಿದ್ದ ಎಲ್ಲಾ ಕಾರ್ಮಿಕರು ಪ್ರಜ್ಞೆ ಕಳೆದುಕೊಂಡರು. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಅಗ್ನಿ ಶಾಮಕ ದಳದ ತಂಡ ಸ್ಥಳಕ್ಕೆ ಧಾವಿಸಿತು. ಸಂತ್ರಸ್ತ ಕಾರ್ಮಿಕರನ್ನು ತೆರವುಗೊಳಿಸಿತು. ಅವರನ್ನು ಜಿಲ್ಲಾಸ್ಪತ್ರೆಗೆ ಕೊಂಡೊಯ್ದು ದಾಖಲಿಸಿತು. ಆದರೆ, ಅವರಲ್ಲಿ ಐವರು ದಾರಿಯಲ್ಲಿಯೇ ಮೃತಪಟ್ಟರು. ಇತರ ಮೂವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.