"ವಂದೇ ಭಾರತ್ ಗೆ ನೀಡಿದ ಗಮನ ಬಡವರ ರೈಲುಗಳಿಗೆ ಏಕಿಲ್ಲ?": ರೈಲ್ವೇ ಸಚಿವರ ಪ್ರತಿಕ್ರಿಯೆ ಹೀಗಿದೆ..
ಹೊಸದಿಲ್ಲಿ: ಸೋಮವಾರ ಮಂಡಿಸಿದ ಆರ್ಥಿಕ ಸಮೀಕ್ಷೆ ವರದಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ರೈಲ್ವೆ ಇಲಾಖೆಯ ಬಂಡವಾಳ ವೆಚ್ಚ ಶೇಕಡ 77ರಷ್ಟು ಹೆಚ್ಚಿದ್ದು, ಹೊಸ ಹಳಿಗಳ ನಿರ್ಮಾಣ, ಗೇಜ್ ಪರಿವರ್ತನೆ ಮತ್ತು ದ್ವಿಪಥಗೊಳಿಸುವ ಕಾಮಗಾರಿಗಳ ಮೇಲೆ ದೊಡ್ಡ ಪ್ರಮಾಣದ ಹೂಡಿಕೆ ಮಾಡಲಾಗಿದೆ.
2019-20ರಲ್ಲಿ ಇದ್ದ ಬಂಡವಾಳ ವೆಚ್ಚ 1.48 ಲಕ್ಷ ಕೋಟಿಯಿಂದ 2023-24ರಲ್ಲಿ 2.62 ಲಕ್ಷ ಕೋಟಿಗೆ ಹೆಚ್ಚಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2014ರ ಬಳಿಕ ರೈಲ್ವೆ ಕ್ಷೇತ್ರದಲ್ಲಿ ಭಾರಿ ಪ್ರಗತಿ ಸಾಧಿಸಲಾಗಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಸಮರ್ಥಿಸಿಕೊಂಡಿದ್ದಾರೆ. ಆದರೆ ರೈಲ್ವೆ ಕೇವಲ ವಂದೇ ಭಾರತ್ಗೆ ಗಮನ ಹರಿಸಿ, ಬಡವರ ರೈಲುಗಳಿಗೆ ಏಕೆ ಗಮನ ಹರಿಸುತ್ತಿಲ್ಲ ಎಂದು ಪ್ರಶ್ನಿಸಿದಾಗ, "ನಮಗೆ ಕಡಿಮೆ ಆದಾಯದ ದೊಡ್ಡ ವರ್ಗ ಆಧಾರವಾಗಿದೆ. ಅವರ ಬೇಡಿಕೆಗೆ ನಾವು ಸ್ಪಂದಿಸುತ್ತೇವೆ ಹಾಗೂ 'ಏಸ್ಪಿರೇಷನಲ್ ಕ್ಲಾಸ್' ಎಂಬ ವರ್ಗ ಸೃಷ್ಟಿಯಾಗಿದ್ದು, ಈ ವರ್ಗದ ಬೇಡಿಕೆಗಳನ್ನೂ ಈಡೇರಿಸಬೇಕಾಗುತ್ತದೆ. ಹೀಗೆ ಎರಡೂ ವರ್ಗಗಳಿಗೆ ಸೌಲಭ್ಯ ಕಲ್ಪಿಸುತ್ತೇವೆ" ಎಂದು ಹೇಳಿದರು.
ವಂದೇ ಭಾರತ್ ರೈಲುಗಳಲ್ಲಿ ಹಲವು ವಿಶೇಷ ಸೌಲಭ್ಯಗಳಿದ್ದು, ಕವಚ್ ರಕ್ಷಣೆ, ತ್ವರಿತ ವೇಗವರ್ಧನೆ ಮತ್ತು 160 ಕಿಲೋಮೀಟರ್ ವರೆಗೆ ಸೆಮಿ ಹೈಸ್ಪೀಡ್ ಕಾರ್ಯಾಚರನೆ, ಸಂಪೂರ್ಣ ಮುಚ್ಚಿನ ಗ್ಯಾಂಗ್ ವೆ ಮತ್ತು ಪ್ರಯಾಣಿಕರ ಮುಕ್ತ ಚಲನೆಗೆ ಅವಕಾಶ, ಸ್ವಯಂಚಾಲಿತ ಪ್ಲಗ್ ಡೋರ್, ಆರಾಮದಾಯಕ ಆಸನಗಳು ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ನಲ್ಲಿ ತಿರುಗು ಕುರ್ಚಿ ಮತ್ತಿತರ ಸೌಲಭ್ಯಗಳು ಸೇರಿವೆ.