ನ್ಯಾಯಾಲಯಗಳು ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ: ನ್ಯಾಯಾಂಗದ ವಿರುದ್ಧ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ವಾಗ್ದಾಳಿ

ಉಪ ರಾಷ್ಟ್ರಪತಿ ಜಗದೀಪ್ ಧನಕರ್ | PTI
ಹೊಸದಿಲ್ಲಿ: ಮಸೂದೆಗಳಿಗೆ ಅಂಕಿತ ಹಾಕಲು ಗಡುವು ವಿಧಿಸಿ, ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬೆನ್ನಿಗೇ, "ನ್ಯಾಯಾಲಯಗಳು ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ" ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ನ್ಯಾಯಾಂಗದ ವಿರುದ್ಧ ಕಟುವಾದ ಪ್ರತಿಕ್ರಿಯೆ ನೀಡಿದ್ದಾರೆ.
"ಸುಪ್ರೀಂ ಕೋರ್ಟ್‌ಗೆ ಸಂವಿಧಾನದ 142ನೇ ವಿಧಿಯಡಿ ನೀಡಲಾಗಿರುವ ವಿಶೇಷಾಧಿಕಾರವು, ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ನ್ಯಾಯಾಂಗದ ಪಾಲಿಗೆ ಪ್ರಜಾಸತ್ತಾತ್ಮಕ ಶಕ್ತಿಗಳ ವಿರುದ್ಧದ ಪರಮಾಣು ಕ್ಷಿಪಣಿಯಾಗಿ ಬದಲಾಗಿದೆ" ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭೆಯ ಆರನೆ ಬ್ಯಾಚ್‌ನ ಇಂಟರ್ನ್‌ಗಳನ್ನುದ್ದೇಶಿಸಿ ಮಾತನಾಡಿದ ಉಪ ರಾಷ್ಟ್ರಪತಿ ಜಗದೀಪ್ ಧನಕರ್, ದಿಲ್ಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ ಯಶ್ವಂತ್ ವರ್ಮರ ನಿವಾಸದಲ್ಲಿ ದೊರೆತಿದ್ದ ಬೃಹತ್ ಪ್ರಮಾಣದ ನೋಟಿನ ಕಂತೆಗಳ ಕುರಿತು ಪ್ರಸ್ತಾಪಿಸಿದರು. "ಮಾರ್ಚ್ 14 ಹಾಗೂ 15ರ ರಾತ್ರಿ ಹೊಸ ದಿಲ್ಲಿಯ ನ್ಯಾಯಾಧೀಶರೊಬ್ಬರ ನಿವಾಸದಲ್ಲಿ ಈ ಘಟನೆ ಜರುಗಿತ್ತು. ಏಳು ದಿನಗಳ ಕಾಲ ಈ ಕುರಿತು ಯಾರಿಗೂ ತಿಳಿದಿರಲಿಲ್ಲ. ಈ ಕುರಿತು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಈ ವಿಳಂಬ ವಿವರಣಾರ್ಹವೆ ಅಥವಾ ಖಂಡನೀಯವೆ? ಈ ಘಟನೆ ಕೆಲವು ಮೂಲಭೂತ ಪ್ರಶ್ನೆಗಳನ್ನೆತ್ತುವುದಿಲ್ಲವೆ? ಇನ್ಯಾವುದೇ ಸಾಮಾನ್ಯ ಪರಿಸ್ಥಿತಿಯಲ್ಲಿ ಹಾಗೂ ಸಾಮಾನ್ಯ ಪರಿಸ್ಥಿತಿಯನ್ನು ವ್ಯಾಖ್ಯಾನಿಸುವ ನೆಲದ ಕಾನೂನಿನಡಿ ಈ ಘಟನೆ ಜರುಗಿದ್ದರೆ, ಪರಿಸ್ಥಿತಿಯೇ ಭಿನ್ನವಾಗಿರುತ್ತಿತ್ತು. ಆದರೆ, ಈ ಘಟನೆಯು ಮಾರ್ಚ್ 21ರಂದು ದಿನಪತ್ರಿಕೆಯೊಂದರಿಂದ ಮಾತ್ರ ಬೆಳಕಿಗೆ ಬಂದಿತು. ಈ ಸುದ್ದಿಯಿಂದ ಇಡೀ ದೇಶದ ಜನತೆ ಹಿಂದೆಂದೂ ಆಗಿರದಷ್ಟು ಆಘಾತಕ್ಕೆ ಈಡಾದರು" ಎಂದು ಹೇಳಿದರು.
"ಸಂವಿಧಾನವು ಭಾರತದ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಗೆ ಮಾತ್ರ ಪ್ರಾಸಿಕ್ಯೂಷನ್‌ನಿಂದ ರಕ್ಷಣೆ ಒದಗಿಸಿದೆ. ಹಾಗಾದರೆ, ಒಂದು ವರ್ಗವು ಈ ಕಾನೂನನ್ನು ಮೀರಿ ರಕ್ಷಣೆ ಪಡೆದಿರುವುದಾದರೂ ಹೇಗೆ? ಇದರ ದುಷ್ಪರಿಣಾಮಗಳು ಪ್ರತಿಯೊಬ್ಬರ ಮೇಲೂ ಆಗುತ್ತಿದೆ. ಇದರಿಂದಾಗಿ ಪ್ರತಿ ಭಾರತೀಯರು, ಹಿರಿಯ ನಾಗರಿಕರು ಹಾಗೂ ಯುವಕರು ಕಳವಳಗೊಂಡಿದ್ದಾರೆ" ಎಂದು ಅವರು ಆತಂಕ ವ್ಯಕ್ತಪಡಿಸಿದರು.