Fact Check : ಇರಾಕ್‌ನಲ್ಲಿ ಮುಸ್ಲಿಂ ವ್ಯಕ್ತಿ ಬಾಲಕಿಯನ್ನು ವಿವಾಹವಾಗಿದ್ದಾರೆಂಬುವುದು ಸುಳ್ಳು!

Update: 2025-04-13 22:27 IST
Editor : Ismail | Byline : ಕೃಪೆ: altnews.in
Fact Check : ಇರಾಕ್‌ನಲ್ಲಿ ಮುಸ್ಲಿಂ ವ್ಯಕ್ತಿ ಬಾಲಕಿಯನ್ನು ವಿವಾಹವಾಗಿದ್ದಾರೆಂಬುವುದು ಸುಳ್ಳು!

PC : altnews.in

  • whatsapp icon

ಇರಾಕ್‌ನಲ್ಲಿ 9 ವರ್ಷದ ಬಾಲಕಿಯ ವಿವಾಹಕ್ಕೆ ಅನುಮತಿಸಲಾಗುತ್ತಿದೆ ಎಂದು ಹೇಳಿಕೊಂಡು ಅಪ್ರಾಪ್ತ ಬಾಲಕಿಯೋರ್ವಳು ವಯಸ್ಕ ಪುರುಷನಿಗೆ ಚುಂಬಿಸುತ್ತಿರುವ ವೀಡಿಯೋವೊಂದನ್ನು ವೈರಲ್ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಪೋಸ್ಟ್ ಹೇಳುವಂತೆ ಇರಾಕ್‌ನಲ್ಲಿ ಅಪ್ರಾಪ್ತ ಬಾಲಕಿಯ ವಿವಾಹಕ್ಕೆ ಅನುಮತಿಸಲಾಗುತ್ತಿದೆಯಾ? 9 ವರ್ಷದ ಬಾಲಕಿಯನ್ನು ಇರಾಕ್‌ನಲ್ಲಿ ಮುಸ್ಲಿಂ ಯುವಕನೋರ್ವ ವಿವಾವಾಗಿರುವುದು ನಿಜವೇ? ವಾಸ್ತವವೇನು?

ಇರಾಕ್ ಸಂಸತ್ತು 2025ರ ಜನವರಿ 21ರಂದು ದೇಶದ ʼವೈಯಕ್ತಿಕ ಸ್ಥಿತಿ ಕಾನೂನಿʼಗೆ ತಿದ್ದುಪಡಿಗಳನ್ನು ತಂದಿದೆ. ಈ ಮೂಲಕ ವಿವಾಹ ಸೇರಿದಂತೆ ಕೌಟುಂಬಿಕ ವಿಷಯಗಳಲ್ಲಿ ಇಸ್ಲಾಮಿಕ್ ನ್ಯಾಯಾಲಯಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಿತು. ತಿದ್ದುಪಡಿ ಈ ಹಿಂದೆ ನಿಗದಿಪಡಿಸಿದ ಮದುವೆಯ ಕನಿಷ್ಠ ವಯಸ್ಸನ್ನು ಬದಲಾಯಿಸುತ್ತವೆ. ಇದರ ಬೆನ್ನಲ್ಲೇ ಇರಾಕ್‌ನಲ್ಲಿ 9 ವರ್ಷದ ಬಾಲಕಿಯ ವಿವಾಹಕ್ಕೆ ಅನುಮತಿಸಲಾಗುತ್ತಿದೆ ಎಂದು ಹೇಳಿಕೊಂಡು ಅಪ್ರಾಪ್ತ ಬಾಲಕಿಯೋರ್ವಳು ವಯಸ್ಕ ಪುರುಷನಿಗೆ ಚುಂಬಿಸುತ್ತಿರುವ ವೀಡಿಯೋವೊಂದನ್ನು ವೈರಲ್ ಮಾಡಲಾಗಿದೆ. ಈ ಕುರಿತ ವೀಡಿಯೊವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.

ಕಾನ್ಕಾರ್ಡಿಯಾ ವಿಶ್ವವಿದ್ಯಾನಿಲಯದ ಜಾನ್ ಮೋಲ್ಸನ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಪ್ರೊಫೆಸರ್ ಗಾಡ್ ಸಾದ್, ಮಹಮೂದ್ ಎಂಬವರ ಪೋಸ್ಟ್ ಅನ್ನು ಉಲ್ಲೇಖಿಸಿ-ಟ್ವೀಟ್ ಮಾಡಿದ್ದಾರೆ ಮತ್ತು ಸಾಂಸ್ಕೃತಿಕ ಸಾಪೇಕ್ಷತಾವಾದವನ್ನು ಟೀಕಿಸಿದ್ದಾರೆ.

ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕೆಲ ಎಕ್ಸ್ ಬಳಕೆದಾರರು ಇದೇ ರೀತಿಯಾಗಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ʼಭಾರತದಲ್ಲಿ ಹಿಜಾಬ್‌ಗಳನ್ನು ಬೆಂಬಲಿಸುವವರು ಒಂದು ದಿನ ಇದನ್ನು ಕೂಡ ಸಮರ್ಥಿಸುತ್ತಾರೆʼ ಎಂದು ಕೆಲ ಎಕ್ಸ್ ಬಳಕೆದಾರರು ಬರೆದುಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಕೂಡ ಇದೇ ರೀತಿಯಾಗಿ ಬಿಂಬಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ವಾಸ್ತವವೇನು?

ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ Instagram ಖಾತೆ @diana_romano_butik777 ಅನ್ನು ಉಲ್ಲೇಖಿಸಿರುವುದು ನಾವು ಗಮನಿಸಿದ್ದೇವೆ ಎಂದು ಆಲ್ಟ್ ನ್ಯೂಸ್ ತಿಳಿಸಿದೆ. ಇನ್ಸ್ಟಾಗ್ರಾಮ್‌ನಲ್ಲಿ ಈ ಕುರಿತು ಹೆಚ್ಚಿನ ಪರಿಶೀಲನೆ ನಡೆಸಿದಾಗ ರಷ್ಯಾದ ಮಹಿಳೆಯ ಪ್ರೊಫೈಲ್ ಕಂಡು ಬಂದಿದೆ. ಪ್ರೊಫೈಲ್‌ನಲ್ಲಿ ಅವರು ಮಾರ್ಚ್ 1ರಂದು ಮಗು ಮತ್ತು ವ್ಯಕ್ತಿಯ ವೀಡಿಯೊವನ್ನು ಹಂಚಿಕೊಂಡಿದ್ದರು.

ನಾವು ಆಕೆಯ ಪ್ರೊಫೈಲ್‌ನಿಂದ ಈ ಕಾರ್ಯಕ್ರಮದ ಹೆಚ್ಚಿನ ವೀಡಿಯೊಗಳನ್ನು ಕಂಡುಹಿಡಿದಿದ್ದೇವೆ. ಆದರೆ, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಹೇಳಿಕೊಂಡಂತೆ ಪುರುಷನು ಮಗುವನ್ನು ವಿವಾಹವಾಗಿಲ್ಲ. ಆತ ವಯಸ್ಕ ಮಹಿಳೆಯನ್ನೇ ವಿವಾಹವಾಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಅದು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಜೋಡಿಯ ವಿವಾಹವಾಗಿದೆ, ವಧು ಮದುವೆಯಲ್ಲಿ ಬಿಳಿ ಉಡುಪನ್ನು ಧರಿಸಿದ್ದರು ಎಂದು ಆಲ್ಟ್ ನ್ಯೂಸ್ ಹೇಳಿದೆ.

ನಾವು ಎರಡು ಸ್ಕ್ರೀನ್‌ಗ್ರಾಬ್‌ಗಳನ್ನು ಹೋಲಿಕೆ ಮಾಡಿದ್ದೇವೆ. ಅದರಲ್ಲಿ ಒಂದು ವೈರಲ್ ವೀಡಿಯೊ, ಮತ್ತೊಂದು ವಿವಾಹಕ್ಕೆ ಸಂಬಂಧಿಸಿದ ವೀಡಿಯೊವಾಗಿದೆ. ಅದರಲ್ಲಿ ಕಾಣಿಸಿಕೊಂಡ ವ್ಯಕ್ತಿ ಅದೇ ವ್ಯಕ್ತಿಯಾಗಿದ್ದಾನೆ.


 



ಇನ್ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿರುವ ವೀಡಿಯೊ ಚಿತ್ರಗಳಲ್ಲಿ ಮಗು ವಧುವಿನ ಜೊತೆ ಪೋಸ್ ನೀಡುವುದು ಕೂಡ ಕಾಣಬಹುದಾಗಿದೆ. ಪೋಟೋಗಳನ್ನು ಅಪ್ಲೋಡ್ ಮಾಡಿದ ಮಹಿಳೆಯನ್ನು ಕೂಡ ನಾವು ಸಂರ್ಕಿಸಿದ್ದೇವೆ. ಅವರನ್ನು ರಷ್ಯಾದ ಸ್ಟಾವ್ರೊಪೋಲ್ ಕ್ರೈನಲ್ಲಿರುವ ಎಸ್ಸೆಂಟುಕಿಯ ನಿವಾಸಿ ಡಯಾನಾ ಎಂದು ಗುರುತಿಸಿದ್ದೇವೆ ಆಲ್ಟ್ ನ್ಯೂಸ್ ಹೇಳಿದೆ.

ʼನಾನು ಯೂಲಿಯಾಳ ಚಿಕ್ಕಮ್ಮ, ನನ್ನ ಸಹೋದರ ಅಲೆಕ್ಸಿಯ ವಿವಾಹ ರಾಯ ಜೊತೆ ನಡೆಯಿತು. ನನ್ನ ಸೋದರ ಸೊಸೆ 5 ವರ್ಷ ವಯಸ್ಸಿನವಳು, ಅವರು ಈ ವೀಡಿಯೊವನ್ನು ನನ್ನ ಪುಟದಿಂದ ತೆಗೆದುಕೊಂಡು ಸುಳ್ಳುಗಳನ್ನು ಹರಡುತ್ತಿದ್ದಾರೆ. ನಾವು ಕ್ರಿಶ್ಚಿಯನ್ನರು. ಬಾಲಕಿ ನನ್ನ ಅಣ್ಣನ ಮಗಳು ಮತ್ತು ವರ ಅಲೆಕ್ಸಿ ನನ್ನ ಕಿರಿಯ ಸಹೋದರʼ ಎಂದು ಡಯಾನಾ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳನ್ನು ನಿರಾಕರಿಸಿದ ಡಯಾನಾ, ವೀಡಿಯೊದಲ್ಲಿ ಹೇಳಿಕೊಂಡಂತೆ, ಮಕ್ಕಳನ್ನು ಮದುವೆ ಮಾಡುವ ಸಂಪ್ರದಾಯ ನಮ್ಮಲ್ಲಿಲ್ಲ. 9ನೇ ವಯಸ್ಸಿನಲ್ಲಂತೂ ವಿವಾಹವೇ ಮಾಡುವುದಿಲ್ಲ. ವೀಡಿಯೊ ತೆಗೆದ ವ್ಯಕ್ತಿ ನನ್ನ Instagram ಪುಟವನ್ನು ಪರಿಶೀಲಿಸಿ ಈ ಮಗು ವಧು ಅಲ್ಲ ಎಂದು ನೋಡಿರಬೇಕು. ಆದರೂ, ಅವರು ಈ ರೀತಿ ಯಾಕೆ ಮಾಡುತ್ತಾರೆ? ವಿಶೇಷವಾಗಿ ಪುರುಷರು? ತಪ್ಪು ಮಾಹಿತಿಯೊಂದಿಗೆ ವೀಡಿಯೊಗಳನ್ನು ಪೋಸ್ಟ್ ಮಾಡುವವರನ್ನು ಪುರುಷರು ಎಂದು ಕರೆಯಬಹುದೆ? ಈ ಸಂಬಂಧ ಪೊಲೀಸ್ ದೂರನ್ನು ನೀಡುವುದಾಗಿಯೂ ಅವರು ಹೇಳಿದ್ದಾರೆ.

ವೀಡಿಯೊ ವೈರಲ್ ಆದ ಬಳಿಕ ಡಯಾನಾ ಅಲೆಕ್ಸಿ ಮತ್ತು ಅವರ ಸೊಸೆಯ ವೀಡಿಯೊವನ್ನು ತನ್ನ Instagram ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಪೋಸ್ಟ್‌ನಲ್ಲಿ 'ಚಿಕ್ಕಪ್ಪ ಮತ್ತು ಸೊಸೆ' ಎಂದು ಬರೆದಿದ್ದಾರೆ. ಇದಲ್ಲದೆ ಅನುಮತಿ ಇಲ್ಲದೆ ಪೋಸ್ಟ್ ಮಾಡುವವರು ಮತ್ತು ಅಸಹ್ಯಕರ ವಿಷಯಗಳನ್ನು ಬರೆಯುವವರು ಶಾಪಗ್ರಸ್ತರಾಗಲಿ ಎಂದು ಬರೆದುಕೊಂಡಿದ್ದಾರೆ.

Instagram ಪುಟವನ್ನು ಮತ್ತಷ್ಟು ಪರಿಶೀಲಿಸಿದಾಗ ಫೆಬ್ರವರಿ 26ರಂದು ವಧು-ವರರ ವೀಡಿಯೊವನ್ನು ರಷ್ಯನ್ ಭಾಷೆಯಲ್ಲಿ ‘ಅಲೆಕ್ಸಿಮತ್ತು ರಾಯ’ ಎಂಬ ಶೀರ್ಷಿಕೆಯೊಂದಿಗೆ ಅದೇ ಪುಟದಲ್ಲಿ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ. ಇದು ಡಯಾನಾ ನೀಡಿರುವ ಹೇಳಿಕೆಯನ್ನು ದೃಢಪಡಿಸುತ್ತದೆ. Instagram ಪುಟದಲ್ಲಿ ವಧು ಮತ್ತು ವರ ಚರ್ಚ್‌ನಲ್ಲಿ ಇರುವಂತೆ ತೋರಿಸುವ ವೀಡಿಯೊ ಕಂಡು ಬಂದಿದೆ. ಇದಲ್ಲದೆ ಪುಟದಲ್ಲಿ ಮಗುವಿನ ಪ್ರತ್ಯೇಕ ವೀಡಿಯೊ ಕೂಡ ಅಪ್ಲೋಡ್ ಮಾಡಲಾಗಿದೆ. ವೀಡಿಯೊದಲ್ಲಿನ ರಷ್ಯನ್ ಭಾಷೆಯಲ್ಲಿ "ರಾಜಕುಮಾರಿ ಜೂಲಿಯಾ" ಎಂದು ಬರೆಯಲಾಗಿದೆ ಎಂದು ಆಲ್ಟ್‌ನ್ಯೂಸ್‌ ಪರಿಶೀಲನೆ ವೇಳೆ ಪತ್ತೆ ಹಚ್ಚಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಕೃಪೆ: altnews.in

contributor

Similar News