ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಇಬ್ಬರ ಹತ್ಯೆ
ಇಂಫಾಲ: 40 ದಿನಗಳ ಭಾಗಶಃ ಶಾಂತಿಯ ನಂತರ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಮೈತೈ ಬಾಹುಳ್ಯವಿರುವ ಪೂರ್ವ ಇಂಫಾಲ ಜಿಲ್ಲೆಯ ಗಡಿ ಪ್ರದೇಶದಲ್ಲಿ ಓರ್ವ ವ್ಯಕ್ತಿ ಹಾಗೂ ಕುಕಿ-ಝೋಮಿ ಬಾಹುಳ್ಯವಿರುವ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಸೇರಿದಂತೆ ಒಟ್ಟು ಇಬ್ಬರು ಹತ್ಯೆಗೀಡಾಗಿದ್ದಾರೆ.
ಮೃತಪಟ್ಟವರು ಕಾಂಗ್ಪೋಕ್ಪಿ ಜಿಲ್ಲೆಯ ನಿವಾಸಿಗಳಾದ 23 ವರ್ಷದ ಕಮ್ಮಿನ್ ಲಾಲ್ ಲುಫೆಂಗ್ ಹಾಗೂ 22 ವರ್ಷದ ಕಾಮ್ಲೆಂಗ್ ಸ್ಯಾಟ್ ಲುಂಕಿಮ್ ಎಂದು ಕುಕಿ-ಝೋಮಿ ಸಂಘಟನೆಗಳು ಪ್ರತಿಪಾದಿಸಿವೆ. ಪೂರ್ವ ಇಂಫಾಲ ಹಾಗೂ ಕಾಂಗ್ಪೋಕ್ಪಿ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಆದರೆ, ಪೊಲೀಸರು ಈವರೆಗೆ ಮೃತದೇಹಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಶನಿವಾರದ ಘಟನೆಯ ಹಿಂಸಾತ್ಮಕ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈ ವಿಡಿಯೊಗಳು ಮೇಲ್ನೋಟಕ್ಕೆ ಇಂದಿನದಂತೆ ಕಂಡು ಬಂದಿದ್ದು, ಮೃತದೇಹಗಳನ್ನು ತುಳಿದು, ಎಳೆದುಕೊಂಡು ಹೋಗಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಮೂಲಗಳ ಪ್ರಕಾರ, ಬೆಳಗ್ಗೆ 8 ಗಂಟೆಯ ವೇಳೆಗೆ ಎರಡು ಸಶಸ್ತ್ರ ಗುಂಪುಗಳ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದ್ದು, ಪೂರ್ವ ಇಂಫಾಲ, ಕಾಂಗ್ಪೋಕ್ಪಿ ಹಾಗೂ ನಾಗಾ ಬಾಹುಳ್ಯದ ಉಖ್ರುಲ್ ಜಿಲ್ಲೆಗಳು ಸಂಧಿಸುವ ಪ್ರಾಂತ್ಯವಾದ ಮಫೌದಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಹತ್ಯಾ ಘಟನೆಗಳು ಬೆಳಕಿಗೆ ಬರುತ್ತಿದ್ದಂತೆಯೆ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ನೆಲೆಸಿರುವ ಕುಕಿ-ಝೋಮಿ ಗುಂಪಿನ ಬುಡಕಟ್ಟು ಒಕ್ಕೂಟ ಸಮಿತಿಯು ಜಿಲ್ಲೆಯಲ್ಲಿ ರವಿವಾರ 24 ಗಂಟೆಗಳ ಬಂದ್ ಗೆ ಕರೆ ನೀಡಿದೆ.