ವಕ್ಫ್ ತಿದ್ದುಪಡಿ ಕಾಯ್ದೆ ಕುರಿತ ಕಾನೂನು ಸಮರಕ್ಕೆ ಚಾಲನೆ: ಇಂದು 73 ಅರ್ಜಿಗಳ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

Update: 2025-04-16 10:58 IST
ವಕ್ಫ್ ತಿದ್ದುಪಡಿ ಕಾಯ್ದೆ ಕುರಿತ ಕಾನೂನು ಸಮರಕ್ಕೆ ಚಾಲನೆ: ಇಂದು 73 ಅರ್ಜಿಗಳ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

Photo credit: PTI

  • whatsapp icon

ಹೊಸದಿಲ್ಲಿ: ವಿವಾದಿತ ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳು ಹಾಗೂ ಹಲವು ಗಣ್ಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಸಂಬಂಧ, ಇಂದು ಸುಪ್ರೀಂ ಕೋರ್ಟ್ ಒಟ್ಟು 73 ಅರ್ಜಿಗಳ ವಿಚಾರಣೆ ನಡೆಸಲಿದೆ.

ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆಗೊಂಡ ನಂತರ, ರಾಷ್ಟ್ರಪತಿಗಳ ಅಂಕಿತದೊಂದಿಗೆ ವಕ್ಫ್ ತಿದ್ದುಪಡಿ ಕಾಯ್ದೆಯ ಅಧಿಕೃತ ಅಧಿಸೂಚನೆ ಪ್ರಕಟವಾಗಿತ್ತು. ಈ ಕಾಯ್ದೆಯ ವಿರುದ್ಧ ಮುಸ್ಲಿಂ ಸಮುದಾಯ ಹಾಗೂ ಸಂಘಟನೆಗಳು ದೇಶವ್ಯಾಪಿ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದು, ಈ ಕಾಯ್ದೆಯು ಸಾಂವಿಧಾನಿಕ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಹಾಗೂ ವಕ್ಫ್ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪ್ರಯತ್ನಿಸುತ್ತಿದೆ ಆರೋಪಿಸುತ್ತಿವೆ.

ಆದರೆ, ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಪಾದರ್ಶಕತೆಯನ್ನು ತರಲು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಕೇಂದ್ರ ಸರಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

ನ್ಯಾ. ಸಂಜಯ್ ಕುಮಾರ್ ಹಾಗೂ ನ್ಯಾ. ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ನ್ಯಾಯಪೀಠದೆದುರು ಒಟ್ಟು 73 ಅರ್ಜಿಗಳು ವಿಚಾರಣೆಗೆ ಪಟ್ಟಿಯಾಗಿವೆ. ಈ ಅರ್ಜಿಗಳ ವಿಚಾರಣೆ ಇಂದು (ಬುಧವಾರ) ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿದೆ.

ಈ ಅರ್ಜಿಗಳಲ್ಲಿ ಮೂಲ ವಕ್ಫ್ ಕಾಯ್ದೆ, 1995 ಅನ್ನು ಪ್ರಶ್ನಿಸಿ ಹಿಂದುತ್ವ ಸಂಘಟನೆಗಳು ಸಲ್ಲಿಸಿರುವ ಎರಡು ಅರ್ಜಿಗಳೂ ಸೇರಿವೆ. ಉಳಿದ ಅರ್ಜಿದಾರರು ಇತ್ತೀಚೆಗೆ ಜಾರಿಗೊಂಡಿರುವ ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ. ನ್ಯಾಯಾಲಯವು ಪ್ರಕರಣದ ಕುರಿತು ನಿರ್ಧಾರ ಕೈಗೊಳ್ಳುವ ವೇಳೆ, ಮಧ್ಯಂತರ ತಡೆಯಾಜ್ಞೆಯನ್ನೂ ನೀಡಬೇಕು ಎಂದು ಕೆಲವು ಅರ್ಜಿದಾರರು ಮನವಿ ಮಾಡಿದ್ದಾರೆ.

ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಐ, ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ, ಸಮಾಜವಾದಿ ಪಕ್ಷ, ನಟ ವಿಜಯ್ ನೇತೃತ್ವದ ಟಿವಿಕೆ, ಆರ್‌ಜೆಡಿ, ಜೆಡಿಯು, ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಂ, ಆಪ್ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸೇರಿದಂತೆ ವಿವಿಧ ಪಕ್ಷಗಳು ಸಲ್ಲಿಸಿರುವ ಅರ್ಜಿಗಳೂ ಸೇರಿವೆ.

ವಕ್ಫ್ ತಿದ್ದುಪಡಿ ಕಾಯ್ದೆಯು ಮುಸ್ಲಿಮರ ವಿರುದ್ಧ ತಾರತಮ್ಯಕಾರಿಯಾಗಿದೆ ಹಾಗೂ ಮುಸ್ಲಿಮರ ಧಾರ್ಮಿಕ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ವಾದಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News