2030ರೊಳಗೆ ತ್ಯಾಜ್ಯಮುಕ್ತ ಬಾಹ್ಯಾಕಾಶ ಮಿಷನ್: ಇಸ್ರೋ ಅಧ್ಯಕ್ಷ

Update: 2024-04-17 03:34 GMT

Photo: Fb/kairalinews

ಹೊಸದಿಲ್ಲಿ: ಬಾಹ್ಯಾಕಾಶದಿಂದ ತ್ಯಾಜ್ಯಗಳನ್ನು ತೆರವುಗೊಳಿಸುವ ಜಾಗತಿಕ ಪ್ರಯತ್ನಗಳಿಗೆ ಕೈಜೋಡಿಸುವ ಸ್ಪಷ್ಟ ಉದ್ದೇಶವನ್ನು ಪ್ರಕಟಿಸಿರುವ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, 2030ರೊಳಗೆ ತ್ಯಾಜ್ಯ ಮುಕ್ತ ಬಾಹ್ಯಾಕಾಶ ಮಿಷನ್ ಸಾಧಿಸುವ ಉದ್ದೇಶವನ್ನು ಇಸ್ರೋ ಹೊಂದಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ 42ನೇ ವಾರ್ಷಿಕ ಅಂತರ್ ಏಜೆನ್ಸಿ ಬಾಹ್ಯಾಕಾಶ ತ್ಯಾಜ್ಯ ಸಮನ್ವಯ ಸಮಿತಿಯ ಸಮಾವೇಶದಲ್ಲಿ ಮಾತನಾಡಿದ ಅವರು, ಬಾಹ್ಯಾಕಾಶ ಸಂಶೋಧನೆಗೆ ಸ್ಪಷ್ಟವಾದ ಯೋಜನೆಯನ್ನು ಇಸ್ರೋ ಹಾಕಿಕೊಂಡಿದೆ ಎಂದು ಸ್ಪಷ್ಟಪಡಿಸಿದರು.

"ತ್ಯಾಜ್ಯಮುಕ್ತ ಬಾಹ್ಯಾಕಾಶ ಮಿಷನ್ ಖಾತರಿಪಡಿಸುವುದು ಇಸ್ರೋದ ಪ್ರಮುಖ ಉಪಕ್ರಮ. ಈ ಮೂಲಕ ಸುಸ್ಥಿರ ಬಾಹ್ಯಾಕಾಶ ಖಾತರಿಪಡಿಸುವುದು ನಮ್ಮ ಉದ್ದೇಶ. ಈ ಉಪಕ್ರಮವನ್ನು ಇಂದು ಘೋಷಿಸುತ್ತಿದ್ದೇನೆ. ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಭಾರತದ ಎಲ್ಲ ಬಾಹ್ಯಾಕಾಶ ಸಂಸ್ಥೆಗಳ ಮಿಷನ್ ಗಳನ್ನು ತ್ಯಾಜ್ಯಮುಕ್ತ ಬಾಹ್ಯಾಕಾಶ ಮಿಷನ್ ಗಳನ್ನಾಗಿ ಪರಿವರ್ತಿಸುವುದು ನಮ್ಮ ಉದ್ದೇಶ. ಹೊರ ಬಾಹ್ಯಾಕಾಶದ ಧೀರ್ಘಾವಧಿ ಸುಸ್ಥಿರತೆಗಾಗಿ ಎಲ್ಲ ಸರ್ಕಾರಿ ಬಾಹ್ಯಾಕಾಶ ಸಂಸ್ಥೆಗಳು ಇದನ್ನು ಅನುರಿಸುವಂತೆ ಇಸ್ರೋ ಉತ್ತೇಜಿಸುತ್ತದೆ" ಎಂದು ಸ್ಪಷ್ಟಪಡಿಸಿದರು.

ಬಾಹ್ಯಾಕಾಶದಲ್ಲಿರುವ ಭಾರತೀಯ ಉಪಗ್ರಹಗಳ ಸಂಖ್ಯೆ ಬಗ್ಗೆ ವಿವರ ನೀಡಿದ ಅವರು, ಪ್ರಸ್ತುತ ನಾವು ಕಕ್ಷೆಯಲ್ಲಿ 54 ಬಾಹ್ಯಾಕಾಶ ನೌಕೆಗಳನ್ನು ಹೊಂದಿದ್ದೇವೆ. ಇದರ ಜತೆಗೆ ನಿಷ್ಕ್ರಿಯ ಸಾಧನಗಳೂ ಇವೆ. ಇವುಗಳ ವಿಲೇವಾರಿಗೆ ಅಥವಾ ಇಂಥ ಬಾಹ್ಯಾಕಾಶ ಸಾಧನಗಳನ್ನು ತೆರವುಗೊಳಿಸಲು ಸಾಧ್ಯವಾದ ಎಲ್ಲ ಕ್ರಮಗಳನ್ನು ನಾವು ಕೈಗೊಳ್ಳುತ್ತಿದ್ದೇವೆ. ಅವುಗಳ ಕಾರ್ಯನಿರ್ವಹಣೆ ಮುಕ್ತಾಯವಾದಾಗ ಅವುಗಳನ್ನು ಸುರಕ್ಷಿತ ಸ್ಥಳಗಳಿಗೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಪ್ರಮುಖ ವಿಚಾರ ಎಂದು ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News