ವಯನಾಡ್ ಭೂಕುಸಿತ | ಬಾರದ ಲೋಕಕ್ಕೆ ಹೋದ 275 ಜೀವಗಳು!

Update: 2024-08-01 14:55 GMT

PC : PTI

ತಿರುವನಂತಪುರ : ಭೀಕರ ಸರಣಿ ಭೂಕುಸಿತಗಳಿಗೆ ಸಾಕ್ಷಿಯಾದ ಕೇರಳದ ವಯನಾಡಿನಲ್ಲಿ ಮೂರನೇ ದಿನವಾದ ಗುರುವಾರವೂ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿವೆ. ಈ ನಡುವೆ ದುರಂತದಲ್ಲಿ ಮೃತರ ಸಂಖ್ಯೆ 275ನ್ನು ದಾಟಿದ್ದು, ಕನಿಷ್ಠ 240 ಜನರು ಇನ್ನೂ ನಾಪತ್ತೆಯಾಗಿದ್ದಾರೆ.

ಭೂಕುಸಿತಗಳು ಸಂಭವಿಸಿದ ಪ್ರದೇಶಗಳಲ್ಲಿ ಮೃತಪಟ್ಟವರು, ಕೆಸರು ಮತ್ತು ಕಾಂಕ್ರೀಟ್ ಅವಶೇಷಗಳ ಕೆಳಗೆ ಹೂತುಹೋಗಿರುವವರ ಅಸಹನೀಯ ಮೌನದ ನಡುವೆ ರಕ್ಷಿಸಲ್ಪಟ್ಟವರ ಸಂಕಟ ಮತ್ತು ನಿಟ್ಟುಸಿರುಗಳು ಕೇಳಿ ಬರುತ್ತಿವೆ. ತನ್ನದೇ ಸ್ಥಿತಿಯಲ್ಲಿರುವ ಇತರ ಹಲವರೊಂದಿಗೆ ಹತಾಶ ತಂದೆಯೋರ್ವ ತನ್ನ ಮಗಳಿಗಾಗಿ ಹುಡುಕಾಡುತ್ತಿರುವ ಹೃದಯ ವಿದ್ರಾವಕ ದೃಶ್ಯಗಳನ್ನು ಟಿವಿ ಪರದೆಗಳು ತೋರಿಸಿವೆ. ಈ ನಡುವೆ ಕೇರಳ ಕಂದಾಯ ಸಚಿವ ಕೆ.ರಾಜನ್ ಅವರು ಭೂಕುಸಿತದ ಬಳಿಕ ನಾಪತ್ತೆಯಾಗಿರುವವರ ನಿಖರ ಸಂಖ್ಯೆ ಇನ್ನೂ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ.

256 ಶವಗಳ ಮರಣೋತ್ತರ ಪರೀಕ್ಷೆಗಳನ್ನು ನಡೆಸಲಾಗಿದ್ದು, 154 ಶವಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ. ನಿಲಂಬೂರು ಮತ್ತು ಪೋತುಕಲ್‌ನಲ್ಲಿ ಪತ್ತೆಯಾದ ಶವಗಳನ್ನೂ ಹೊರಕ್ಕೆ ತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ ಎಂದು ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದರು.

ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಹಲವಾರು ಜನರು ನಾಪತ್ತೆಯಾಗಿದ್ದಾರೆ. ಬದುಕುಳಿದವರಿಗಾಗಿ ಮತ್ತು ಶವಗಳಿಗಾಗಿ ಧ್ವಂಸಗೊಂಡ ಮನೆಗಳು ಮತ್ತು ಕಟ್ಟಡಗಳನ್ನು ಜಾಲಾಡುತ್ತಿರುವ ರಕ್ಷಣಾ ತಂಡಗಳು ಜಲಾವೃತಗೊಂಡ ಮಣ್ಣು ಸೇರಿದಂತೆ ಪ್ರತಿಕೂಲ ಸ್ಥಿತಿಗಳ ವಿರುದ್ಧ ಹೆಣಗಾಡುತ್ತಿವೆ.

PC : PTI

 

ಚೂರ್ಲಮಲ ಮತ್ತು ಮುಂಡಕ್ಕೈನಲ್ಲಿ ಎಸ್ಟೇಟ್ ಲೇನ್‌ಗಳಲ್ಲಿ ವಾಸವಾಗಿದ್ದ ಚಹಾ ತೋಟಗಳ ಕಾರ್ಮಿಕರು ದುರಂತದಿಂದ ಅತ್ಯಂತ ಹೆಚ್ಚು ಸಂಕಷ್ಟಗಳಿಗೆ ತುತ್ತಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ಭರದಿಂದ ನಡೆಯುತ್ತಿದ್ದು, ದುರಂತದಲ್ಲಿ ಎಷ್ಟು ಚಹಾತೋಟಗಳ ಕಾರ್ಮಿಕರು ಮತ್ತು ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.

ಮುಂಡಕ್ಕೈನಂತಹ ತೀವ್ರ ಪೀಡಿತ ಪ್ರದೇಶಗಳಲ್ಲಿ ಸೂಕ್ತ ಶೋಧ ಕಾರ್ಯಾಚರಣೆಗಳಿಗಾಗಿ ಜೆಸಿಬಿಯಂತಹ ಯಂತ್ರೋಪಕರಣಗಳನ್ನು ಸ್ಥಳಕ್ಕೆ ಸಾಗಿಸುವ ಅಗತ್ಯವಿದೆ. ಬೇಲಿ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಭಾರತೀಯ ಸೇನೆಯು ನೌಕಾಪಡೆ ಮತ್ತು ತಟರಕ್ಷಣಾ ಪಡೆಯ ಸಹಭಾಗಿತ್ವದಲ್ಲಿ ಅಟ್ಟಮಾಲ,ಮುಂಡಕ್ಕೈ ಮತ್ತು ಚೂರ್ಲಮಲಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದೆ.

ಪ್ರತಿ ತಂಡವೂ ಶ್ವಾನದಳವನ್ನು ಹೊಂದಿದೆ. ಅವಶೇಷಗಳನ್ನು ತೆರವುಗೊಳಿಸಲು ಮತ್ತು ಶೋಧ ಕಾರ್ಯಾಚರಣೆಗಳಿಗೆ ಅನುಕೂಲ ಕಲ್ಪಿಸಲು ಐದು ಜೆಸಿಬಿ ಯಂತ್ರಗಳನ್ನು ನದಿಯ ಪಶ್ಚಿಮ ಭಾಗಕ್ಕೆ ಸ್ಥಳಾಂತರಿಸಲಾಗಿದೆ. 190 ಅಡಿ ಉದ್ದದ ಕಾಲು ಸೇತುವೆ ಶೀಘ್ರವೇ ಪೂರ್ಣಗೊಳ್ಳಲಿದೆ. ಇದೇ ವೇಳೆ ಸುಧಾರಿತ ಕಾಲು ಸೇತುವೆಯ ನಿರ್ಮಾಣ ಪೂರ್ಣಗೊಂಡಿದೆ ಎಂದು ಸೇನೆಯ ಅಧಿಕೃತ ಹೇಳಿಕೆಯು ತಿಳಿಸಿದೆ.

PC : PTI

 

‘ಸರಣಿ ಭೂಕುಸಿತಗಳ ಬಳಿಕ ನೂರಕ್ಕೂ ಅಧಿಕ ಶವಗಳನ್ನು ನಾವು ಹೊರಕ್ಕೆ ತೆಗೆದಿದ್ದೇವೆ. 500ಕ್ಕೂ ಅಧಿಕ ಸೇನಾ ಸಿಬ್ಬಂದಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿಕೊಂಡಿದ್ದಾರೆ’ ಎಂದು ಹೇಳಿದ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ವಿ.ಟಿ.ಮ್ಯಾಥ್ಯೂ ಅವರು,‘ನಾವು ಜು.30ರ ಬೆಳಿಗ್ಗೆಯಿಂದಲೇ ಕೇರಳ ಸರಕಾರ ಮತ್ತು ಜನತೆಗೆ ಬೆಂಬಲವಾಗಿ ನಿಂತಿದ್ದೇವೆ. ನಾವೇ ನೂರಕ್ಕೂ ಅಧಿಕ ಶವಗಳನ್ನು ಹೊರಕ್ಕೆ ತೆಗೆದಿದ್ದು, ಪತ್ತೆಯಾಗಿರುವ ಶವಗಳ ಒಟ್ಟು ಸಂಖ್ಯೆ ಇದಕ್ಕಿಂತ ಬಹಳಷ್ಟು ಹೆಚ್ಚಿದೆ. ನಾವು ಹಲವಾರು ಜನರನ್ನೂ ರಕ್ಷಿಸಿದ್ದೇವೆ’ ಎಂದು ತಿಳಿಸಿದರು.

ಗುರುವಾರ ವಯನಾಡಿನಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ನಡೆದಿದ್ದು, ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿರುವ ರಾಜ್ಯದ ಸಚಿವರು, ವಯನಾಡು ಜಿಲ್ಲೆಯ ಶಾಸಕರು ಮತ್ತು ರಾಜಕೀಯ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಮಂಗಳವಾರ ನಸುಕಿನಲ್ಲಿ ಭಾರೀ ಮಳೆಯಿಂದಾಗಿ ಮುಂಡಕ್ಕೈ, ಚೂರ್ಲಮಾಲ,ನೂಲ್ಪುಳ ಮತ್ತು ಅಟ್ಟಮಲಗಳಲ್ಲಿ ಸಂಭವಿಸಿದ್ದ ಸರಣಿ ಭೂ ಕುಸಿತಗಳಿಂದಾಗಿ ಹಲವಾರು ಮನೆಗಳು ಧ್ವಂಸಗೊಂಡಿವೆ. ಜಲಮೂಲಗಳು ತುಂಬಿ ಹರಿಯುತ್ತಿವೆ, ಹಲವಾರು ಮರಗಳು ಬುಡಸಹಿತ ಉರುಳಿವೆ ಮತ್ತು ಗ್ರಾಮಗಳೇ ಕಣ್ಮರೆಯಾಗಿವೆ.

ನಸುಕಿನ 1:30 ಮತ್ತು ನಾಲ್ಕು ಗಂಟೆಯ ನಡುವೆ ಮೂರು ಬೃಹತ್ ಭೂಕುಸಿತಗಳು ಸಂಭವಿಸಿದಾಗ ಹೆಚ್ಚಿನ ಸಂತ್ರಸ್ತರು ಗಾಢನಿದ್ರೆಯಲ್ಲಿದ್ದರು. ಬೃಹತ್ ಬಂಡೆಗಳು ಮತ್ತು ಉರುಳಿದ್ದ ಮರಗಳು ಮುಂಡಕ್ಕೈನಿಂದ ಚೂರ್ಲಮಲಾಕ್ಕೆ ಜಾರಿದ್ದು ತೀವ್ರ ವಿನಾಶಕ್ಕೆ ಕಾರಣವಾಗಿತ್ತು. ಗುಡ್ಡದ ತುದಿಯಿಂದ ಭಾರೀ ಪ್ರಮಾಣದಲ್ಲಿ ಹರಿದು ಬರುತ್ತಿದ್ದ ನೀರಿನಿಂದಾಗಿ ಸಣ್ಣ ಇರುವಳಿಂಜಿ ನದಿಯ ಪಥ ಬದಲಾವಣೆಯಾಗಿದ್ದು, ಅದರ ದಂಡೆಗಳಲ್ಲಿಯ ಪ್ರತಿಯೊಂದನ್ನೂ ಪ್ರವಾಹ ಆಪೋಷನ ತೆಗೆದುಕೊಂಡಿದೆ. ಹಲವಾರು ಮನೆಗಳು ಧ್ವಂಸಗೊಂಡಿದ್ದು,ಒಂದು ದೇವಸ್ಥಾನ ಮತ್ತು ಒಂದು ಮಸೀದಿ ಮುಳುಗಡೆಯಾಗಿವೆ. ಶಾಲಾ ಕಟ್ಟಡವೊಂದು ತೀವ್ರಹಾನಿಗೀಡಾಗಿದೆ.

►ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ದಿನ ಮುಂದುವರಿಯಲಿದೆ : ಸಿಎಂ ಪಿಣರಾಯಿ ವಿಜಯನ್

ಈ ನಡುವೆ,ಮುಂಡಕ್ಕೈ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ದಿನಗಳನ್ನು ತೆಗೆದುಕೊಳ್ಳಬಹುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಕ್ಷಣಾ ಕಾರ್ಯಾಚರಣೆಗಳನ್ನು ಸಮನ್ವಯಗೊಳಿಸಲು ನಾಲ್ವರು ಸಚಿವರ ಉಪಸಮಿತಿಯೊಂದನ್ನು ಅವರು ರಚಿಸಿದ್ದು, ಈ ಸಚಿವರು ವಯನಾಡ್‌ನಲ್ಲಿ ಮೊಕ್ಕಾಂ ಹೂಡಲಿದ್ದಾರೆ.

ಅವಶೇಷಗಳಡಿಯಿಂದ ರಕ್ಷಿಸಬಹುದಾಗಿದ್ದ ಎಲ್ಲರನ್ನೂ ಹೊರಕ್ಕೆ ತೆಗೆಯಲಾಗಿದೆ ಎಂದು ಸೇನೆಯ ಪ್ರತಿನಿಧಿಗಳು ತನಗೆ ತಿಳಿಸಿದ್ದಾರೆ. ಹಲವಾರು ಜನರು ಇನ್ನೂ ನಾಪತ್ತೆಯಾಗಿದ್ದು,ಚಳಿಯಾರ್ ನದಿ ಸೇರಿದಂತೆ ಪೀಡಿತ ಪ್ರದೇಶಗಳಿಂದ ಹಲವಾರು ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಇದು ಶೀಘ್ರವಾಗಿ ಮುಗಿಸಬಹುದಾದ ವಿಷಯವಲ್ಲ. 12 ಸಚಿವರು ಈಗಾಗಲೇ ವಯನಾಡಿನಲ್ಲಿದ್ದು, ಈಗ ಇನ್ನೂ ನಾಲ್ವರನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ರಾಶಿ ಬಿದ್ದಿದ್ದ ಮಣ್ಣು ರಕ್ಷಣಾ ಕಾರ್ಯಾಚರಣೆಗಳನ್ನು ಕಷ್ಟವಾಗಿಸಿತ್ತು. ಆದರೆ ಸೇನೆಯಿಂದ ಬೇಲಿ ಸೇತುವೆ ನಿರ್ಮಾಣ ರಕ್ಷಣಾ ಕಾರ್ಯಾಚರಣೆಗಳನ್ನು ಸುಲಭಗೊಳಿಸಲಿದೆ ಎಂದು ಅವರು ವಿವರಿಸಿದರು.

ಸಂತ್ರಸ್ತರ ಪುನರ್ವಸತಿ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ವಿಜಯನ್, ಹಿಂದಿನ ಘಟನೆಗಳಲ್ಲಿ ಕೈಗೊಂಡಂತೆ ಅವರ ಬಗ್ಗೆ ಕಾಳಜಿಯನ್ನು ವಹಿಸಲಾಗುವುದು ಎಂದು ಭರವಸೆ ನೀಡಿದರು. ಪರಿಹಾರ ಶಿಬಿರಗಳಲ್ಲಿರುವ ಕುಟುಂಬಗಳ ಖಾಸಗಿತನವನ್ನು ಗೌರವಿಸುವಂತೆ ಮತ್ತು ಶಿಬಿರಗಳ ಹೊರಗೆ ಅವರ ಸಂದರ್ಶನ ನಡೆಸುವಂತೆ ಅವರು ಮಾಧ್ಯಮಗಳನ್ನು ಆಗ್ರಹಿಸಿದರು.

ಸುದ್ದಿಗೋಷ್ಠಿಯ ಬಳಿಕ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ದೇಣಿಗೆಗಳನ್ನು ಸ್ವೀಕರಿಸಿದ ವಿಜಯನ್ ಬಳಿಕ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News