ವಿವಾಹ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮದುವೆ ನೋಂದಣಿಯನ್ನು ಸುಲಭಗೊಳಿಸಲು ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚನೆ

Update: 2025-02-23 15:06 IST
wedding

ಸಾಂದರ್ಭಿಕ ಚಿತ್ರ

  • whatsapp icon

ಹೊಸದಿಲ್ಲಿ: ವಿವಾಹ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇಂದ್ರವು ಇತರ ರಾಜ್ಯಗಳ ದಂಪತಿಗಳಿಗೂ ಮದುವೆ ನೋಂದಣಿಯ ಸುಲಭ ಮತ್ತು ಏಕರೂಪ ಪ್ರಕ್ರಿಯೆಗೆ ಅನುವು ಮಾಡಿ ಕೊಡುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಮದುವೆ ನೋಂದಣಿಗೆ ಅಗತ್ಯಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದ್ದರೂ ಹೆಚ್ಚಿನ ರಾಜ್ಯಗಳಲ್ಲಿ ಮದುವೆ ನೋಂದಣಿಯನ್ನು ಬಯಸುವ ಜೋಡಿಯ ಪೈಕಿ ಕನಿಷ್ಠ ಒಬ್ಬರಾದರೂ ಆ ರಾಜ್ಯದಲ್ಲಿ ಕನಿಷ್ಠ 30 ದಿನಗಳ ಕಾಲ ವಾಸವಾಗಿರಬೇಕು.

ಅಂದಾಜು ಐದು ಲಕ್ಷ ಕೋಟಿ ರೂ.ಗಳ ಭಾರತೀಯ ವಿವಾಹ ಪ್ರವಾಸೋದ್ಯಮವನ್ನು ತ್ವರಿತ ಬೆಳವಣಿಗೆಯ ವಲಯವೆಂದು ಪರಿಗಣಿಸಲಾಗಿದೆ. ಅಂದಾಜುಗಳಂತೆ ಭಾರತದಲ್ಲಿ ಪ್ರತಿ ವರ್ಷ ಒಂದು ಕೋಟಿ ವಿವಾಹಗಳು ನೆರವೇರುತ್ತವೆ.

ಭಾರತದಲ್ಲಿ ಜನಸಂಖ್ಯೆಯ ಶೇ.54ರಷ್ಟು ಜನರು 30 ವರ್ಷಕ್ಕೂ ಕಡಿಮೆ ಪ್ರಾಯದವರಾಗಿದ್ದು, ಕೌಟುಂಬಿಕ ಆದಾಯದ ಬಹುಪಾಲು ಭಾಗವನ್ನು ಮದುವೆಗಳಿಗಾಗಿ ಖರ್ಚು ಮಾಡಲಾಗುತ್ತದೆ ಎಂದು ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, 25 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರನ್ನು ಪರಿಗಣಿಸಿದರೆ ಮುಂದಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಸುಮಾರು 68 ಕೋಟಿ ಜನರು ಮದುವೆಗೆ ಅರ್ಹರಾಗಲಿದ್ದಾರೆ, ಇದು ವಿವಾಹ ಉದ್ಯಮದ ಬೆಳವಣಿಗೆಗೆ ಭಾರೀ ಅವಕಾಶವನ್ನು ಒದಗಿಸಲಿದೆ ಎಂದು ಹೇಳಿದ್ದರು.

ಪ್ರವಾಸೋದ್ಯಮ ಸಚಿವಾಲಯವು ಜಾಗತಿಕವಾಗಿ ಭಾರತವನ್ನು ಪ್ರಮುಖ ವಿವಾಹ ತಾಣವಾಗಿ ಬಿಂಬಿಸುವ ಉದ್ದೇಶದೊಂದಿಗೆ ಮಹತ್ವಾಕಾಂಕ್ಷೆಯ ಅಭಿಯಾನಕ್ಕೆ ಚಾಲನೆ ನೀಡಿದ್ದು,ಇದು ದೇಶಾದ್ಯಂತದ 25 ಪ್ರಮುಖ ತಾಣಗಳ ಮಾಹಿತಿಯನ್ನು ಒಳಗೊಂಡಿದೆ.

ಭಾರತದಲ್ಲಿ ವಿವಾಹ ಪ್ರವಾಸೋದ್ಯಮದ ಭಾರೀ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿಕೊಳ್ಳಲಾಗಿಲ್ಲ ಎಂದು ಇತ್ತೀಚಿಗೆ ಸಂಸತ್ತಿಗೆ ಸಲ್ಲಿಸಿರುವ ತನ್ನ ವರದಿಯಲ್ಲಿ ತಿಳಿಸಿರುವ ಸಾರಿಗೆ,ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಕುರಿತ ಸಂಸದೀಯ ಸ್ಥಾಯಿ ಸಮಿತಿಯು,ಹಲವಾರು ದಿನಗಳ ಕಾರ್ಯಕ್ರಮಗಳು ಮತ್ತು ಸಂಭ್ರಮಾಚರಣೆಗಳೊಂದಿಗೆ ನಡೆಯುವ ‘ಡೆಸ್ಟಿನೇಷನ್ ವೆಡ್ಡಿಂಗ್(ಬೇರೆ ದೇಶ ಅಥವ ಬೇರೆ ರಾಜ್ಯವಾಗಿರಲಿ,ತಮ್ಮ ನೆಚ್ಚಿನ ಸ್ಥಳಕ್ಕೆ ತೆರಳಿ ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುವ ಪ್ರವೃತ್ತಿ)’ಗಳು ಸ್ಥಳೀಯ ಆರ್ಥಿಕತೆ ಮತ್ತು ಸ್ಥಳೀಯ ಪರಿಸರ ವ್ಯವಸ್ಥೆಗೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತವೆ ಮತ್ತು ಅವುಗಳನ್ನು ಉತ್ತೇಜಿಸಲು ಸರಕಾರವು ಪ್ರಯತ್ನಿಸಬೇಕು ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News