ಪಶ್ಚಿಮಬಂಗಾಳದಲ್ಲಿ ರೋಗಿಗೆ ಮಂಪರು ಚುಚ್ಚುಮದ್ದು ನೀಡಿ ವೈದ್ಯನಿಂದ ಅತ್ಯಾಚಾರ
ಕೋಲ್ಕತಾ : ಇಲ್ಲಿನ ಆರ್.ಜಿ. ಕಾರ್ ವೈದ್ಯಕೀಯ ಕಾಲೇಜ್ ಆಸ್ಪತ್ರೆಯಲ್ಲಿ ನಡೆದ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ವಿರುದ್ಧ ದೇಶಾದ್ಯಂತ ಭುಗಿಲೆದ್ದ ಪ್ರತಿಭಟನೆಯ ಕಿಚ್ಚು ಅರುವ ಮುನ್ನವೇ , ಪಶ್ಚಿಮಬಂಗಾಳದಲ್ಲಿ ವೈದ್ಯನೊಬ್ಬ ತನ್ನ ಕ್ಲಿನಿಕ್‌ನಲ್ಲಿ ರೋಗಿಯೊಬ್ಬಳಿಗೆ ಮಂಪರು ಬರಿಸುವ ಚುಚ್ಚುಮದ್ದು ನೀಡಿ, ಆಕೆಯ ಮೇಲೆ ಹಲವು ಸಲ ಅತ್ಯಾಚಾರವೆಸಗಿದ ಘೋರ ಕೃತ್ಯ ಬೆಳಕಿಗೆಬಂದಿದೆ.
ಉತ್ತರ ಪರಗಣ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಚಿಕಿತ್ಸೆಗಾಗಿ ವೈದ್ಯ ನೂರ್ ಆಲಂ ಸರ್ದಾರ್‌ನ ಕ್ಲಿನಿಕ್ ಗೆ ಬಂದಿದ್ದಾಗ ಆತ ಆಕೆಗೆ ಮಂರು ಬರಿಸುವಂತಹ ಚುಚ್ಚುಮದ್ದನ್ನು ನೀಡಿದ್ದು, ತಾನು ಪ್ರಜ್ಞೆ ತಪ್ಪಿ ಬಿದ್ದುದಾಗಿ ಸಂತ್ರಸ್ತೆಯು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆನಂತರ ಆರೋಪಿ ವೈದ್ಯ ಆಕೆಯ ಮೇಲೆ ಅತ್ಯಾಚಾರವೆಸಗಿದ್ದು, ತನ್ನ ಹಲವಾರು ಛಾಯಾಚಿತ್ರಗಳನ್ನು ತೆಗೆದಿದ್ದಾನೆ. ಅವುಗಳ ಮೂಲಕ ತನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದನೆಂದು ಆಪಾದಿಸಿದ್ದಾಳೆ. ತನಗೆ 4 ಲಕ್ಷ ರೂ. ನೀಡದೆ ಇದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಕೆಯ ಖಾಸಗಿ ಛಾಯಾಚಿತ್ರಗಳನ್ನು ಪ್ರಕಟಿಸುವುದಾಗಿಯೂ ಆತ ಬೆದರಿಕೆಯೊಡ್ಡಿದ್ದನೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
ಸಂತ್ರಸ್ತ ಮಹಿಳೆಯು ಹಸ್ನಾಬಾದ್ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದು, ಆಕೆಯ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಪತಿ ಭಾರತಕ್ಕೆ ಹಿಂತಿರುಗಿದಾಗ ನಡೆದ ಸಂಗತಿಯನ್ನು ಆತನಿಗೆ ವಿವರಿಸಿದಳು. ಆನಂತರ ದಂಪತಿಯು ಆರೋಪಿ ವೈದ್ಯನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು.
ವೈದ್ಯನಿಂದ ಬ್ಲಾಕ್ ಮೇಲ್ ಗೊಳಾದ ಬಳಿಕ ತನ್ನ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಳು. ನೆರೆಹೊರೆಯವರು ಈ ಬಗ್ಗೆ ಮಾಹಿತಿ ನೀಡಿದ ಬಳಿಕ ತಾನು ವೈದ್ಯನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸ್ವಗ್ರಾಮಕ್ಕೆ ಹಿಂತಿರುಗಿದ್ದಾಗಿ ಸಂತ್ರಸ್ತೆಯ ಪತಿ ಹೇಳಿದ್ದಾರೆ.
ಮಹಿಳೆ ನೀಡಿದ ದೂರನ್ನು ಆಧರಿಸಿ ಆರೋಪಿ ವೈದ್ಯನ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.