ಪಶ್ಚಿಮ ಬಂಗಾಳ | ಬಿಎಸ್‌ಎಫ್ ಯೋಧರ ವಿರುದ್ಧ ಯುವ ರೈತನ ಹತ್ಯೆ ಆರೋಪ

ಸಾಂದರ್ಭಿಕ ಚಿತ್ರ | PC : PTI
ಕೋಲ್ಕತಾ : ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಬಿಎಸ್‌ಎಫ್ ಸಿಬ್ಬಂದಿಗಳು ಜಹನೂರ್ ಹಕ್(24) ಎಂಬ ರೈತನನ್ನು ಗುಂಡಿಟ್ಟು ಕೊಂದಿರುವ ಆಘಾತಕಾರಿ ಘಟನೆ ನಡೆದಿದ್ದು, ಇದು ಸಮುದಾಯವನ್ನು ತಲ್ಲಣಗೊಳಿಸಿದೆ. ಎ.3ರಂದು ಭಾರತ-ಬಾಂಗ್ಲಾದೇಶ ಗಡಿ ಪ್ರದೇಶದಲ್ಲಿ ಈ ದುರಂತ ಘಟನೆ ಸಂಭವಿಸಿದ್ದು, ಬಿಎಸ್‌ಎಫ್ ಜಹನೂರ್ ಗೆ ಕ್ರೂರ ಚಿತ್ರಹಿಂಸೆಯನ್ನು ನೀಡಿ ಕೊಂದಿದೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಮೂಲತಃ ಭೋರಾಮ್ ಪಿಯಾಸಿ ಗ್ರಾಮದ ಹಕ್ ರನ್ನು ಬಿಎಸ್‌ಎಫ್ ಸಿಬ್ಬಂದಿಗಳು ತಡೆದಿದ್ದರು ಮತ್ತು ಆತನನ್ನು ವಿವಸ್ತ್ರಗೊಳಿಸಿ ಥಳಿಸಿದ್ದರು ಎನ್ನಲಾಗಿದೆ.
ಹಕ್ ರನ್ನು ಕೊಲ್ಲುವ ಮುನ್ನ ಬಿಎಸ್‌ಎಫ್ ಸಿಬ್ಬಂದಿಗಳು ಅವರಿಗೆ ತೀವ್ರ ಚಿತ್ರಹಿಂಸೆ ನೀಡಿದ್ದರು ಎಂದು ಕುಟುಂಬವು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದೆ. ಆತ ಮುಸ್ಲಿಮ್ ಎಂಬ ಏಕೈಕ ಕಾರಣದಿಂದ ಅವರು ಅವಮಾನಿಸಿದ್ದರು ಮತ್ತು ನಿರ್ದಯವಾಗಿ ಥಳಿಸಿದ್ದರು ಎಂದು ಮೃತರ ಸಂಬಂಧಿಯೋರ್ವರು ಹೇಳಿದರು.
ಹತ್ಯೆಯ ಭಯಾನಕ ವಿವರಗಳನ್ನು ನೀಡಿದ ಪ್ರತ್ಯಕ್ಷದರ್ಶಿಗಳು, ಓರ್ವ ಬಿಎಸ್‌ಎಫ್ ಸಿಬ್ಬಂದಿ ಹಕ್ ರನ್ನು ನೆಲಕ್ಕೆ ಕೆಡವಿ ಆತನ ಎದೆಯ ಮೇಲೆ ಹತ್ತಿ ಸಮೀಪದಿಂದ ಗುಂಡು ಹಾರಿಸಿದ್ದ. ಇನ್ನೋರ್ವ ಸಿಬ್ಬಂದಿ ಕಾಲು ಮತ್ತು ತಲೆಗೆ ಗುಂಡು ಹಾರಿಸಿದ್ದ. ಇದರಿಂದಾಗಿ ಹಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು ಎಂದು ತಿಳಿಸಿದ್ದಾರೆ. ಘಟನೆಯ ಕ್ರೂರ ಸ್ವರೂಪದ ಹೊರತಾಗಿಯೂ ಶವವನ್ನು ಆರು ಗಂಟೆಗಳ ಕಾಲ ರಸ್ತೆಯಲ್ಲಿಯೇ ಬಿಡಲಾಗಿತ್ತು ಮತ್ತು ಗ್ರಾಮಸ್ಥರು ಹಾಗೂ ಕುಟುಂಬ ವರ್ಗದವರು ಸಮೀಪಿಸುವುದನ್ನು ಬಿಎಸ್‌ಎಫ್ ಸಿಬ್ಬಂದಿಗಳು ತಡೆದಿದ್ದರು ಎಂದು ಹೇಳಲಾಗಿದೆ.
ಹಕ್ ಕಳ್ಳ ಸಾಗಾಣಿಕೆಯಲ್ಲಿ ಭಾಗಿಯಾಗಿದ್ದರು ಎಂದು ಹೇಳುವ ಮೂಲಕ ಬಿಎಸ್‌ಎಫ್ ಹತ್ಯೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಈ ಸಂಬಂಧ ಅಧಿಕೃತ ತನಿಖೆಯನ್ನು ಆರಂಭಿಸಲಾಗಿಲ್ಲ ಮತ್ತು ಭಾಗಿಯಾಗಿದ್ದ ಯೋಧರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗಿಲ್ಲ.
ಈ ಬಗ್ಗೆ ಸ್ಥಳೀಯ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.