ಮುಂದುವರಿದ ಕಿರಿಯ ವೈದ್ಯರ ಮುಷ್ಕರ | ಮಾತುಕತೆಗೆ ಆಹ್ವಾನಿಸಿದ ಪಶ್ಚಿಮ ಬಂಗಾಳ ಸರಕಾರ

Update: 2024-09-11 15:40 GMT

ಸಾಂದರ್ಭಿಕ ಚಿತ್ರ |  PC : PTI 

ಕೋಲ್ಕತಾ : ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳ ಸರಕಾರ ಹಾಗೂ ಕಿರಿಯ ವೈದ್ಯರ ನಡುವೆ ಮುಂದುವರಿದಿರುವ ಬಿಕ್ಕಟ್ಟನ್ನು ಬಗೆಹರಿಸಲು ಕರೆಯಲಾದ ಸಭೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉಪಸ್ಥಿತರಿರಬೇಕೆಂದು ಪ್ರತಿಭಟನಕಾರರು ಪಟ್ಟು ಹಿಡಿದಿದ್ದಾರೆ.

ಅಲ್ಲದೆ ಸಭೆಯಲ್ಲಿ 30 ಮಂದಿ ಸದಸ್ಯರ ನಿಯೋಗವು ಪಾಲ್ಗೊಳ್ಳುವುದಕ್ಕೆ ಅವಕಾಶ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಮಾತುಕತೆಯು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವಂತೆ ಮಾಡಲು ಸಭೆಯನ್ನು ಮಾಧ್ಯಮಗಳಲ್ಲಿ ನೇರ ಪ್ರಸಾರ ಮಾಡಬೇಕೆಂದು ಅವರು ಬೇಡಿಕೆಯನ್ನಿರಿಸಿದ್ದಾರೆ.

ಪಶ್ಚಿಮಬಂಗಾಳ ಸರಕಾರದ ಮುಖ್ಯ ಕಾರ್ಯದರ್ಶಿಯವರು ಬುಧವಾರ ಸಂಜೆ 5:23ರ ವೇಳೆಗೆ ಪ್ರತಿಭಟನನಿರತ ವೈದ್ಯರಿಗೆ ಈಮೇಲ್ ಪತ್ರವನ್ನು ಬರೆದು ಬುಧವಾರ ಸಂಜೆ 6 ಗಂಟೆಗೆ ಪಶ್ಚಿಮಬಂಗಾಳದ ಸಚಿವಾಲಯದಲ್ಲಿ ನಡೆಸುವ ಸಭೆಯಲ್ಲಿ ಪಾಲ್ಗೊಳ್ಲುವಂತೆ ಆಹ್ವಾನಿಸಿದ್ದರು. ಆದರೆ ರಾಜ್ಯ ಸಚಿವಾಲಯದಲ್ಲಿ ಆಯೋಜಿಸಲಾದ ಸಭೆಗೆ ತಾವು ಹಾಜರಾಗುವ ಬಗ್ಗೆ ಕಿರಿಯ ವೈದ್ಯರು ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

ಪಶ್ಚಿಮಬಂಗಾಳ ಸರಕಾರವ ಪ್ರತಿಭಟನಾ ನಿರತ ಕಿರಿಯ ವೈದ್ಯರಿಗೆ ರವಾನಿಸಿರುವ ಇಮೇಲ್ ಸಂದೇಶದಲ್ಲಿ, ‘‘12-15 ಸಹದ್ಯೋಗಿಗಳನ್ನು ಒಳಗೊಂಡ ನಿಯೋಗವನ್ನು ರಾಜ್ಯ ಸಚಿವಾಲಯ ‘ನಬನ್ನಾ’ದಲ್ಲಿ ಮಾತುಕತೆಗಾಗಿ ಆಹ್ವಾನಿಸುತ್ತಿದ್ದೇವೆ. ಸಭೆಯಲ್ಲಿ ಪಾಲ್ಗೊಳ್ಳುವ ನಿಮ್ಮ ನಿಯೋಗದ ಸದಸ್ಯರ ಪಟ್ಟಿಯನ್ನು ಇಮೇಲ್ ಮೂಲಕ ಕಳುಹಿಸಿಕೊಡಬೇಕೆಂದು ಕೋರುತ್ತೇವೆ. ನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆಗೆ ಹಾಗೂ ಫಲಪ್ರದವಾದ ಮಾತುಕತೆಗಾಗಿ ಎದುರುನೋಡುತ್ತಿದ್ದೇವೆ’’ಎಂದು ತಿಳಿಸಿತ್ತು. ಆದರೆ ಸಭೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲ್ಗೊಳ್ಳುವರೇ ಅಥವಾ ಇಲ್ಲವೇ ಎಂಬ ಇಮೇಲ್‌ನಲ್ಲಿ ಉಲ್ಲೇಖಿಸಲಾಗಿಲ್ಲ.

ಇದಕ್ಕೆ ಉತ್ತರವಾಗಿ ಪ್ರತಿಭಟನಾ ನಿರತ ವೈದ್ಯರು ರಾಜ್ಯ ಕಾರ್ಯದರ್ಶಿಯವರಿಗೆ ಇಮೇಲ್ ಕಳುಹಿಸಿದ್ದು, ಯಾವುದೇ ಸಮಯದಲ್ಲಿ ಅಥವಾ ಯಾವುದೇ ಸ್ಥಳದಲ್ಲಿ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ ಹಾಗೂ ಇಡೀ ಮಾತುಕತೆಯ ನೇರ ಪ್ರಸಾರ ನಡೆಯಬೇಕು ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉಪಸ್ಥಿತರಿರಬೇಕೆಂಬ ಬೇಡಿಕೆಯನ್ನು ಮುಂದಿರಿಸಿದ್ದಾರೆಂದು ಕಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.

ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣವನ್ನು ಖಂಡಿಸಿಕಿರಿಯ ವೈದ್ಯರಗಳು ರಾಜ್ಯ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯಾಲಯ ಸ್ವಾಸ್ಥ್ಯಭವನದ ಹೊರಗೆ 22 ತಾಸುಗಳಿಗೂ ಅಧಿಕ ಸಮಯದಿಂದ ಮುಷ್ಕರವನ್ನು ನಡೆಸುತ್ತಿದ್ದಾರೆ.

ಕೋಲ್ಕತಾ ಪೊಲೀಸ್ ಆಯುಕ್ತ ವಿನೀತ್ ಗೋಯಲ್, ರಾಜ್ಯ ಆರೋಗ್ಯ ಇಲಾಖೆಯ ಕಾರ್ಯದರ್ಶಿ , ರಾಜ್ಯ ಆರೋಗ್ಯ ಶಿಕ್ಷಣ ನಿರ್ದೇಶಕ (ಡಿಎಚ್‌ಇ) ಹಾಗೂ ಆರೋಗ್ಯ ಸೇವೆಗಳ ನಿರ್ದೇಶಕ (ಡಿಎಚ್‌ಎಸ್)ರನ್ನು ವಜಾಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಪಶ್ಚಿಮಬಂಗಾಳದಾದ್ಯಂತ ಸೇವೆ ಸಲ್ಲಿಸುತ್ತಿರುವ ಮಹಿಳಾ ವೈದ್ಯಕೀಯ ವೃತ್ತಿಪರರಿಗೆ ಸೂಕ್ತವಾದ ಸುರಕ್ಷತಾ ಹಾಗೂ ಭದ್ರತಾ ಸೌಲಭ್ಯಗಳನ್ನು ಒದಗಿಸುವಂತೆಯೂ ಅವರು ಆಗ್ರಹಿಸಿದ್ದಾರೆ.

ಸೆಪ್ಟೆಂಬರ್ 10ರಂದು ಸಂಜೆ 5 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸುಪ್ರೀಂಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿ ಕಿರಿಯ ವೈದ್ಯರುಗಳು ಪ್ರತಿಭಟನೆಯನ್ನು ಮುಂದುವರಿಸಿದ್ದು, ಬುಧವಾರ ಅವರ ಮುಷ್ಕರ 33ನೇ ದಿನಕ್ಕೆ ಕಾಲಿರಿಸಿದೆ.

ಆರ್.ಜಿ.ಕರ್ ವೈದ್ಯಕೀಯ ಕಾಲೇಜ್ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ತರಬೇತಿ ನಿರತ ಕಿರಿಯ ವೈದ್ಯೆಯ ಮೃತದೇಹವು ಆಗಸ್ಟ್ 9ರಂದು ಪತ್ತೆಯಾಗಿತ್ತು. ಆಕೆಯ ಅತ್ಯಾಚಾರಗೈದು ಕೊಲೆ ಮಾಡಿದ ಆರೋಪದಲ್ಲಿ ನಾಗರಿಕ ಕಾರ್ಯಕರ್ತನೊಬ್ಬನನ್ನು ಬಂಧಿಸಲಾಗಿತ್ತು. ಕಲ್ಕತಾ ಹೈಕೋರ್ಟ್ ಆದೇಶದಂತೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News