ಪಶ್ಚಿಮ ಬಂಗಾಳ: ಮೂರು ಟಿವಿ ಚಾನಲ್ ಗಳನ್ನು ಬಹಿಷ್ಕರಿಸಿದ ಟಿಎಂಸಿ

Update: 2024-09-02 11:00 GMT

ಮಮತಾ ಬ್ಯಾನರ್ಜಿ | PC : PTI 

ಕೋಲ್ಕತ್ತಾ: ಆರ್ಜಿ ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ಕಾವೇರಿರುವ ಮಧ್ಯೆ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತನ್ನ ಪಕ್ಷದ ವಕ್ತಾರರನ್ನು ಮೂರು ಟಿವಿ ಚಾನೆಲ್ ಚರ್ಚೆಗಳಿಗೆ ಕಳುಹಿಸದಿರಲು ನಿರ್ಧರಿಸಿದ್ದು, ಮೂರು ವಾಹಿನಿಗಳು ಬಂಗಾಳದ ವಿರುದ್ಧವಾಗಿ ಪ್ರಚಾರವನ್ನು ಮಾಡುತ್ತಿದೆ ಎಂದು ಆರೋಪಿಸಿದೆ.

ಬಂಗಾಳ ವಿರೋಧಿ ಅಜೆಂಡಾವನ್ನು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿ ಎಬಿಪಿ ಆನಂದ, ರಿಪಬ್ಲಿಕ್ ಮತ್ತು ಟಿವಿ9ನಂತಹ ಚಾನೆಲ್ ಗಳಿಗೆ ತನ್ನ ವಕ್ತಾರರನ್ನು ಕಳುಹಿಸದಿರಲು ಟಿಎಂಸಿ ನಿರ್ಧರಿಸಿದೆ.

ಟಿವಿ ಚಾನಲ್ ಗಳ ಚರ್ಚಾ ವೇದಿಕೆಗಳಲ್ಲಿ ಪಕ್ಷದ ಬೆಂಬಲಿಗರು ಅಥವಾ ಸಹಾನುಭೂತಿ ಹೊಂದಿರುವ ವ್ಯಕ್ತಿಗಳು ಭಾಗವಹಿಸಲು ಪಕ್ಷದಿಂದ ಅಧಿಕಾರ ಹೊಂದಿಲ್ಲ ಮತ್ತು ಚರ್ಚೆಗಳಲ್ಲಿ ಭಾಗವಹಿಸುವವರು ನಮ್ಮ ಅಧಿಕೃತ ನಿಲುವನ್ನು ಪ್ರತಿನಿಧಿಸುವುದಿಲ್ಲವಾದ್ದರಿಂದ ನಾವು ಪಶ್ಚಿಮ ಬಂಗಾಳದ ಜನರನ್ನು ದಾರಿತಪ್ಪಿಸಬೇಡಿ ಎಂದು ನಾವು ಸ್ಪಷ್ಟಪಡಿಸುತ್ತೇವೆ. ಬಂಗಾಳದ ಜನರು ಈ ಅಪವಿತ್ರ ಬಾಂಗ್ಲಾ ವಿರೋಧಿ ಕನೆಕ್ಸನ್‌ ಅನ್ನು ನಿರಂತರವಾಗಿ ತಿರಸ್ಕರಿಸಿದ್ದಾರೆ ಮತ್ತು ಯಾವಾಗಲೂ ಪ್ರಚಾರಕ್ಕಿಂತ ಸತ್ಯವನ್ನು ಆರಿಸಿಕೊಂಡಿದ್ದಾರೆ ಎಂದು ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್ ನಲ್ಲಿ ಅವರು ಉಲ್ಲೇಖಿಸಿದ್ದಾರೆ.

ಎಬಿಪಿ ಆನಂದ ಟಿವಿ ಚರ್ಚೆಯಲ್ಲಿ ತೃಣಮೂಲದ ಹಿರಿಯ ನಾಯಕ ಮತ್ತು ಸಂಸದ ಕಾಕೋಲಿ ಘೋಷ್ ದಸ್ತಿದಾರ್ ಮತ್ತು ಬಿಜೆಪಿ ಶಾಸಕ ಅಗ್ನಿಮಿತ್ರ ಪಾಲ್ ನಡುವಿನ ಜಟಾಪಟಿ ಕೆಲವು ದಿನಗಳ ನಂತರ ಈ ಆದೇಶ ಬಂದಿದೆ. ಲೋಕಸಭೆಯಲ್ಲಿ ತೃಣಮೂಲ ಪಕ್ಷದ ಉಪನಾಯಕ ಎಂಎಸ್ ದಸ್ತಿದಾರ್ ಅವರು ಪ್ರಮುಖ ಫ್ಯಾಷನ್ ಡಿಸೈನರ್ ಎಂಎಸ್ ಪಾಲ್ ಅವರನ್ನು ʼಸಾರಿ ಮೇಕರ್" ಎಂದು ಕರೆದಿದ್ದರು. ತನ್ನ ವೃತ್ತಿಯ ಬಗ್ಗೆ ನನಗೆ ಅಪಾರವಾದ ಹೆಮ್ಮೆ ಇದೆ ಎಂದು ಈ ಬಗ್ಗೆ ಎಮ್ಎಸ್ ಪಾಲ್ ಪ್ರತಿಕ್ರಿಯಿಸಿದ್ದಾರೆ. ಮಮತಾ ಬ್ಯಾನರ್ಜಿ ಸರ್ಕಾರವು ಅಪರಾಧಿಗಳಿಗೆ ಆಶ್ರಯ ನೀಡುತ್ತದೆ ಮತ್ತು ಮಹಿಳೆಯರನ್ನು ನಿರ್ಲಕ್ಷಿಸುತ್ತದೆ ಎಂದು ಬಿಜೆಪಿ ಶಾಸಕರು ಆರೋಪಿಸಿದ್ದರು.

ಇದೇ ಕಾರ್ಯಕ್ರಮದಲ್ಲಿ ಎಂಎಸ್ ದಸ್ತಿದಾರ್ ಅವರ ಇನ್ನೊಂದು ಹೇಳಿಕೆ ಕೂಡ ಚರ್ಚೆಗೆ ಕಾರಣವಾಗಿತ್ತು. ಅವರ ವಿವಾದಾತ್ಮಕ ಹೇಳಿಕೆಗೆ ಮಹಿಳಾ ವೈದ್ಯರಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ತೃಣಮೂಲ ಸಂಸದರು ತನ್ನ ಹೇಳಿಕೆ ಬಗ್ಗೆ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು.

ನಂತರ ತನ್ನ ಹೇಳಿಕೆಗೆ ಕ್ಷಮೆಯಾಚಿಸಿರುವ ಎಂಎಸ್ ದಸ್ತಿದಾರ್, "ಎಬಿಪಿ ಟಾಕ್ ಶೋನಲ್ಲಿ ನೀಡಿದ ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ ಮತ್ತು ನನ್ನ ಇತ್ತೀಚಿನ ಮಾತುಗಳು ಯಾರಿಗಾದರೂ ಭಾವನೆಗಳನ್ನು ನೋಯಿಸಿದರೆ ಕ್ಷಮೆಯಾಚಿಸುತ್ತೇನೆ. ನಾನು ನನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳುತ್ತೇನೆ. ನನ್ನ ಉದ್ದೇಶವು ಯಾವಾಗಲೂ ಮಹಿಳೆಯರ ಯೋಗಕ್ಷೇಮದ ಹಿತದೃಷ್ಟಿಯದ್ದಾಗಿದೆ" ಎಂದು ಹೇಳಿದ್ದಾರೆ.

ಬೆಂಗಾಲಿ ಚಾನೆಲ್ಗಳಲ್ಲಿ ನಡೆಯುತ್ತಿರುವ ಟಿವಿ ಚರ್ಚೆಗಳು ತೃಣಮೂಲ ಮತ್ತು ಬಿಜೆಪಿ ನಾಯಕರ ನಡುವಿನ ಗುದ್ದಾಟಕ್ಕೆ ಕಾರಣವಾಗುತ್ತಿದೆ. ಇತ್ತೀಚೆಗೆ ದೇಶವನ್ನು ತಲ್ಲಣಗೊಳಿಸಿದ್ದ ಕೋಲ್ಕತ್ತಾದಲ್ಲಿ ನಡೆದ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆಡಳಿತ ಪಕ್ಷವು ಕ್ರಿಮಿನಲ್ಗಳನ್ನು ರಕ್ಷಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಪ್ರತಿಪಕ್ಷ ಬಿಜೆಪಿ ಮತ್ತು ಸಿಪಿಎಂ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ಆಡಳಿತಾರೂಢ ತೃಣಮೂಲ ಪಕ್ಷವು ಪ್ರತ್ಯಾರೋಪವನ್ನು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News