ʼವಕ್ಫ್ ಬೈ ಯೂಸರ್ʼ ಎಂದರೇನು? ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದ್ದೇಕೆ?

Update: 2025-04-17 22:51 IST
ʼವಕ್ಫ್ ಬೈ ಯೂಸರ್ʼ ಎಂದರೇನು? ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದ್ದೇಕೆ?

ಸುಪ್ರೀಂ ಕೋರ್ಟ್‌ | PC : PTI

  • whatsapp icon

ವಕ್ಫ್ ತಿದ್ದುಪಡಿ ಕಾಯಿದೆ- 2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಗುರುವಾರದ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ʼವಕ್ಫ್ ಬೈ ಯೂಸರ್ʼ ಬಗ್ಗೆ ಪ್ರಮುಖ ಪ್ರಶ್ನೆಗಳನ್ನು ಎತ್ತಿದೆ. ದಶಕಗಳಿಂದ ಭಾರತದಲ್ಲಿ ವಕ್ಫ್ ಆಸ್ತಿಗಳಿಗೆ ಮಾನ್ಯತೆಯನ್ನು ನೀಡಿದ ʼವಕ್ಫ್ ಬೈ ಯೂಸರ್ʼ ನ್ನು ನೂತನ ವಕ್ಫ್ ತಿದ್ದುಪಡಿ ಕಾಯಿದೆಯಡಿಯಲ್ಲಿ ಕೈಬಿಡಲಾಗಿದೆ. ಇದರಿಂದ ದೀರ್ಘಕಾಲದಿಂದ ಅಸ್ತಿತ್ವದಲ್ಲಿರುವ ಸಾವಿರಾರು ಧಾರ್ಮಿಕ ಕೇಂದ್ರಗಳು ಮಾನ್ಯತೆ ಕಳೆದುಕೊಳ್ಳಬಹದು ಎಂಬ ಆತಂಕ ಮೂಡಿದೆ.

ಕೇಂದ್ರ ಸರಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಕ್ಫ್ ತಿದ್ದುಪಡಿ ಕಾಯಿದೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸರಿಯಾದ ದಾಖಲಾತಿಗಳಿಲ್ಲದ ಹೆಚ್ಚಿನ ಪ್ರಮಾಣದ ಭೂಮಿಯನ್ನು ವಕ್ಫ್ ಎಂದು ಘೋಷಿಸುವ ಬಗ್ಗೆ ಕಳವಳ ಹೆಚ್ಚುತ್ತಿದೆ. ಇಂತಹ ಘೋಷಣೆಗಳು ದೇಶದ ಹಲವೆಡೆ ಗೊಂದಲ ಹಾಗೂ ವಿವಾದ ಸೃಷ್ಟಿಸಿವೆ ಎಂದು ಹೇಳಿದರು.

ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು, ʼವಕ್ಫ್ ಬೈ ಯೂಸರ್ʼನ್ನು ತೆಗೆದು ಹಾಕುವ ಬಗ್ಗೆ ಬಲವಾದ ಪ್ರಶ್ನೆಯನ್ನು ಎತ್ತಿದೆ. ತಿದ್ದುಪಡಿಯು ದಶಕಗಳಿಂದ ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಬಳಸುತ್ತಿರುವ ಸಾವಿರಾರು ಆಸ್ತಿಗಳ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ. ವಿಶೇಷವಾಗಿ ಹಳ್ಳಿಗಳು ಮತ್ತು ಕೆಲ ಅರೆಪಟ್ಟಣ ಪ್ರದೇಶಗಳಲ್ಲಿ ಹಲವಾರು ಮಸೀದಿಗಳು, ವಕ್ಫ್ ಆಸ್ತಿಗಳು ಭೂ ದಾಖಲೆಗಳನ್ನು ಹೊಂದಿಲ್ಲ.

ಗುರುವಾರ ವಿಚಾರಣೆಯ ಸಂದರ್ಭದಲ್ಲಿ ಈ ವಿಷಯದ ಬಗ್ಗೆ ವಿವರವಾದ ಪ್ರಾಥಮಿಕ ಪ್ರತಿಕ್ರಿಯೆಯನ್ನು ಸಲ್ಲಿಸಲು ನ್ಯಾಯಾಲಯ ಕೇಂದ್ರಕ್ಕೆ 7 ದಿನಗಳ ಕಾಲಾವಕಾಶವನ್ನು ನೀಡಿದೆ.

► ನೈಜ ವಕ್ಫ್‌ ಆಸ್ತಿಗಳ ಮೇಲೂ ಪ್ರಭಾವ : ಸುಪ್ರೀಂ ಕೋರ್ಟ್ ಕಳವಳ

ವಕ್ಫ್ ತಿದ್ದುಪಡಿ ಕಾಯಿದೆ ಜಾರಿಗೆ ಬಂದರೆ ನೈಜ ವಕ್ಫ್‌ ಆಸ್ತಿಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ದೀರ್ಘ ಕಾಲದಿಂದ ಬಳಕೆಯಲ್ಲಿರುವ ವಕ್ಫ್ ಆಸ್ತಿಗಳನ್ನು ಹೇಗೆ ನೋಂದಾಯಿಸುತ್ತೀರಿ? ಅವರು ಯಾವ ದಾಖಲೆಗಳನ್ನು ಹೊಂದಿರುತ್ತಾರೆ? ಇದು ವಕ್ಫ್ ಆಸ್ತಿಯನ್ನು ರದ್ದುಗೊಳಿಸಲು ಕಾರಣವಾಗಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅನೇಕ ವಕ್ಫ್ ಆಸ್ತಿಗಳನ್ನು ನ್ಯಾಯಾಲಯ ದೀರ್ಘಾವಧಿಯ ಬಳಕೆಯ ಆಧಾರದ ಮೇಲೆ ಗುರುತಿಸಿವೆ ಹೊರತು ಕಾಗದದ ಪತ್ರಗಳ ದಾಖಲೆಗಳಿಂದಲ್ಲ. ಈ ಮಾನ್ಯತೆಯನ್ನು ರದ್ದುಗೊಳಿಸುವ ಯಾವುದೇ ಕ್ರಮವು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ.

ಲಿಖಿತ ಪತ್ರಗಳ ಮೂಲಕ ಅಥವಾ ಬಳಕೆಯ ಆಧಾರದ ಮೇಲೆ ನ್ಯಾಯಾಲಯಗಳು ಈಗಾಗಲೇ ಘೋಷಿಸಿರುವ ವಕ್ಫ್ ಆಸ್ತಿಗಳನ್ನು ವಕ್ಫ್ ತಿದ್ದುಪಡಿ ಕಾಯ್ದೆ-2025ರ ವಿರುದ್ಧದ ಸವಾಲನ್ನು ಸಂಪೂರ್ಣವಾಗಿ ಪರಿಶೀಲಿಸುವವರೆಗೆ ಯಾವುದೇ ಕ್ರಮವನ್ನು ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

► 'ವಕ್ಫ್ ಬೈ ಯೂಸರ್' ಎಂದರೇನು?

ಲಿಖಿತ ದಾಖಲೆಗಳಿಲ್ಲದಿದ್ದರೂ ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ದೀರ್ಘಕಾಲದಿಂದ ಮುಕ್ತವಾಗಿ ಬಳಸುತ್ತಿದ್ದ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಗುರುತಿಸುವುದನ್ನು ʼವಕ್ಫ್ ಬೈ ಯೂಸರ್ʼ ಎಂದು ಹೇಳಲಾಗುತ್ತದೆ.

ʼವಕ್ಫ್ ಬೈ ಯೂಸರ್ʼ ಎನ್ನುವುದು ನೋಂದಣಿಯನ್ನು ಹೊಂದಿರದ ಆಸ್ತಿಗಳನ್ನು ಸೂಚಿಸುತ್ತದೆ. ಈ ಆಸ್ತಿಗಳು ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ನಿರಂತರವಾಗಿ ಸಾರ್ವಜನಿಕ ಬಳಕೆಯಲ್ಲಿರುವ ಆಸ್ತಿಗಳಾಗಿವೆ.

ಉದಾಹರಣೆಗೆ ಮಸೀದಿಗಳು, ದರ್ಗಾಗಳು, ಖಬರಸ್ತಾನಗಳು, ಮದರಸಾಗಳು ಸಾಮಾನ್ಯವಾಗಿ ಹಲವಾರು ತಲೆಮಾರುಗಳಿಂದ ಬಳಕೆಯಲ್ಲಿದೆ. ಈ ಆಸ್ತಿಗಳನ್ನು ಬಳಕೆಯ ಆಧಾರದ ಮೇಲೆ ವಕ್ಫ್ ಎಂದು ಪರಿಗಣಿಸಲಾಗುತ್ತದೆ ಹೊರತು ಇದಕ್ಕೆ ಯಾವುದೇ ದಾಖಲೆಗಳಿರುವುದಿಲ್ಲ.

ʼವಕ್ಫ್ ಬೈ ಯೂಸರ್ʼ ಯಾವುದೇ ಅಧಿಕೃತ ದಾಖಲೆಗಳು ಇಲ್ಲದಿದ್ದರೂ ಧಾರ್ಮಿಕ ಆಸ್ತಿಗಳನ್ನು ವಿಶೇಷವಾಗಿ ಭಾರತದ ಗ್ರಾಮೀಣ ಮತ್ತು ಅರೆ ಪಟ್ಟಣ ಪ್ರದೇಶಗಳಲ್ಲಿ ವಕ್ಫ್ ಕಾನೂನುಗಳ ಅಡಿಯಲ್ಲಿ ರಕ್ಷಿಸಲು ಅವಕಾಶ ಮಾಡಿಕೊಟ್ಟಿತು. ತಲ ತಲಾಂತರದಿಂದ ಆಸ್ತಿಯ ಬಳಕೆ ಮತ್ತು ಧಾರ್ಮಿಕ ಆಚರಣೆಗಳು ಆಸ್ತಿಯ ಸ್ವರೂಪಕ್ಕೆ ಸಾಕಷ್ಟು ಪುರಾವೆಯಾಗಿತ್ತು.

ಆದರೆ ವಕ್ಫ್ ತಿದ್ದುಪಡಿ ಕಾಯಿದೆ- 2025ರಲ್ಲಿ ʼವಕ್ಫ್ ಬೈ ಯೂಸರ್ʼ ಅನ್ನು ತೆಗೆದುಹಾಕಲಾಗುತ್ತದೆ. ಸರಿಯಾಗಿ ದಾಖಲಾದ ವಕ್ಫ್ ಆಸ್ತಿಗಳನ್ನು ಮಾತ್ರ ವಕ್ಫ್ ಆಸ್ತಿಗಳಾಗಿ ನೋಂದಾಯಿಸಬೇಕು ಎಂದು ಹೇಳುತ್ತದೆ. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

► ಭಾರತದಲ್ಲಿ ಕಾನೂನು ಬೆಂಬಲ

ವಕ್ಫ್ ಆಕ್ಟ್- 1995ರ ಅಡಿಯಲ್ಲಿ ʼವಕ್ಫ್ ಬೈ ಯೂಸರ್ʼ ಬರುತ್ತದೆ. ಇದು ವಕ್ಫ್ ಆಸ್ತಿಗಳನ್ನು ಗುರುತಿಸಲು, ಸಮೀಕ್ಷೆ ಮಾಡಲು ಮತ್ತು ನೋಂದಾಯಿಸಲು ರಾಜ್ಯ ವಕ್ಫ್ ಮಂಡಳಿಗಳಿಗೆ ಅವಕಾಶವನ್ನು ನೀಡುತ್ತದೆ. ಕೆಲವು ವಕ್ಫ್ ಆಸ್ತಿಗಳು ಲಿಖಿತ ಪತ್ರಗಳನ್ನು ಹೊಂದಿದ್ದರೆ, ಇತರ ಕೆಲವು ಆಸ್ತಿಗಳು ಕ್ಷೇತ್ರ ಸಮೀಕ್ಷೆಗಳು, ಸಾರ್ವಜನಿಕ ಪುರಾವೆಗಳು ಮತ್ತು ಬಳಕೆಯ ಆಧಾರದ ಮೇಲೆ ನೋಂದಾಯಿಸಲ್ಪಡುತ್ತವೆ. ಹಳ್ಳಿಗಳು ಮತ್ತು ಅರೆ ಪಟ್ಟಣಗಳಲ್ಲಿ ಅನೇಕ ಮಸೀದಿಗಳು, ದರ್ಗಾಗಳು ಮತ್ತು ಖಬರಸ್ತಾನಗಳನ್ನು ನೋಂದಣಿ ಇಲ್ಲದೆ ಶತಮಾನಗಳ ಹಿಂದೆ ನಿರ್ಮಿಸಲಾಗಿದೆ.

► ʼವಕ್ಫ್ ಬೈ ಯೂಸರ್ʼ ಗೆ ಉದಾಹರಣೆಗಳು

ಒಂದು ಹಳ್ಳಿಯಲ್ಲಿನ ಸಣ್ಣ ಮಸೀದಿಯನ್ನು 100 ವರ್ಷಗಳಿಂದ ನಮಾಝಿಗಾಗಿ ಬಳಸಲಾಗುತ್ತಿದೆ. ಆದರೆ, ಆ ಭೂಮಿಯನ್ನು ಯಾರು ದಾನ ಮಾಡಿದ್ದಾರೆ ಎಂಬುದನ್ನು ತೋರಿಸುವ ಯಾವುದೇ ಅಧಿಕೃತ ದಾಖಲೆಗಳಿರುವುದಿಲ್ಲ. ಇದನ್ನು ʼವಕ್ಫ್ ಬೈ ಯೂಸರ್ʼ ವಕ್ಫ್ ಎಂದು ಪರಿಗಣಿಸಲಾಗುತ್ತದೆ.

ದಶಕಗಳಿಂದ ಒಂದು ನಿರ್ದಿಷ್ಟ ಭೂಮಿಯನ್ನು ಖಬರಸ್ತಾನವಾಗಿ ಬಳಸಲಾಗುತ್ತಿದೆ. ಯಾವುದೇ ಹಕ್ಕುಪತ್ರ ಇಲ್ಲದಿದ್ದರೂ ವಕ್ಫ್ ಮಂಡಳಿಯು ʼವಕ್ಫ್ ಬೈ ಯೂಸರ್ʼ ಎಂದು ನೋಂದಾಯಿಸಿಕೊಳ್ಳಬಹುದು.

ಯಾವುದೇ ಔಪಚಾರಿಕ ಭೂ ದಾಖಲೆಯಿಲ್ಲದಿದ್ದರೂ, ಜನರು ತಲೆಮಾರುಗಳಿಂದ ಭೇಟಿ ನೀಡುತ್ತಿರುವ ದರ್ಗಾವನ್ನು ಅಧಿಕೃತ ಸಮೀಕ್ಷೆಯ ವೇಳೆ ವಕ್ಫ್ ಎಂದು ಪಟ್ಟಿ ಮಾಡಬಹುದು.

ಪ್ರಕ್ರಿಯೆಯು ಸಾಮಾನ್ಯವಾಗಿ ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:

ವಕ್ಫ್ ಸರ್ವೇ ಆಯುಕ್ತರು ಪ್ರತಿ ರಾಜ್ಯದಲ್ಲಿ ವಿವರವಾದ ಸಮೀಕ್ಷೆಯನ್ನು ನಡೆಸುತ್ತಾರೆ. ಸಮೀಕ್ಷೆಯ ಸಮಯದಲ್ಲಿ, ಸ್ಥಳೀಯರು ಮತ್ತು ಸಮುದಾಯದ ಮುಖಂಡರನ್ನು ಸಂಪರ್ಕಿಸಲಾಗುತ್ತದೆ. ತಲಾ ತಲಾಂತರಗಳಿಂದ ಧಾರ್ಮಿಕ ಅಥವಾ ದತ್ತಿಗಾಗಿ ಈ ಆಸ್ತಿ ಬಳಕೆಯಲ್ಲಿದೆಯಾ ಎಂದು ಪರಿಶೀಲಿಸಲಾಗುತ್ತದೆ.

ದಾನಿಗಳಾಗಿ ಯಾರೂ ಮುಂದೆ ಬರದಿದ್ದರೂ ಇವುಗಳನ್ನು ರಾಜ್ಯ ವಕ್ಫ್ ಮಂಡಳಿಯಡಿ ನೋಂದಾಯಿಸಲಾಗುತ್ತದೆ. ಆ ಆಸ್ತಿಯನ್ನು ವಕ್ಫ್ ಕಾನೂನಿನ ಅಡಿಯಲ್ಲಿ ರಕ್ಷಿಸಲಾಗುತ್ತದೆ.

ಕಂದಾಯ ಅಥವಾ ಪುರಸಭೆಯ ದಾಖಲೆಗಳಲ್ಲಿ ನೋಂದಾಯಿತ ಹೆಸರು ಇನ್ನೂ ಸರಕಾರಿ ಭೂಮಿ ಅಥವಾ ಸಾರ್ವಜನಿಕ ಭೂಮಿ ಎಂದು ತೋರಿಸಬಹುದು. ಆದರೆ, ಅದನ್ನು ಬಳಕೆದಾರರಿಂದ ವಕ್ಫ್ ಎಂದು ಘೋಷಿಸಿದರೆ. ಅದನ್ನು ಮಾರಾಟ ಮಾಡಲು, ವರ್ಗಾಯಿಸಲು ಅಥವಾ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ.

► ಏನಿದು ವಿವಾದ?

‘ವಕ್ಫ್ ಬೈ ಯೂಸರ್ʼ ವರ್ಗದ ಅಡಿಯಲ್ಲಿ ಅನೇಕ ಆಸ್ತಿಗಳನ್ನು ವಕ್ಫ್ ಆಸ್ತಿಗಳು ಎಂದು ತಪ್ಪಾಗಿ ಘೋಷಿಸಲಾಗಿದೆ. ಇದು ಜಮೀನಿನ ಮಾಲಿಕತ್ವದ ಕುರಿತ ವಿವಾದಗಳು ಮತ್ತು ಅತಿಕ್ರಮಣಗಳಿಗೆ ಕಾರಣವಾಗುತ್ತದೆ ಎಂದು ಕೇಂದ್ರವು ವಾದಿಸುತ್ತದೆ. ವಕ್ಫ್ ಕಾಯಿದೆಗೆ ತಿದ್ದುಪಡಿ ಮಾಡುವುದರಿಂದ ನೈಜ ವಕ್ಫ್ ಆಸ್ತಿಗಳ ಕಾನೂನು ಮಾನ್ಯತೆಯನ್ನು ಇದು ರದ್ದು ಮಾಡುವ ಸಾಧ್ಯತೆ ಇದೆ ಎಂದು ವಿಮರ್ಶಕರು ಹೇಳುತ್ತಾರೆ.

► ಮುಂದೆ ಏನು?

‘ವಕ್ಫ್ ಬೈ ಯೂಸರ್ʼ ಗೆ ತಿದ್ದುಪಡಿ ಮಾಡಿದರೆ ಅಂತಹ ಆಸ್ತಿಗಳ ಬಗ್ಗೆ ಯಾವ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರವನ್ನು ಕೇಳಿದೆ. ವಿಚಾರಣೆಯ ಮುಂದಿನ ಹಂತದಲ್ಲಿ ತಿದ್ದುಪಡಿಯನ್ನು ಮುಂದುವರಿಸಲಾಗುವುದೇ ಅಥವಾ ತಲತಲಾಂತರಗಳಿಂದ ಬಳಸುತ್ತಾ ಬಂದ ವಕ್ಫ್ ಭೂಮಿಯನ್ನು ರಕ್ಷಿಸಲು ಕಾಯಿದೆಗೆ ತಿದ್ದುಪಡಿ ಸೂಚಿಸಲಾಗುತ್ತೋ ಎನ್ನುವುದು ಇನ್ನಷ್ಟೇ ಬಹಿರಂಗವಾಗಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News