ದುಬೈಯವರೊಂದಿಗೆ ನೀವು ಮಾಡಿಕೊಂಡಿರುವ ಒಪ್ಪಂದ ಯಾವುದು?: ಬೆಟ್ಟಿಂಗ್ ಆ್ಯಪ್ ಕುರಿತು ಪ್ರಧಾನಿಗೆ ಛತ್ತೀಸ್‌ಗಢ ಸಿಎಂ ತಿರುಗೇಟು
ಹೊಸದಿಲ್ಲಿ: ಮಹಾದೇವ್ ಬೆಟ್ಟಿಂಗ್ ಆ್ಯಪ್ ವಿವಾದಕ್ಕೆ ಸಂಬಂಧಿಸಿ ತನ್ನ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಆರೋಪಗಳಿಗೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಶನಿವಾರ ತಿರುಗೇಟು ನೀಡಿದ್ದಾರೆ.
‘‘ದುಬೈಯವರೊಂದಿಗೆ ನೀವು ಮಾಡಿಕೊಂಡಿರುವ ಯಾವ ಒಪ್ಪಂದವು ಆ್ಯಪನ್ನು ಮುಚ್ಚದಂತೆ ಮತ್ತು ಅದರ ಮಾಲಕರನ್ನು ಬಂಧಿಸದಂತೆ ನಿಮ್ಮನ್ನು ತಡೆಯುತ್ತಿದೆ?’’ ಎಂದು ಅವರು ಪ್ರಶ್ನಿಸಿದ್ದಾರೆ.
‘‘ದುಬೈಯವರೊಂದಿಗೆ ನಿಮ್ಮ ಸಂಬಂಧ ಏನು ಎಂದು ಪ್ರಧಾನಿ ಮೋದಿ ಕೇಳುತ್ತಿದ್ದಾರೆ. ದುಬೈಯವರೊಂದಿಗೆ ನೀವು ಹೊಂದಿರುವ ಸಂಬಂಧ ಏನು ಎಂದು ನಾನು ಅವರನ್ನು ಕೇಳಬಯಸುತ್ತೇನೆ. ಲುಕೌಟ್ ಸುತ್ತೋಲೆ ನೀಡಿದ ಬಳಿಕವೂ ಯಾಕೆ ಯಾರನ್ನೂ ಬಂಧಿಸಲಾಗಿಲ್ಲ? ಅಕ್ರಮದಲ್ಲಿ ಶಾಮೀಲಾಗಿರುವವರನ್ನು ಬಂಧಿಸುವುದು ಭಾರತ ಸರಕಾರದ ಕರ್ತವ್ಯವಾಗಿದೆ’’ ಎಂದು ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಬಾಘೆಲ್ ಹೇಳಿದರು.
‘‘ಮಹಾದೇವ್ ಆ್ಯಪನ್ನು ಯಾಕೆ ನೀವು ಈವರೆಗೆ ಮುಚ್ಚಿಲ್ಲ? ಆ್ಯಪನ್ನು ಮುಚ್ಚುವುದು ಭಾರತ ಸರಕಾರದ ಕರ್ತವ್ಯವಾಗಿದೆ. ಅವರೊಂದಿಗೆ ನಿಮ್ಮ ವ್ಯವಹಾರ ಏನು ಎಂದು ನಾನು ಪ್ರಧಾನಿಯನ್ನು ಕೇಳಬಯಸುತ್ತೇನೆ. ಯಾವುದೇ ವ್ಯವಹಾರ ಇಲ್ಲದಿದ್ದರೆ ಯಾಕೆ ನೀವು ಆ್ಯಪನ್ನು ಮುಚ್ಚುವುದಿಲ್ಲ?’’ ಎಂದು ಅವರು ಪ್ರಶ್ನಿಸಿದರು.
‘‘ಅವರು (ಪ್ರಧಾನಿ ಮೋದಿ) ಯಾವುದೇ ತನಿಖೆಯಿಲ್ಲದೆ ಆರೋಪಗಳನ್ನು ಮಾಡುತ್ತಿದ್ದಾರೆ. ಈಡಿ ಮತ್ತು ಐಟಿಗಳು ಈಗ ಎಲ್ಲೆಂದರಲ್ಲಿ ತಿರುಗಾಡುತ್ತಿವೆ. ಇದು ನಿಮ್ಮಲ್ಲಿ ಏನೂ ಬಂಡವಾಳವಿಲ್ಲ ಎನ್ನುವುದನ್ನು ತೋರಿಸುತ್ತದೆ’’ ಎಂದು ಬಘೇಲ್ ಹೇಳಿದರು.