ಅಪಹರಣಕ್ಕೀಡಾಗಿದ್ದ ಪುತ್ರನೊಂದಿಗೆ 30 ವರ್ಷಗಳ ನಂತರ ಮತ್ತೆ ಒಂದಾದ ಮಹಿಳೆ!
ಘಾಝಿಯಾಬಾದ್: 30 ವರ್ಷಗಳ ಹಿಂದೆ ಹಾಡಹಗಲೇ ಅಪಹರಣಕ್ಕೀಡಾಗಿದ್ದ ತಮ್ಮ ಪುತ್ರ ಭೀಮ್ ಸಿಂಗ್ ನೊಂದಿಗೆ ಘಾಝಿಯಾಬಾದ್ ನ 58 ವರ್ಷದ ಲೀಲಾವತಿ ಎಂಬ ಮಹಿಳೆಯು ಮತ್ತೆ ಒಂದಾಗಿರುವ ವಿಸ್ಮಯಕಾರಿ ಘಟನೆ ವರದಿಯಾಗಿದೆ. ಈಗ 40 ವರ್ಷ ವಯಸ್ಸಿನವರಾಗಿರುವ ಭೀಮ್ ಸಿಂಗ್ ನನ್ನು ತಮ್ಮ ಕಾಣೆಯಾಗಿದ್ದ ಪುತ್ರ ಎಂದು ಲೀಲಾವತಿ ಗುರುತಿಸಿದ್ದು, ಅವರಿಬ್ಬರ ಭಾವನಾತ್ಮಕ ಸಮ್ಮಿಲನಕ್ಕೆ ಉತ್ತರ ಪ್ರದೇಶದ ಘಾಝಿಯಾಬಾದ್ ನ ಖೋಡಾ ಪೊಲೀಸ್ ಠಾಣೆ ಸಾಕ್ಷಿಯಾಯಿತು.
ಶುಕ್ರವಾರ The Indian Express ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಲೀಲಾವತಿಯ ಭರವಸೆ ಮತ್ತು ಹತಾಶೆಯ ಪಯಣ 1993ರಲ್ಲಿ ಶಾಲೆಯಿಂದ ಮರಳುತ್ತಿದ್ದ ತಮ್ಮ ಪುತ್ರ ಅಪಹರಣಕ್ಕೀಡಾದಾಗಿನಿಂದ ಪ್ರಾರಂಭಗೊಂಡಿತು ಎಂದು ಹೇಳಲಾಗಿದೆ. ಹಲವಾರು ವರ್ಷಗಳಿಂದ ಲೀಲಾವತಿ ಪೊಲೀಸರಿಂದ ಹಲವು ಕರೆಗಳನ್ನು ಸ್ವೀಕರಿಸಿದ್ದು, ಪ್ರತಿ ಬಾರಿಯೂ ಪತ್ತೆಯಾಗಿರುವ ವ್ಯಕ್ತಿ ನಿಮ್ಮ ಪುತ್ರನಿರಬಹುದು ಎಂಬ ಮಾಹಿತಿ ನೀಡಿದ್ದಾರೆ. ಆದರೆ, ಅವರ ದೈಹಿಕ ಚಹರೆಗಳು ಹೋಲಿಕೆಯಾಗದ್ದರಿಂದ, ಲೀಲಾವತಿಯವರ ಭರವಸೆಗಳೆಲ್ಲ ಮುರುಟಿ ಹೋಗಿದ್ದವು.
ಈ ಕುರಿತು ಪ್ರತಿಕ್ರಿಯಿಸಿರುವ ಲೀಲಾವತಿ, “ಈ ಹಿಂದೆ ಹಲವು ಬಾರಿ ನಡೆದಿದ್ದಂತೆ ಇಂದೂ ಕೂಡಾ ಪುನಾರವರ್ತನೆಯಾಗಿರಬಹುದು ಎಂದು ನಾನು ಭಾವಿಸಿದ್ದೆ” ಎಂದು ಮೆಲುಕು ಹಾಕುತ್ತಾರೆ. “ನನ್ನ ಎದುರಿಗೆ ವ್ಯಕ್ತಿಯೊಬ್ಬನನ್ನು ನಿಲ್ಲಿಸುತ್ತಿದ್ದ ಪೊಲೀಸರು, ಈ ವ್ಯಕ್ತಿ ನಿಮ್ಮ ಪುತ್ರನೇ ಗುರುತಿಸಿ ಎಂದು ಸೂಚಿಸುತ್ತಿದ್ದರು. ಅವರು ಕರೆ ಮಾಡಿದಾಗಲೆಲ್ಲ, ನಾನು ನನ್ನ ಪುತ್ರನ ದೇಹದ ಮೇಲಿರುವ ಗುರುತುಗಳ ಕುರಿತು ಹೇಳುತ್ತಿದ್ದೆ. ಆ ಗುರುತುಗಳು ಎಂದಿಗೂ ತಾಳೆಯಾಗುತ್ತಿರಲಿಲ್ಲ ಹಾಗೂ ಅಲ್ಲಿಂದ ನಾನು ನಿರಾಶೆಯಿಂದ ಮರಳುತ್ತಿದ್ದೆ” ಎಂದು ಹೇಳಿದ್ದಾರೆ.
ಪದೇ ಪದೇ ನಿರಾಶೆಯಾಗುತ್ತಿದ್ದರೂ, ಲೀಲಾವತಿ ಅವರ ಹೃದಯದಲ್ಲಿ ಸಣ್ಣ ಭರವಸೆಯ ಕಿಡಿಯೊಂದು ಉಳಿದುಕೊಂಡಿತ್ತು. ಈ ತಿಂಗಳ ಆರಂಭದಲ್ಲಿ ಮತ್ತೆ ಪೊಲೀಸರಿಂದ ಕರೆ ಬಂದಾಗ, “ಒಂದು ವೇಳೆ ಅವರು ನಿಜಕ್ಕೂ ಪತ್ತೆ ಹಚ್ಚಿದ್ದರೆ?” ಎಂದು ಯೋಚಿಸಿ, ಪೊಲೀಸ್ ಠಾಣೆಗೆ ತೆರಳಲು ನಿರ್ಧರಿಸಿದ್ದಾರೆ.
ಕೋಡಾ ಪೊಲೀಸ್ ಠಾಣೆಗೆ ತಲುಪಿದಾಗ, ಪತ್ತೆಯಾಗಿರುವ ವ್ಯಕ್ತಿಯನ್ನು ಗುರುತಿಸುವಂತೆ ಲೀಲಾವತಿಗೆ ಪೊಲೀಸರು ಸೂಚಿಸಿದ್ದಾರೆ. ಆಕೆಯನ್ನು ನೋಡುತ್ತಿದ್ದಂತೆಯೆ ಆ ವ್ಯಕ್ತಿ, “ಇದು ನನ್ನ ತಾಯಿ” ಎಂದು ಕೂಗಿದ್ದಾನೆ. ಅದನ್ನು ಕೇಳಿ ಲೀಲಾವತಿಗೆ ನಂಬಿಕೆ ಬಾರದಾಗಿದೆ, ಹಿಂಜರಿಕೆ ಉಂಟಾಗಿದೆ. ಆದರೆ, ಮತ್ತೆ ಆ ವ್ಯಕ್ತಿ ಅವರನ್ನು ತನ್ನ ತಾಯಿ ಎಂದು ಕರೆದಾಗ, ಲೀಲಾವತಿಯ ಕಣ್ಣುಗಳಿಂದ ಆನಂದ ಭಾಷ್ಪ ಜಾರಿದೆ. ಆ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಲು ನೆರವಾದ ವಿವರಗಳು ಲೀಲಾವತಿಗೆ ಮಾತ್ರ ತಿಳಿದಿದ್ದವು. ಅವು ತಮ್ಮ ಪುತ್ರನ ದೇಹದ ಮೇಲಿದ್ದ ಗುರುತುಗಳು. ಭೀಮ್ ಸಿಂಗ್ ನ ಬಲಗಾಲಿನ ಮೇಲೆ ಮಚ್ಚೆ ಇತ್ತು. ಎಡಗಿವಿಯ ಮೇಲೆ ಕಲೆ ಇತ್ತು. ಹಣೆಯ ಮೇಲೆ ಸೀಳಿದ ಗುರುತಿತ್ತು. ಸಪಾಟಾದ ತಲೆಯಿತ್ತು. ಇವೆಲ್ಲವನ್ನೂ ಗುರುತಿಸಿದ ಲೀಲಾವತಿ, “ಈತನೇ ನನ್ನ ಪುತ್ರ” ಎಂದು ದೃಢಪಡಿಸಿದ್ದಾರೆ.