ಹಾದಿಯಾ ಎಲ್ಲಿದ್ದಾಳೆ?

"ನನ್ನ ತಂದೆ ಮಾಡುತ್ತಿರುವ ಆರೋಪಗಳು ನನ್ನ ಮೇಲೆ ಮಾನಸಿಕವಾಗಿ ಪರಿಣಾಮ ಬೀರುತ್ತಿವೆ. ನನ್ನ ಕೌಟುಂಬಿಕ ಜೀವನದ ಮೇಲೂ ಪರಿಣಾಮ ಬೀರಿದೆ. ನನ್ನ ವೈಯುಕ್ತಿಕ ಜೀವನದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತಿದೆ. ನಾನು ಅಪ್ಪ ಅಮ್ಮನ ಜೊತೆ ಫೋನ್ ಮೂಲಕ ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದೇನೆ. ಎರಡು ದಿನಗಳ ಹಿಂದಷ್ಟೇ ಮಾತನಾಡಿದ್ದೇನೆ. ಅದರೆ ಅಪ್ಪ ಇಲ್ಲ ಸಲ್ಲದ್ದನ್ನು ಹೇಳಿ ಮಾನಸಿಕವಾಗಿ ನೋವುಂಟು ಮಾಡುತ್ತಿದ್ದಾರೆ"

Update: 2023-12-10 10:12 GMT

ಕೊಚ್ಚಿ : 2016ರಲ್ಲಿ ಇಸ್ಲಾಂ ಧರ್ಮ ಸ್ವೀಕರಿಸಿ, ಮುಸ್ಲಿಂ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದಕ್ಕೆ ಕೇರಳದಲ್ಲಿ 'ಲವ್ ಜಿಹಾದ್' ವಿವಾದ ಸೃಷ್ಟಿಯಾಗಿದ್ದ ಡಾ. ಹಾದಿಯಾ, ತಮ್ಮ ಮೊದಲ ಪತಿಗೆ ವಿಚ್ಛೇದನ ನೀಡಿ, ಮತ್ತೊಮ್ಮೆ ಮುಸ್ಲಿಂ ವ್ಯಕ್ತಿಯೊಬ್ಬನನ್ನು ವಿವಾಹವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಹಾದಿಯಾ ಸಂಪರ್ಕಕ್ಕೆ ಸಿಗುತ್ತಿಲ್ಲ, ಆಕೆ ಎಲ್ಲಿದ್ದಾಳೆಂದು ಗೊತ್ತಿಲ್ಲ ಎಂದು ಅವರ ತಂದೆ ಅಶೋಕನ್ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.

ಈ ಬಗ್ಗೆ mediaone ಗೆ ಸಂದರ್ಶನ ನೀಡಿರುವ ಡಾ. ಹಾದಿಯಾ ತನ್ನ ತಂದೆಯ ಆರೋಪಗಳನ್ನು ಅಲ್ಲಗೆಳೆದಿದ್ದಾರೆ. "ನಾನು ಮುಸ್ಲಿಮಳಾಗಿ 8 ವರ್ಷವಾಗಿದೆ ಎಂದಿರುವ ಹಾದಿಯಾ, ನನ್ನ ತಂದೆಯಿಂದ ನನ್ನ ಜೀವನದ ಮೇಲೆ ಬಹಳ ಕೆಟ್ಟ ಪರಿಣಾಮಗಳಾಗುತ್ತಿದೆ" ಎಂದು ಆರೋಪಿಸಿದ್ದಾರೆ.

"ಸಂಘ ಪರಿವಾರ ನನ್ನ ತಂದೆಯನ್ನು ಒಂದು ಟೂಲ್ ಕಿಟ್ ಆಗಿ ಬಳಸುತ್ತಿದೆ. ಸಂಘಪರಿವಾರ ಸಂಘಟನೆಗಳ ಪಾಶಕ್ಕೆ ಅವರು ಸಿಲುಕಿದ್ದಾರೆ. ನನ್ನ ಮದುವೆ, ಮುಸ್ಲಿಂ ಧರ್ಮ ಸ್ವೀಕಾರದಲ್ಲಿ ಯಾವ ಸಂಘಟನೆಗಳ ಪಾತ್ರವೂ ಇಲ್ಲ. ನಾನು ಸುಪ್ರಿಂ ಕೋರ್ಟ್ ಮುಂದೆ ಇದನ್ನೇ ಹೇಳಿದ್ದೇನೆ" ಎಂದು ಹಾದಿಯಾ ಪ್ರತಿಪಾದಿಸಿದ್ದಾರೆ.

“ನನ್ನ ತಂದೆ ಮಾಡುತ್ತಿರುವ ಆರೋಪಗಳು ನನ್ನ ಮೇಲೆ ಮಾನಸಿಕವಾಗಿ ಪರಿಣಾಮ ಬೀರುತ್ತಿವೆ. ನನ್ನ ಕೌಟುಂಬಿಕ ಜೀವನದ ಮೇಲೂ ಪರಿಣಾಮ ಬೀರಿದೆ. ನನ್ನ ವೈಯುಕ್ತಿಕ ಜೀವನದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತಿದೆ. ನಾನು ಅಪ್ಪ ಅಮ್ಮನ ಜೊತೆ ಫೋನ್ ಮೂಲಕ ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದೇನೆ. ಎರಡು ದಿನಗಳ ಹಿಂದಷ್ಟೇ ಮಾತನಾಡಿದ್ದೇನೆ. ಅದರೆ ಅಪ್ಪ ಇಲ್ಲ ಸಲ್ಲದ್ದನ್ನು ಹೇಳಿ ಮಾನಸಿಕವಾಗಿ ನೋವುಂಟು ಮಾಡುತ್ತಿದ್ದಾರೆ. ನನ್ನ ಬಗ್ಗೆ ಹೇಬಿಯಸ್ ಕಾರ್ಪಸ್ ದೂರು ನೀಡಿದ್ದರು. ಎರಡನೇ ಬಾರಿಯೂ ಹೇಬಿಯಸ್ ಕಾರ್ಪಸ್ ಅಡಿ ದೂರು ಕೊಟ್ಟರು. ಈ ಎರಡೂ ಸಂದರ್ಭದಲ್ಲೂ ನಮ್ಮ ನಡುವೆ ಉತ್ತಮ ಭಾಂಧವ್ಯವಿತ್ತು. ಕೇಸಿನ ಪರಿಣಾಮ ಸುಪ್ರಿಂ ಕೋರ್ಟ್ ಮೆಟ್ಟಿಲೇರುವಂತೆ ಮಾಡಿತು”ಎಂದು ಹಾದಿಯಾ ತಮ್ಮ ಕೋರ್ಟ್ ʼಹಾದಿʼ ತೆರೆದಿಟ್ಟರು.

“ನನ್ನ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ನಡೆಯುತ್ತಿದೆ. ಇದೆಲ್ಲವೂ ಪ್ರಾಯೋಜಿತ. ಈ ದಾಳಿಗಳ ಬಗ್ಗೆ ಬಗ್ಗೆ ದೂರು ನೀಡಲು ಚಿಂತಿಸುತ್ತಿದ್ದೇನೆ. ನನ್ನ ಪ್ರಕರಣ ಸುಪ್ರಿಂ ಕೋರ್ಟ್ ವರೆಗೆ ಹೋದಾಗ ಕೋರ್ಟ್ ನನ್ನ ವೈಯುಕ್ತಿಕ ಸ್ವಾತಂತ್ರ್ಯಕ್ಕೆ ಅನುಗುಣವಾಗಿ ಮುಂದುವರೆಯಲು ಅವಕಾಶ ನೀಡಿತು. ನಾನು ಅಲ್ಲಿಯೂ ಕೇಳಿದ್ದೂ ನನಗೆ ಸ್ವಾತಂತ್ರ್ಯ ಬೇಕು ಎಂದು. ಸುಪ್ರೀಂ ಕೋರ್ಟ್ ನನಗೆ ಅವಕಾಶ ನೀಡಿತು” ಎಂದು ಹಾದಿಯ ಹೇಳಿದ್ದಾರೆ.

“ಶಫೀ ಜಹಾನ್ ರೊಂದಿಗೆ ಮದುವೆಯಾದ ಬಳಿಕ ನಾವಿಬ್ಬರೂ ಚೆನ್ನಾಗಿಯೇ ಇದ್ದೆವು. ಮುಂದೆ ಸಾಗುವುದು ಕಷ್ಟ ಎನಿಸಿದಾಗ ಇಬ್ಬರೂ ತೀರ್ಮಾನ ತೆಗೆದುಕೊಂದು ವಿದಾಯದ ಹಂತಕ್ಕೆ ಬಂದೆವು. ಕಾನೂನಾತ್ಮಕ ವಿಚ್ಛೇದನ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಸೂಕ್ತ ವಕೀಲರ ಸಲಹೆ ಪಡೆದೇ ನಾವು ಮುಂದಡಿಯಿಟ್ಟಿದ್ದೇವೆ. ಆ ಬಳಿಕ ನಾನು ಮರು ಮದುವೆಯಾದೆ. ಅದು ಚರ್ಚೆಯಾಗಬೇಕಾದ ವಿಷಯವಲ್ಲ. ಆದರೆ ದುರದೃಷ್ಟವಷಾತ್ ಚರ್ಚೆಯಾಗುತ್ತಿದೆ. ಸಮಾಜದಲ್ಲಿ ಯಾರಿಗೆ ಯಾವಾಗ ಬೇಕಾದರೂ ವಿವಾಹವಾಗುವ, ವಿಚ್ಚೇದನವಾಗುವ ಅವಕಾಶವಿದೆ. ಸಂವಿಧಾನಿಕವಾಗಿ ಅದಕ್ಕೆ ಅವಕಾಶವಿದೆ. ನಾನೇನು ಸಣ್ಣ ಮಗುವಲ್ಲ. ನನಗೆ ನನ್ನದೇ ಆದ ಅವಕಾಶಗಳಿವೆ. ಆದರೂ ಜನರೇಕೆ ಇದರ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆಂದು ತಿಳಿದಿಲ್ಲ”ಎಂದು ಹಾದಿಯಾ ಅಚ್ಚರಿ ವ್ಯಕ್ತಪಡಿಸಿದರು.

“ನನ್ನ ಮೊದಲ ಮದುವೆಯ ಸಂಬಂಧದಲ್ಲಿ ಮುಂದೆ ಹೋಗಲು ಸಾಧ್ಯವೇ ಇಲ್ಲ ಎಂದಾದಾಗ ನಾನು ಅದನ್ನು ದೂರ ಮಾಡಿದೆ. ನನಗಿಷ್ಟವಾದ ಸಂಬಂಧದ ಜೊತೆ ನಾನು ಮುಂದುವರೆದೆ. ನನ್ನ ವೈಯುಕ್ತಿಕ ವಿಚಾರವನ್ನು ಎಲ್ಲರ ಮುಂದೆ ಹೇಳಬೇಕೆನ್ನುವ ಯಾವ ಅವಶ್ಯಕತೆಯೂ ನನಗಿಲ್ಲ. ಅದು ವೈಯುಕ್ತಿಕ ವಿಚಾರ”ಎಂದು ಹಾದಿಯಾ ಹೇಳಿದ್ದಾರೆ.

ಹಾದಿಯಾಳ ಸುರಕ್ಷತೆಯ ಬಗ್ಗೆ ಎದ್ದಿರುವ ಪ್ರಶ್ನೆಗೆ ಉತ್ತರಿಸಿರುವ, ಅವರು “ನಾನು ಅತ್ಯಂತ ಸುರಕ್ಷಿತಳಾಗಿದ್ದೇನೆ. ಈ ವಿಚಾರ ನನ್ನ ಪೋಷಕರಿಗೆ, ಪೊಲೀಸ್ ಇಲಾಖೆಗೆ ತಿಳಿದಿದೆ. ಪೊಲೀಸ್ ಇಲಾಖೆ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಅವರಿಗೆಲ್ಲ ನನ್ನ ಬದುಕಿನ ದಿನಚರಿಯೇ ವಿವರವಾಗಿ ತಿಳಿದಿದೆ. ನನ್ನ ಮರು ಮದುವೆ ವಿಚಾರ ಅಪ್ಪನಿಗೆ ತಿಳಿದಿದೆ. ಹೊಸ ಸಂಬಂಧದ ಬಗ್ಗೆ ಅವರಿಗೆ ಸಂತೃಪ್ತಿಯಿದೆ. ಹೀಗಿದ್ದರೂ ಅವರು ನೀಡಿರುವ ದೂರಿನಲ್ಲಿ ಸತ್ಯಾಂಶವಿಲ್ಲ. ನನ್ನ ಮದುವೆ ವಿಚಾರ ತಿಳಿದ ಅಪ್ಪ ಫೋನ್ ಮಾಡಿದ್ದರು. ನನ್ನ ಗಂಡನ ತಾಯಿಯೊಂದಿಗೆ ಅವರು ಮಾತನಾಡಿದ್ದಾರೆ. ಕುಟುಂಬದವರೊಂದಿಗೆ ಫೋನ್ ಮೂಲಕ ಮಾತನಾಡಿದ್ದಾರೆ. ಆದರೂ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಹಾದಿಯಾ ಎಲ್ಲಿದ್ದಾಳೆಂದು ತಿಳಿದಿಲ್ಲ ಎಂದಿದ್ದಾರೆ” ಎಂದು ಹಾದಿಯಾ ಬೇಸರ ವ್ಯಕ್ತಪಡಿಸಿದರು.

“ನನ್ನ ವಿವಾಹದ ವಿಚಾರದಲ್ಲಿ ಯಾವುದೇ ಸಂಘಟನೆಗಳ ಕೈವಾಡವಿಲ್ಲ. ನನ್ನ ಮದುವೆ ನನ್ನ ಆಯ್ಕೆ. ನಾವಿಬ್ಬರೂ ಸಂಗಾತಿಗಳಿಗೆ ಮದುವೆಯ ಬಗ್ಗೆ ಸಮ್ಮತಿಯಿದ್ದುದರಿಂದ ನಾವು ಮದುವೆಯಾದೆವು. ಇದರಲ್ಲಿ ಯಾವ ಸಂಘಟನೆಗಳೂ ಇಲ್ಲ”ಎಂದು ಹಾದಿಯ ಸ್ಪಷ್ಟಪಡಿಸಿದರು.

“ನಾನು ವೈಯುಕ್ತಿಕ ಜೀವನದಲ್ಲಿ ಒಂದಿಷ್ಟು ಖಾಸಗಿ ಜಾಗದಲ್ಲಿ ಬದುಕಬೇಕೆಂದು ಬಯಸುವವವಳು. ಈ ವಿವಾದಗಳು ನನ್ನ ಖಾಸಗಿ ಬದುಕಿಗೆ ತೊಂದರೆ ಮಾಡುತ್ತಿದೆ. ನನ್ನ ಮದುವೆ ವಿಚಾರದಲ್ಲಿ ಲವ್ ಜಿಹಾದ್ ಎಂಬ ಮಾತು ಬರುತ್ತಿದೆ. ನಾನು ಆ ಬಗ್ಗೆ ಏನನ್ನೂ ಹೇಳ ಬಯಸುವುದಿಲ್ಲ. ನನ್ನದು ಪ್ರೇಮ ವಿವಾಹವಲ್ಲ. ಇಸ್ಲಾಮೀ ಚೌಕಟ್ಟಿನೊಳಗೆ ವಿವಾಹವಾಗಿದ್ದೇನೆ. ನಾನು ಇಸ್ಲಾಂ ಸ್ವೀಕರಿಸಿದ ಬಳಿಕವೇ ವಿವಾಹವಾದದ್ದು. ಕೋರ್ಟ್ ಮೆಟ್ಟಿಲು ಹತ್ತುವ ಮುಂಚೆಯೇ ನಾನು ಇಸ್ಲಾಂ ಧರ್ಮ ಸ್ವೀಕರಿಸಿದ್ದೇನೆ” ಎಂದು ಹಾದಿಯ ಹೇಳಿದ್ದಾರೆ.

"ನಾನು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ನನ್ನ ಹೆತ್ತವರು ಹೇಳಿದ್ದಾರೆ. ಎರಡು ಮೂರು ದಿನದ ಹಿಂದಷ್ಟೇ ಅವರೊಂದಿಗೆ ನಾನು ಮಾತನಾಡಿದ್ದೆ. ನನ್ನ ಫೋನ್ ಯಾವತ್ತೂ ಸ್ವಿಚ್ ಆಫ್ ಮಾಡಿಲ್ಲ. ಈಗಿನ ಡಿಜಿಟಲ್ ಯುಗದಲ್ಲಿ ಖಾಸಗಿ ಎಂಬುದೇ ಇಲ್ಲ. ಎಲ್ಲವೂ ಹ್ಯಾಕ್ ಆಗುತ್ತಿರುತ್ತದೆ. ನನ್ನನ್ನು ಹೇಗೂ ಪತ್ತೆ ಹಚ್ಚಬಹುದು. ಅದಲ್ಲದೇ ನಾನು ಪೊಲೀಸ್ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಎರಡನೇ ವಿವಾಹವಾದ ಬಳಿಕ ತಿರುವನಂತಪುರಕ್ಕೆ ನಾನು ವಾಸ ಬದಲಾಯಿಸಿದ್ದೇನೆ. ಮೊದಲ ವಿವಾಹದ ಬಳಿಕ ನಾನು ಮಲಪ್ಪುರಂನಲ್ಲಿದ್ದಾಗ ಅಲ್ಲೇ ನನ್ನ ಕ್ಲಿನಿಕ್ ಇತ್ತು. ಎರಡು ಬಾರಿ ನನ್ನ ಹೆತ್ತವರು ಅಲ್ಲಿಯೇ ಬಂದು ನನ್ನನ್ನು ಕಂಡಿದ್ದರು. ನಾನು ಎರಡನೇ ವಿವಾಹದ ಬಳಿಕ ಆ ಕ್ಲಿನಿಕ್ ತೊರೆದು ತಿರುವನಂತರಪುರಂಗೆ ಬಂದೆ. ಈಗ ನಾನು ಹೆಚ್ಚಿನ ವಿಧ್ಯಾಭ್ಯಾಸ ಮಾಡುವ ಯೋಚನೆ ಯಲ್ಲಿಯೂ ಇದ್ದೇನೆ. ಕ್ಲಿನಿಕ್ ತೆರೆಯುವ ಯೋಚನೆ ಇದೆ”ಎಂದು ಹಾದಿಯಾ ತಮ್ಮ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.

ಹೇಬಿಯಸ್ ಕಾರ್ಪಸ್ ಎಂದರೇನು?

'ಹೇಬಿಯಸ್ ಕಾರ್ಪಸ್' ಎಂದರೆ ಕಾನೂನುಬಾಹಿರವಾಗಿ ಬಂಧನಕ್ಕೊಳಗಾದ ಅಥವಾ ಜೈಲಿನಲ್ಲಿರುವ ವ್ಯಕ್ತಿಯನ್ನು ಬಿಡುಗಡೆ ಮಾಡಲು ಈ ರಿಟ್ ಅನ್ನು ಬಳಸಲಾಗುತ್ತದೆ. ಈ ರಿಟ್ ನ ಬಲದಿಂದ, ನ್ಯಾಯಾಲಯವು ಬಂಧನಕ್ಕೊಳಗಾದ ವ್ಯಕ್ತಿಯನ್ನು ಆತನ ಬಂಧನದ ಕಾನೂನುಬದ್ಧತೆಯನ್ನು ಪರೀಕ್ಷಿಸಲು ತನ್ನ ಮುಂದೆ ಹಾಜರುಪಡಿಸುವಂತೆ ನಿರ್ದೇಶಿಸುತ್ತದೆ. ಬಂಧನವು ಕಾನೂನುಬಾಹಿರ ಎಂದು ನ್ಯಾಯಾಲಯವು ತೀರ್ಮಾನಿಸಿದರೆ, ಆ ವ್ಯಕ್ತಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಅದು ನಿರ್ದೇಶಿಸುತ್ತದೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News