ಕ್ಯಾಂಬ್ರಿಡ್ಜ್ ವೇಶ್ಯಾಗೃಹ ಹಗರಣದಲ್ಲಿ ಸಿಕ್ಕಿಬಿದ್ದ ಭಾರತೀಯ ಮೂಲದ ಸಿಇಓ ಅನುರಾಗ್ ಬಾಜಪೇಯಿ ಯಾರು?

PC: x.com/CNNnews18
ವಾಷಿಂಗ್ಟನ್: ಹಾರ್ವರ್ಡ್ ವಿಶ್ವವಿದ್ಯಾನಿಲಯದ ಬಳಿ ಐಷಾರಾಮಿ ಅಪಾರ್ಟ್ಮೆಂಟ್ ಗಳಲ್ಲಿ ಪ್ರತಿಷ್ಠಿತರಿಗಾಗಿ ಅಕ್ರಮ ವೇಶ್ಯಾಗೃಹ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆ ವೇಳೆ ಭಾರತೀಯ ಮೂಲದ ಸಿಇಓ ಅನುರಾಗ್ ಬಾಜಪೇಯಿ ಹಗರಣದಲ್ಲಿ ಸಿಲುಕಿಕೊಂಡಿರುವುದು ಬೆಳಕಿಗೆ ಬಂದಿದೆ.
ವೈದ್ಯರು, ವಕೀಲರು, ಕಾರ್ಪೊರೇಟ್ ಎಕ್ಸಿಕ್ಯೂಟಿವ್ ಗಳು ಮತ್ತು ಸರ್ಕಾರಿ ಅಧಿಕಾರಿಗಳ ಗುಂಪು ರಚಿಸಿ ಆ ಮೂಲಕ ಈ ದಂಧೆ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಜಲತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪನಿಗಳಲ್ಲೊಂದಾದ ಗ್ರೇಡಿಯಂಟ್ ನ ಸಹ ಸಂಸ್ಥಾಪಕರೂ ಆಗಿರುವ ಅನುರಾಗ್ ಬಾಜಪೇಯಿ ಸಿಇಓ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಪ್ರತಿಷ್ಠಿತ ವೇಶ್ಯಾಗೃಹದಲ್ಲಿ ಗ್ರಾಹಕರು ಗಂಟೆಗೆ 600 ಡಾಲರ್ (ಸುಮಾರು 50 ಸಾವಿರ ರೂಪಾಯಿ) ಪಾವತಿಸಿ ಸೇವೆ ಪಡೆಯುತ್ತಿದ್ದರು ಎನ್ನಲಾಗಿದೆ. ಗ್ರಾಹಕರು ಗುರುತಿನ ಚೀಟಿ, ಉದ್ಯೋಗದ ವಿವರ ಮತ್ತು ಯಾರ ಶಿಫಾರಸ್ಸಿನ ಮೂಲಕ ಬಂದಿದ್ದಾರೆ ಎಂಬ ವಿವರಗಳನ್ನು ನೀಡಿದ ಬಳಿಕ ಪ್ರವೇಶ ನೀಡಲಾಗುತ್ತಿತ್ತು. "ಕ್ಯಾಂಬ್ರಿಡ್ಜ್ ವೇಶ್ಯಾಗೃಹ ವಿಚಾರಣೆ" ವೇಳೆ 30ಕ್ಕೂ ಹೆಚ್ಚು ಗಣ್ಯರು ಪಾವತಿಯ ಲೈಂಗಿಕ ಸೇವೆ ಪಡೆಯುತ್ತಿದ್ದರು ಎನ್ನುವುದು ಬಹಿರಂಗವಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
2025ರ ಆರಂಭದಲ್ಲಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಾಜಪೇಯಿ ಬಂಧನಕ್ಕೆ ಒಳಗಾಗಿದ್ದರು. ದುರ್ನಡತೆ ಆರೋಪವನ್ನು ಬಾಜಪೇಯಿ ಎದುರಿಸುತ್ತಿದ್ದಾರೆ. ಈ ಹಗರಣದ ಹೊರತಾಗಿಯೂ ಗ್ರೇಡಿಯಂಟ್ ಸಂಸ್ಥೆ ಬಹಿರಂಗವಾಗಿ ಸಿಇಓಗೆ ಬೆಂಬಲ ವ್ಯಕ್ತಪಡಿಸಿದೆ.
ಅನುರಾಗ್ ಬಾಜಪೇಯಿ ಭಾರತ ಮೂಲದ ಎಂಜಿನಿಯರ್ ಮತ್ತು ಉದ್ಯಮಿಯಾಗಿದ್ದು, ಅದ್ಭುತ ಶೈಕ್ಷಣಿಕ ಮತ್ತು ವೃತ್ತಿಪರ ದಾಖಲೆ ಹೊಂದಿದ್ದಾರೆ. ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್ವ ಡಿಯನ್ನು ಪಡೆದಿದ್ದರು. ಹಲವು ತಂತ್ರಜ್ಞಾನ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿದ್ದ ಅವರು 2013ರಲ್ಲಿ ಗ್ರೇಡಿಯಂಟ್ ಕಂಪನಿಯ ಸಹ ಸಂಸ್ಥಾಪಕರಾದರು. ಲಿಂಕ್ಡ್ ಇನ್ ಪ್ರೊಫೈಲ್ ಪ್ರಕಾರ ಇವರು ಲಕ್ನೋದ ಲಾ ಮೆರಿನಿಯರ್ ಕಾಲೇಜಿನಲ್ಲಿ ಪದವಿ ಪಡೆದು 2003ರಲ್ಲಿ ಅಮೆರಿಕಕ್ಕೆ ತೆರಳಿದ್ದರು.