ಇತರ ಆರೋಪಿಗಳಂತೆ ಶರ್ಜಿಲ್ ಇಮಾಮ್‌ಗೆ ಯಾಕೆ ಜಾಮೀನು ದೊರೆತಿಲ್ಲ?

Update: 2024-01-16 16:37 GMT

Photo: PTI

ಹೊಸದಿಲ್ಲಿ : 2020ರ ದಿಲ್ಲಿ ಗಲಭೆ ಸಂಚಿನ ಪ್ರಕರಣದಲ್ಲಿ ಆರೋಪಿಯಾಗಿರುವ ಸಾಮಾಜಿಕ ಕಾರ್ಯಕರ್ತ ಶರ್ಜಿಲ್ ಇಮಾಮ್ ಅವರ ಪಾತ್ರವು ಇದೇ ಪ್ರಕರಣದಲ್ಲಿ ಜಾಮೀನು ಬಿಡುಗಡೆ ಪಡೆದಿರುವ ಇತರ ಆರೋಪಿಗಳಿಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ವಿವರಿಸುವಂತೆ ದಿಲ್ಲಿ ಹೈಕೋರ್ಟ್ ಕೇಂದ್ರಾಡಳಿತದ ಪೊಲೀಸರಿಗೆ ತಿಳಿಸಿದೆ.

ಈಶಾನ್ಯ ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಹಾಗೂ ವಿರೋಧಿಗಳ ನಡುವೆ 2020 ಫೆಬ್ರವರಿ 23ರಿಂದ ಫೆಬ್ರವರಿ 26ರವರೆಗೆ ಭುಗಿಲೆದ್ದ ಹಿಂಸಾಚಾರದಲ್ಲಿ 53 ಮಂದಿ ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿದ್ದರು.

ಈ ಪ್ರಕರಣದಲ್ಲಿ ಆರೋಪಿಗಳು, ಸಾಮಾಜಿಕ ಕಾರ್ಯಕರ್ತರಾದ ಇಕ್ಬಾಲ್ ತನಹಾ, ದೇವಾಂಗನಾ ಕಾಲಿಟಾ ಹಾಗೂ ನತಾಶ ನರ್ವಾಲ್ ಅವರನ್ನು 2021ರ ಜೂನ್‌ನಲ್ಲಿ ದಿಲ್ಲಿ ಹೈಕೋರ್ಟ್ ಜಾಮೀನು ಬಿಡುಗಡೆಗೊಳಿಸಿತ್ತು. ದಿಲ್ಲಿ ಪೊಲೀಸರು ಈ ಆದೇಶವನ್ನು ಸುಪ್ರೀಂಕೋಟ್‌ನಲ್ಲಿ ಪ್ರಶ್ನಿಸಿದ್ದರು. ಆದರೆ ಸರ್ವೋಚ್ಛ ನ್ಯಾಯಾಲಯ ಕೂಡಾ ಈ ಮೂವರು ಕಾರ್ಯಕರ್ತರ ಜಾಮೀನು ಬಿಡುಗಡೆಯನ್ನು ಎತ್ತಿಹಿಡಿದಿತ್ತು.

ಜಾಮೀನು ಬಿಡುಗಡೆ ಕೋರಿ ಶಾರ್ಜಿಲ್ ಇಮಾಂ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೆಯಿಟ್ ಹಾಗೂ ಮನೋಜ್ ಜೈನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಎತ್ತಿಹಿಡಿಯಿತು. ಶಾರ್ಜಿಲ್ ಇಮಾಂ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಹಾಗೂ ಭಾರತೀಯ ದಂಡಸಂಹಿತೆಯ ನಿಯಮಗಳಡಿ ಮೊಕದ್ದಮೆ ದಾಖಲಿಸಲಾಗಿತ್ತು.

ಈ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲ್ಪಟ್ಟ 18 ಮಂದಿಯಲ್ಲಿ ಆರು ಮಂದಿಗೆ ಈಗಾಗಲೇ ಜಾಮೀನು ದೊರೆತಿರುವುದರಿಂದ ತನಗೂ ಜಾಮೀನು ನೀಡುವಂತೆ ಶಾರ್ಜಿಲ್ ದಿಲ್ಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದರು.

ಆದರೆ, ವಿಶೇಷ ಸರಕಾರಿ ಅಭಿಯೋಜಕ ಅಮಿತ್ ಪ್ರಸಾದ್ ಅವರು ಶಾರ್ಜಿಲ್‌ರ ಜಾಮೀನು ಮನವಿಯನ್ನು ವಿರೋಧಿಸಿದ್ದರು. ದಿಲ್ಲಿ ಗಲಭೆಯ ಸಂಚಿನಲ್ಲಿ ವಿಭಿನ್ನ ಆರೋಪಿಗಳಿಗೆ ಬೇರೆ ಬೇರೆಯದೇ ಆದ ಪಾತ್ರಗಳನ್ನು ನೀಡಲಾಗಿತ್ತೆಂದು ಅವರು ಹೇಳಿದ್ದರು.

ಪ್ರಕರಣದ ಮುಂದಿನ ಆಲಿಕೆಯನ್ನು ನ್ಯಾಯಾಲಯವು ಫೆಬ್ರವರಿ 19 ರಂದು ನಡೆಸಲಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News