ಜಾರ್ಖಂಡ್ ನಲ್ಲಿ ವಕ್ಫ್ ಕಾಯ್ದೆ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ: ಸಚಿವ ಇರ್ಫಾನ್ ಅನ್ಸಾರಿ

ಇರ್ಫಾನ್ ಅನ್ಸಾರಿ | ANI
ರಾಂಚಿ: ವಕ್ಫ್ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಜಾರ್ಖಂಡ್ ನ ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಶುಕ್ರವಾರ ಹೇಳಿದ್ದಾರೆ.
ಸಾರ್ವಜನಿಕ ಸಭೆಯೊಂದರಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಬಿಜೆಪಿ ನಮ್ಮ ಹಕ್ಕುಗಳು ಹಾಗೂ ಸವಲತ್ತುಗಳನ್ನು ನುಂಗಲು ಬಯಸುವ ರಾಕ್ಷಸನಂತೆ ವರ್ತಿಸುತ್ತಿದೆ ಎಂದರು.
ಇಂತಹ ವಿವಾದಾತ್ಮಕ ಕಾಯ್ದೆಗಳ ಮೂಲಕ ಮೋದಿ ನೇತೃತ್ವದ ಕೇಂದ್ರ ಸರಕಾರ ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಗುರಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
‘‘ನಮ್ಮ ಹಕ್ಕು ಹಾಗೂ ಭೂಮಿಯನ್ನು ನಮ್ಮಿಂದ ಕಸಿದುಕೊಳ್ಳಲಾಗುತ್ತಿದೆ. ಜಾರ್ಖಂಡ್ ನಲ್ಲಿ ವಕ್ಫ್ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ’’ ಎಂದು ಅನ್ಸಾರಿ ಹೇಳಿದರು.
ಅವರು ಮೋದಿ ಸರಕಾರದ ಸರ್ವಾಧಿಕಾರಿ ಮನೋಭಾವವನ್ನು ಖಂಡಿಸಿದರು. ಜಾರ್ಖಂಡ್ ನಲ್ಲಿ ಕೇಂದ್ರದ ನಿರ್ಧಾರದಂತೆ ಏನೂ ನಡೆಯದು ಎಂದು ಅವರು ಹೇಳಿದರು.
ಮೋದಿ ಆಡಳಿತ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ ಎಂದು ಅವರು ಆರೋಪಿಸಿದರು. ಅಲ್ಲದೆ, ಈ ಕಾಯ್ದೆ ಮುಸ್ಲಿಮರ ವಿರುದ್ಧ ಚೆನ್ನಾಗಿ ಯೋಜಿಸಲಾದ ಪಿತೂರಿಯ ಭಾಗವಾಗಿದೆ ಎಂದರು.
ತನ್ನನ್ನು ಮುಸ್ಲಿಮರ ಧ್ವನಿ ಎಂದು ವಿವರಿಸಿದ ಅವರು, ಸಮಾಜ, ಅಲ್ಪಸಂಖ್ಯಾತರ ಹಕ್ಕುಗಳು ಹಾಗೂ ಸಂವಿಧಾನದ ಚಿಂತನೆಗಳಿಗಾಗಿ ತನ್ನ ಕೊನೆಯ ಉಸಿರು ಇರುವ ವರೆಗೆ ಹೋರಾಟ ಮುಂದುವರಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದರು.