ಅಮೆರಿಕದಲ್ಲಿ ಪೆಗಾಸಸ್ ಸ್ಪೈವೇರ್ ತೀರ್ಪಿನ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಹೆಚ್ಚಿನ ವಿಚಾರಣೆ ನಡೆಸುತ್ತದೆಯೇ?: ಕಾಂಗ್ರೆಸ್ ನಾಯಕ ಸುರ್ಜೆವಾಲಾ ಪ್ರಶ್ನೆ
ಹೊಸದಿಲ್ಲಿ: ಅಮೆರಿಕದಲ್ಲಿ ಪೆಗಾಸಸ್ ಸ್ಪೈವೇರ್ ಪ್ರಕರಣದ ತೀರ್ಪು 300 ಭಾರತೀಯರ ವಾಟ್ಸ್‌ಆ್ಯಪ್ ನಂಬರ್‌ಗಳನ್ನು ಹೇಗೆ ಗುರಿಯಾಗಿಸಿಕೊಳ್ಳಲಾಗಿತ್ತು ಎನ್ನುವುದನ್ನು ಸಾಬೀತುಗೊಳಿಸಿದೆ ಎಂದು ರವಿವಾರ ಹೇಳಿರುವ ಕಾಂಗ್ರಸ್ ಪ್ರಧಾನ ಕಾರ್ಯದರ್ಶಿ ರಣದೀಪ ಸುರ್ಜೆವಾಲಾ ಅವರು, ಈ ತೀರ್ಪಿನ ಹಿನ್ನೆಲೆಯಲ್ಲಿ ಈಗ ಸರ್ವೋಚ್ಚ ನ್ಯಾಯಾಲಯವು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತದೆಯೇ ಎಂದು ಪ್ರಶ್ನಿಸಿದರು.
ಇದೇ ಮೊದಲ ಬಾರಿಗೆ ಅಮೆರಿಕದ ನ್ಯಾಯಾಲಯವೊಂದು ಪೆಗಾಸಸ್ ತಂತ್ರಾಂಶವನ್ನು ಬಳಸಿ ಬೇಹುಗಾರಿಕೆ ನಡೆಸಿದ್ದಕ್ಕಾಗಿ ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್ ಅನ್ನು ಹೊಣೆಗಾರನಾಗಿಸಿದೆ ಎಂಬ ಮಾಧ್ಯಮ ವರದಿಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಸುರ್ಜೆವಾಲಾ,ಪೆಗಾಸಸ್ ಸ್ಪೈವೇರ್ ಗುರಿಯಾಗಿಸಿಕೊಂಡಿದ್ದ 300 ಹೆಸರುಗಳು ಯಾರದು ಎನ್ನುವ ಪ್ರಶ್ನೆಗೆ ನರೇಂದ್ರ ಮೋದಿ ಸರಕಾರವು ಈಗ ಉತ್ತರಿಸಬೇಕಿದೆ ಎಂದಿದ್ದಾರೆ.
‘ಪೆಗಾಸಸ್ ಗುರಿಯಾಗಿಸಿಕೊಂಡಿದ್ದ ಇಬ್ಬರು ಕೇಂದ್ರ ಸಚಿವರು, ಮೂವರು ಪ್ರತಿಪಕ್ಷ ನಾಯಕರು, ಸಾಂವಿಧಾನಿಕ ಅಧಿಕಾರಿ, ಪತ್ರಕರ್ತರು,ಉದ್ಯಮಿಗಳು ಯಾರು ? ಬಿಜೆಪಿ ಸರಕಾರ ಮತ್ತು ಏಜೆನ್ಸಿಗಳು ಬೇಹುಗಾರಿಕೆ ನಡೆಸಿ ಯಾವೆಲ್ಲ ಮಾಹಿತಿಗಳನ್ನು ಪಡೆದುಕೊಂಡಿವೆ? ಅದನ್ನು ಹೇಗೆ ಬಳಸಿಕೊಳ್ಳಲಾಗಿತ್ತು,ಹೇಗೆ ದುರ್ಬಳಕೆ ಮಾಡಲಾಗಿತ್ತು ಮತ್ತು ಪರಿಣಾಮವೇನು?’ ಎಂದು ಸುರ್ಜೆವಾಲಾ ಪ್ರಶ್ನಿಸಿದ್ದಾರೆ.
ಪ್ರಸ್ತುತ ಸರಕಾರದಲ್ಲಿರುವ ರಾಜಕೀಯ ಕಾರ್ಯನಿರ್ವಾಹಕ ಅಥವಾ ಅಧಿಕಾರಿಗಳು ಮತ್ತು ಎನ್‌ಎಸ್‌ಒ ಗ್ರೂಪ್ ವಿರುದ್ಧ ಸೂಕ್ತ ಕ್ರಿಮಿನಲ್ ಪ್ರಕರಣಗಳನ್ನು ಈಗ ದಾಖಲಿಸಲಾಗುವುದೇ ಎಂದೂ ಅವರು ಪ್ರಶ್ನಿಸಿದ್ದಾರೆ.
ಮೆಟಾ ವಿರುದ್ಧ ಎನ್‌ಎಸ್‌ಒ ಪ್ರಕರಣದಲ್ಲಿ ಅಮೆರಿಕದ ನ್ಯಾಯಾಲಯದ ತೀರ್ಪನ್ನು ಸವೋಚ್ಚ ನ್ಯಾಯಾಲಯವು ಗಮನಕ್ಕೆ ತೆಗೆದುಕೊಳ್ಳುತ್ತದೆಯೇ? 2021-22ರಲ್ಲಿ ಪೆಗಾಸಸ್ ಸ್ಪೈವೇರ್ ಕುರಿತ ತಾಂತ್ರಿಕ ತಜ್ಞರ ಸಮಿತಿಯು ಸಲ್ಲಿಸಿದ್ದ ವರದಿಯನ್ನು ಬಹಿರಂಗೊಳಿಸಲು ಅದು ಮುಂದಾಗುವುದೇ ಎಂದೂ ಸುರ್ಜೆವಾಲಾ ಪ್ರಶ್ನಿಸಿದ್ದಾರೆ.