ಮೇ 1ರಿಂದ ಎಟಿಎಂನಿಂದ ನಗದು ಹಿಂಪಡೆಯುವುದು ಮತ್ತಷ್ಟು ದುಬಾರಿ!

Update: 2025-03-26 16:24 IST
ಮೇ 1ರಿಂದ ಎಟಿಎಂನಿಂದ ನಗದು ಹಿಂಪಡೆಯುವುದು ಮತ್ತಷ್ಟು ದುಬಾರಿ!

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಹೊಸದಿಲ್ಲಿ: ಎಟಿಎಂ ಮೂಲಕ ನಗದು ಹಿಂಪಡೆಯುವಿಕೆ ಮೇಲಿನ ಇಂಟರ್‌ಚೇಂಜ್‌ ಶುಲ್ಕವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚಳ ಮಾಡಿದೆ. ಇದರಿಂದಾಗಿ ಮೇ.1ರಿಂದ ಭಾರತದಲ್ಲಿ ಎಟಿಎಂಗಳಿಂದ ನಗದು ಹಿಂಪಡೆಯುವುದು ಮತ್ತಷ್ಟು ದುಬಾರಿಯಾಗಲಿದೆ. ನಗದು ಹಿಂಪಡೆಯುವಿಕೆ ಶುಲ್ಕವನ್ನು ಮತ್ತಷ್ಟು ಹೆಚ್ಚಿಸಿರುವ ಈ ಬದಲಾವಣೆಯಿಂದ ಎಟಿಎಂಗಳನ್ನು ಹೆಚ್ಚಾಗಿ ಬಳಸುವ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ.

ತಮ್ಮ ಬ್ಯಾಂಕಿನ ಗ್ರಾಹಕರಿಗೆ ಮತ್ತೊಂದು ಬ್ಯಾಂಕ್ ಒದಗಿಸುವ ಎಟಿಎಂ ಸೇವೆಗಳಿಗೆ ಬ್ಯಾಂಕ್ ಗಳು ಪಾವತಿಸುವ ಶುಲ್ಕವನ್ನು ಇಂಟರ್‌ಚೇಂಜ್‌ ಶುಲ್ಕ ಎನ್ನಲಾಗುತ್ತದೆ. ಈ ಬ್ಯಾಂಕಿಂಗ್ ಸೇವೆ ಶುಲ್ಕಗಳನ್ನು ಬ್ಯಾಂಕ್ ಗಳು ಯಾವಾಗಲೂ ತಮ್ಮ ಗ್ರಾಹಕರಿಗೆ ವರ್ಗಾಯಿಸುತ್ತವೆ. ಉದಾಹರಣೆಗೆ, ಒಂದು ವೇಳೆ ನೀವು HDFC ಬ್ಯಾಂಕ್ ನ ಗ್ರಾಹಕರಾಗಿದ್ದು, ನೀವೇನಾದರೂ SBI ಎಟಿಎಂನಲ್ಲಿ ನಾಲ್ಕನೆಯ ಬಾರಿ ನಗದು ಹಿಂಪಡೆದರೆ HDFC ಬ್ಯಾಂಕ್ ನಿಮಗೆ ಶುಲ್ಕ ವಿಧಿಸುತ್ತದೆ.

ವರದಿಯ ಪ್ರಕಾರ, ತಮ್ಮ ಕಾರ್ಯಾಚರಣೆ ವೆಚ್ಚ ಏರಿಕೆಯಾಗುತ್ತಿರುವುದರಿಂದ ನಮ್ಮ ವ್ಯವಹಾರದ ಮೇಲೆ ಪರಿಣಾಮವುಂಟಾಗುತ್ತಿದೆ ಎಂದು ಉಲ್ಲೇಖಿಸಿದ್ದ ವೈಟ್- ಲೇಬಲ್ ಎಟಿಎಂ ಆಪರೇಟರ್‌ಗಳು ಎಟಿಎಂ ನಗದು ಹಿಂಪಡೆಯುವಿಕೆ ಶುಲ್ಕಗಳನ್ನು ಹೆಚ್ಚಳ ಮಾಡಬೇಕು ಎಂದು ಬೇಡಿಕೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಶುಲ್ಕ ಪರಿಷ್ಕರಣೆ ಮಾಡಿದೆ ಎನ್ನಲಾಗಿದೆ.

ಮೇ 1, 2025ರಿಂದ ಬ್ಯಾಂಕ್ ಗ್ರಾಹಕರೇನಾದರೂ ತಮ್ಮ ಉಚಿತ ಮಿತಿಯನ್ನು ಮೀರಿ ಎಟಿಎಂ ವಹಿವಾಟುಗಳನ್ನು ನಡೆಸಿದರೆ, ಅಂತಹ ಗ್ರಾಹಕರು ಹೆಚ್ಚುವರಿ ಶುಲ್ಕವನ್ನು ಭರಿಸಬೇಕಾಗುತ್ತದೆ. ಈ ಪೈಕಿ ಹೆಚ್ಚುವರಿ ಹಣಕಾಸು ವಹಿವಾಟುಗಳಿಗೆ (ನಗದು ಹಿಂಪಡೆಯುವಿಕೆ) 19 ರೂ. ಶುಲ್ಕ ಪಾವತಿಸಬೇಕಾಗುತ್ತದೆ. (ಹಿಂದಿನ ದರ 17 ರೂ.) ಹಾಗೆಯೇ ಹಣಕಾಸೇತರ ವಹಿವಾಟುಗಳಿಗೆ (ಬಾಕಿ ವಿಚಾರಣೆ, ಕಿರು ವಹಿವಾಟು ಪಟ್ಟಿ, ಇತ್ಯಾದಿ) 7 ರೂ. ಶುಲ್ಕ ಪಾವತಿಸಬೇಕಾಗುತ್ತದೆ. (ಹಿಂದಿನ ದರ 6 ರೂ.)

ಈ ದರ ಏರಿಕೆಯಿಂದಾಗಿ, ಎಟಿಎಂ ಮೂಲಸೌಕರ್ಯ ಹಾಗೂ ಸೇವೆಗಳಿಗಾಗಿ ದೊಡ್ಡ ಹಣಕಾಸು ಸಂಸ್ಥೆಗಳನ್ನೇ ಅವಲಂಬಿಸಿರುವ ಸಣ್ಣ ಬ್ಯಾಂಕ್ ಗಳ ಗ್ರಾಹಕರ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News