ಉತ್ತರಪ್ರದೇಶ | ಆರು ಮಕ್ಕಳ ತಾಯಿ ಭಿಕ್ಷುಕನೊಂದಿಗೆ ಪರಾರಿ!
ಲಕ್ನೋ: ವಿಲಕ್ಷಣ ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಲಮ್ಕಾನ್ ಗ್ರಾಮದ ಆರು ಮಕ್ಕಳ ತಾಯಿ ತನ್ನ ಭಿಕ್ಷುಕ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.
ತನ್ನ ಪತ್ನಿ ನನ್ಹೆ ಪಂಡಿತ್ ಎಂಬ ಭಿಕ್ಷುಕನೊಂದಿಗೆ ಪರಾರಿಯಾಗಿದ್ದಾಳೆ ಎಂದು ಆರೋಪಿಸಿ ಮಹಿಳೆಯ ಪತಿ ಪೋಲಿಸರಿಗೆ ದೂರು ಸಲ್ಲಿಸಿದ್ದಾನೆ.
ಜಿಲ್ಲೆಯ ಸಂಡಿ ಪ್ರದೇಶದ ನಿವಾಸಿಯಾದ ಪಂಡಿತ್ ಗ್ರಾಮಗಳಲ್ಲಿ ಭಿಕ್ಷೆ ಬೇಡಿಯೇ ಜೀವನ ನಿರ್ವಹಿಸುತ್ತಿದ್ದ. 36ರ ಹರೆಯದ ಮಹಿಳೆಯ ಮನೆಗೂ ಭಿಕ್ಷೆ ಬೇಡಿಕೊಂಡು ಹೋಗುತ್ತಿದ್ದು, ಆಕೆ ಆತನಿಗೆ ಆಗಾಗ್ಗೆ ಆಹಾರ ಅಥವಾ ಧಾನ್ಯಗಳನ್ನು ನೀಡುತ್ತಿದ್ದಳಲ್ಲದೆ ಸುದೀರ್ಘ ಸಮಯ ಆತನೊಂದಿಗೆ ಮಾತಿನಲ್ಲಿ ಮುಳುಗಿರುತ್ತಿದ್ದಳು. ಆದರೆ ಅವರು ಪರಸ್ಪರ ಪ್ರೀತಿಯಲ್ಲಿ ಬೀಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.
ಎರಡು ದಿನಗಳ ಹಿಂದೆ ಸಂಡಿ ಮಾರುಕಟ್ಟೆಗೆ ತೆರಳಿದ್ದ ತನ್ನ ಪತ್ನಿ ವಾಪಸಾಗಿಲ್ಲ, ಆಕೆ ಪಂಡಿತ್ ಜೊತೆ ಪರಾರಿಯಾಗಿದ್ದಾಳೆ ಎನ್ನುವುದು ತನಗೆ ನಂತರ ಗೊತ್ತಾಯಿತು ಎಂದು ದೂರಿನಲ್ಲಿ ತಿಳಿಸಿರುವ ಪತಿ, ಆಕೆ ಮನೆಯಿಂದ ಹಣ ಮತ್ತು ಅಮೂಲ್ಯ ಸೊತ್ತುಗಳನ್ನೂ ಒಯ್ದಿದ್ದಾಳೆ. ಕೆಲವು ದಿನಗಳ ಹಿಂದೆ ತನ್ನ ಆಕಳನ್ನು ಮಾರಿ ಬಂದಿದ್ದ ದುಡ್ಡನ್ನು ಪುಟ್ಟ ಜಮೀನು ಖರೀದಿಗಾಗಿ ಮನೆಯಲಿಟ್ಟಿದ್ದೆ ಎಂದು ಹೇಳಿದ್ದಾನೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಪರಾರಿಯಾಗಿರುವ ಜೋಡಿಯ ಹುಡುಕಾಟದಲ್ಲಿ ತೊಡಗಿದ್ದಾರೆ.