ಪತಿಯನ್ನು ಕೊಂದು ಹಾವು ಕಡಿತದಿಂದ ಮೃತ್ಯು ಎಂದು ಬಿಂಬಿಸಲು ಯತ್ನ ; ಮಹಿಳೆ,ಪ್ರಿಯಕರ ಬಂಧನ
PC: PTI
ಮೀರತ್: ಮಹಿಳೆಯೋರ್ವಳು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯನ್ನು ಹತ್ಯೆಗೈದ ಬಳಿಕ ಅದು ಹಾವು ಕಡಿತದಿಂದ ಸಂಭವಿಸಿದ್ದ ಸಾವು ಎಂದು ಬಿಂಬಿಸಲು ವಿಫಲ ಯತ್ನ ನಡೆಸಿದ ಘಟನೆ ಉತ್ತರ ಪ್ರದೇಶದ ಮೀರತ್ನ ಬೆಹಸುಮಾ ಪೋಲಿಸ್ ಠಾಣಾ ವ್ಯಾಪ್ತಿಯ ಅಕ್ಬರ್ಪುರ ಸದಾತ್ ಗ್ರಾಮದಲ್ಲಿ ನಡೆದಿದೆ.
ಮರಣೋತ್ತರ ಪರೀಕ್ಷೆಯಲ್ಲಿ ವ್ಯಕ್ತಿಯನ್ನು ಉಸಿರುಗಟ್ಟಿಸಿ ಕೊಂದಿದ್ದು ಬಹಿರಂಗಗೊಂಡಿದ್ದು, ಇದು ಆರೋಪಿಗಳ ಸಂಚನ್ನು ಬಯಲಿಗೆಳೆದಿದೆ.
ಆರೋಪಿಗಳಾದ ರವಿತಾ(30) ಮತ್ತು ಆಕೆಯ ಪ್ರಿಯಕರ ಹಾಗೂ ಪತಿಯ ಸ್ನೇಹಿತ ಅಮರದೀಪ್(20) ಅವರನ್ನು ಪೋಲಿಸರು ಬಂಧಿಸಿದ್ದಾರೆ.
ಅಮಿತ್ ಕಶ್ಯಪ ಅಲಿಯಾಸ ಮಿಕಿ(30) ರವಿವಾರ ಬೆಳಿಗ್ಗೆ ತನ್ನ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಆತನ ಹಾಸಿಗೆಯ ಬಳಿ ವಿಷಯುಕ್ತ ಹಾವೊಂದು ಪತ್ತೆಯಾಗಿದ್ದು, ಆತ ಹಾವು ಕಡಿತದಿಂದ ಸಾವನ್ನಪ್ಪಿದ್ದಾನೆ ಎಂದು ಭಾವಿಸಲು ಕಾರಣವಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯು ಉಸಿರುಗಟ್ಟಿಸಿ ಅಮಿತ್ನನ್ನು ಹತ್ಯೆ ಮಾಡಲಾಗಿದೆ ಎಂದು ಸೂಚಿಸಿದ ಬಳಿಕ ಪೋಲಿಸರು ವಿವರವಾದ ತನಿಖೆಯನ್ನು ಆರಂಭಿಸಿದ್ದರು. ವಿಚಾರಣೆ ಸಂದರ್ಭ ತಾನು ಮತ್ತು ಅಮರದೀಪ್ ಸೇರಿ ಅಮಿತ್ ನನ್ನು ಕೊಂದಿದ್ದಾಗಿ ರವಿತಾ ಒಪ್ಪಿಕೊಂಡಿದ್ದಳು.
ಅಮಿತ್ ನನ್ನು ಕೊಂದ ಬಳಿಕ ಆರೋಪಿಗಳು ಆತನ ಮೃತದೇಹದ ಬಳಿ ವಿಷಯುಕ್ತ ಹಾವನ್ನಿರಿಸಿದ್ದರು. ಮೃತದೇಹದ ಕೆಳಗೆ ಸಿಕ್ಕಿಹಾಕಿಕೊಂಡಿದ್ದ ಹಾವು ಹಲವಾರು ಬಾರಿ ಅದನ್ನು ಕಚ್ಚಿದ್ದು ಇದು ಪ್ರಾಥಮಿಕ ತನಿಖೆ ಸಂದರ್ಭದಲ್ಲಿ ಗೊಂದಲಕ್ಕೆ ಕಾರಣವಾಗಿತ್ತು ಎಂದು ಪೋಲಿಸರು ತಿಳಿಸಿದರು.
ಅಮರದೀಪ್ ಅಮಿತ್ನ ಗ್ರಾಮದ ನಿವಾಸಿಯೇ ಆಗಿದ್ದಾನೆ. ಅವರಿಬ್ಬರ ಸಂಬಂಧ ಅಮಿತ್ಗೆ ತಿಳಿದಿತ್ತು ಮತ್ತು ಈ ಬಗ್ಗೆ ಪತ್ನಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ ಎಂದರು.