ಕ್ರಿಕೆಟ್ ವಿಶ್ವಕಪ್: ಪಿತೃ ಪಕ್ಷದಲ್ಲೂ ಹೆಚ್ಚಿದ ಟಿವಿ ಖರೀದಿ ಭರಾಟೆ

Update: 2023-10-12 03:15 GMT

ಹೊಸದಿಲ್ಲಿ: ಭಾರತದಲ್ಲಿ ಕ್ರಿಕೆಟನ್ನು ಕೂಡಾ ಒಂದು ಧರ್ಮ ಎಂದು ಪರಿಗಣಿಸಿದರೆ, ವಿಶ್ವಕಪ್ ಸಮರ ಅತ್ಯಂತ ಸಂಭ್ರಮದ ಹಬ್ಬ. ಕ್ರಿಕೆಟ್ ಪ್ರಿಯರ ಉತ್ಸಾಹ ಹಾಗೂ ಹುಚ್ಚುಪ್ರೀತಿ, ಪಿತೃ ಪಕ್ಷ (ಶ್ರಾದ್ಧದ ಅವಧಿ)ದಲ್ಲಿ ಹೊಸ ಖರೀದಿಗಳನ್ನು ಮಾಡಬಾರದು ಎಂಬ ಸಾಂಪ್ರದಾಯಿಕ ರೂಢಿಯನ್ನೂ ಮೀರಿಸಿದೆ.

ಭಾರತ- ಪಾಕಿಸ್ತಾನ ನಡುವಿನ ಬ್ಲಾಕ್ ಬಸ್ಟರ್ ಪಂದ್ಯ ಹಿಂದೆಂದಿಗಿಂತಲೂ ಮಹತ್ವ ಪಡೆದಿರುವ ಹಿನ್ನೆಲೆಯಲ್ಲಿ ಹೊಸ ಟಿವಿ ಅದರಲ್ಲೂ ಮುಖ್ಯವಾಗಿ ದೈತ್ಯ ಪರದೆ ಟಿವಿಗಳ ಮಾರಾಟ, ವಿತರಣೆ ಹಾಗೂ ಅನುಸ್ಥಾಪನೆ ಕಾರ್ಯಗಳು ಹೊಸ ಎತ್ತರಕ್ಕೆ ಏರಿವೆ.

ಸ್ಯಾಮ್ಸಂಗ್, ಶವೋಮಿ, ಸೋನಿ, ಎಲ್ ಜಿ ಹಾಗೂ ಪ್ಯಾನಸೋನಿಕ್ನಂತಹ ಬ್ರಾಂಡ್ ಗಳು ಈ ಪಿತೃ ಪಕ್ಷದಲ್ಲಿ ಬಂಪರ್ ಮಾರಾಟ ಕಂಡಿವೆ. ತಕ್ಷಣವೇ ಅನುಸ್ಥಾಪನೆ ಬೇಡಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾದೇಶಗಳಿಗೆ ಅನುಗುಣವಾಗಿ ಪೂರೈಕೆ ಮಾಡುವುದೂ ಕಷ್ಟಕರ ಎನಿಸಿದೆ.

ಹಲವು ಕಂಪನಿಗಳು ಮತ್ತು ಆನ್ ಲೈನ್ ಚಿಲ್ಲರೆ ಮಾರಟಗಾರರು, ಕ್ರಿಕೆಟ್ ಜ್ವರದ ಲಾಭ ಪಡೆಯುವ ದೃಷ್ಟಿಯಿಂದ ಹಬ್ಬದ ಮಾರಾಟವನ್ನು ಅವಧಿಗೆ ಮುನ್ನವೇ ಆರಂಭಿಸಿದ್ದು, ಇದು ಸಮೃದ್ಧ ಪ್ರತಿಫಲವನ್ನು ನೀಡಿದೆ.

ಭಾರತೀಯ ಕ್ರಿಕೆಟ್ ತಂಡ ಅಗ್ರಸ್ಥಾನದ ಪ್ರಬಲ ಆಕಾಂಕ್ಷಿಯಾಗಿ ರೂಪುಗೊಂಡಿದ್ದು, ಶನಿವಾರ ನಡೆಯುವ ಭಾರತ- ಪಾಕಿಸ್ತಾನ ಕದನದ ಬಗೆಗಿನ ಕುತೂಹಲ ಮೇರೆ ಮೀರಿದೆ ಎಂದು ಎಲ್ ಜಿ ಇಂಡಿಯಾದ ಗೃಹ ಮನೋರಂಜನೆ ವಿಭಾಗದ ಮಾರಾಟ ಮುಖ್ಯಸ್ಥ ಗಿರೀಶನ್ ಗೋಪಿ ಹೇಳಿದ್ದಾರೆ.

"ಶುಕ್ರವಾರ ಹಾಗೂ ಶನಿವಾರದ ಮಾರಾಟ ಧನತೇರಾಸ್ ದಿನದ ಮಾರಾಟದಷ್ಟು ಉತ್ತುಂಗಕ್ಕೇರುವ ನಿರೀಕ್ಷೆ ಇದೆ. ಅದರಲ್ಲೂ ಮುಖ್ಯವಾಗಿ ದೈತ್ಯ ಪರದೆಯ ಟಿವಿಗಳಿಗೆ ಬೇಡಿಕೆ ಅಧಿಕ. ನಮ್ಮ 55 ಇಂಚು ಟಿವಿ ಮತ್ತು ಹೆಚ್ಚಿನ ಗಾತ್ರದ ಟಿವಿಯ ಮಾರಾಟ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಎರಡರಿಂದ ಎರಡೂವರೆ ಪಟ್ಟು ಅಧಿಕವಾಗಿದೆ ಎಂದು ಗೋಪಿ ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News