‘ನೀವು ವಿಐಪಿಗಳನ್ನು ರಕ್ಷಿಸುತ್ತೀರಿ, ನಮ್ಮನ್ನಲ್ಲ’: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಪತಿಯ ಅಂತ್ಯಸಂಸ್ಕಾರದಲ್ಲಿ ಸರಕಾರದ ವಿರುದ್ಧ ಭುಗಿಲೆದ್ದ ಗುಜರಾತ್ ಮಹಿಳೆಯ ಆಕ್ರೋಶ

Update: 2025-04-24 20:32 IST
‘ನೀವು ವಿಐಪಿಗಳನ್ನು ರಕ್ಷಿಸುತ್ತೀರಿ, ನಮ್ಮನ್ನಲ್ಲ’: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಪತಿಯ ಅಂತ್ಯಸಂಸ್ಕಾರದಲ್ಲಿ ಸರಕಾರದ ವಿರುದ್ಧ ಭುಗಿಲೆದ್ದ ಗುಜರಾತ್ ಮಹಿಳೆಯ ಆಕ್ರೋಶ

Terror attack victim Shailesh Kalathiya's funeral.

  • whatsapp icon

ಅಹ್ಮದಾಬಾದ್ : ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಮೂವರು ಗುಜರಾತಿಗಳ ಪೈಕಿ ಶೈಲೇಶ್‌ ಹಿಮ್ಮತ್‌ ಭಾಯಿ ಕಲ್ತಿಯಾರ ಅಂತ್ಯಸಂಸ್ಕಾರ ಬುಧವಾರ ನಡೆದಿದ್ದು, ಈ ಸಂದರ್ಭ ಮಡುವುಗಟ್ಟಿದ್ದ ದುಃಖ ಸರಕಾರದ ವಿರುದ್ಧ ಕ್ರೋಧಾಗ್ನಿಯಾಗಿ ಭುಗಿಲೆದ್ದಿತ್ತು.

ತನ್ನ ಕುಟುಂಬದೊಂದಿಗೆ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಕಲ್ತಿಯಾ ಮಂಗಳವಾರ ಪಹಲ್ಗಾಮ್ ಬೈಸರನ್ ಕಣಿವೆಯಲ್ಲಿ ಪ್ರವಾಸಿಗಳನ್ನು ಗುರಿಯಾಗಿಟ್ಟುಕೊಂಡು ಉಗ್ರರು ನಡೆಸಿದ್ದ ನರಮೇಧದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಕೇಂದ್ರ ಸಚಿವ ಹಾಗೂ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್.ಪಾಟೀಲ ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಜನರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಜೀವನ ಸಂಗಾತಿಗೆ ಭಾವನಾತ್ಮಕ ವಿದಾಯದ ನಡುವೆ ಕಲ್ತಿಯಾರ ಮೇಲಿನ ದಾಳಿ ಮತ್ತು ಅವರ ಸಾವನ್ನು ಕಣ್ಣಾರೆ ಕಂಡಿದ್ದ ಪತ್ನಿ ಶೀತಲ್‌ ಬೆನ್ ತನ್ನ ತೀವ್ರ ದುಃಖ ಮತ್ತು ಹತಾಶೆಯನ್ನು ವ್ಯಕ್ತಪಡಿಸಿದರು. ದುಃಖತಪ್ತರಾಗಿದ್ದ ಅವರು ಸರಕಾರದ ವಿಐಪಿ ಸಂಸ್ಕೃತಿಯನ್ನು ಟೀಕಿಸಿದರಲ್ಲದೆ, ಭದ್ರತೆ ಮತ್ತು ಸಂಪನ್ಮೂಲಗಳ ವ್ಯತ್ಯಾಸವನ್ನು ಪ್ರಶ್ನಿಸಿದರು.

‘ಅಲ್ಲಿ ಏನೂ ಇಲ್ಲ. ಸೇನೆ, ಪೋಲಿಸ್ ಸೌಲಭ್ಯಗಳು ಸೇರಿದಂತೆ ಏನೇನೂ ಇಲ್ಲ. ಆದರೆ ವಿಐಪಿಗಳು ಅಥವಾ ದೊಡ್ಡ ನಾಯಕರು ಭೇಟಿ ನೀಡಿದಾಗ ಡಝನ್‌ಗಟ್ಟಲೆ ಕಾರುಗಳು ಇರುತ್ತವೆ,ಆಗಸದಲ್ಲಿ ಹೆಲಿಕಾಪ್ಟರ್‌ಗಳು ಹಾರಾಡುತ್ತಿರುತ್ತವೆ. ಇದಕ್ಕೆಲ್ಲ ಹಣ ನೀಡುತ್ತಿರುವವರು ಯಾರು? ನಾವು ; ಸಾಮಾನ್ಯ ಜನರು, ತೆರಿಗೆದಾತರು. ಹಾಗಾದರೆ ಆ ಎಲ್ಲ ಸೇವೆಗಳು ವಿಐಪಿಗಳಿಗೆ ಮಾತ್ರ ಮತ್ತು ನಮ್ಮಂತಹ ಜನಸಾಮಾನ್ಯರಿಗೆ ಅಲ್ಲ, ಏಕೆ?’ ಎಂದು ಶೀತಲ್‌ ಬೆನ್ ಪ್ರಶ್ನಿಸಿದರು.

ದಾಳಿಯ ನಂತರದ ಘಟನಾವಳಿಯನ್ನು ಬಿಕ್ಕುತ್ತಲೇ ನೆನಪಿಸಿಕೊಂಡ ಅವರು,‘ನಾನು ಕೆಳಗಿನ ಸೇನಾ ಶಿಬಿರದಲ್ಲಿ ಕೂಗುತ್ತಿದ್ದೆ. ಜನರು ಗಾಯಗೊಂಡಿದ್ದಾರೆ ಮತ್ತು ಮೇಲಕ್ಕೆ ತೆರಳಿ ಅವರಿಗೆ ನೆರವಾಗುವಂತೆ ಬೇಡಿಕೊಳ್ಳುತ್ತಿದ್ದೆ. ನಾವೇನೋ ಎಡವುತ್ತ, ಬೀಳುತ್ತ ಕೆಳಕ್ಕೆ ತಲುಪಿದ್ದೆವು. ಆದರೆ ಆಗಲೂ ಮೇಲೆಯೇ ಇದ್ದವರಿಗೆ ಯಾವುದೇ ನೆರವು ತಲುಪಿರಲಿಲ್ಲ . ಮೇಲೆ ಅಷ್ಟೆಲ್ಲ ನಡೆದಿದ್ದರೂ ಕೆಳಗಿದ್ದ ಸೇನೆಗೆ ಏನೂ ಗೊತ್ತಾಗಿರಲಿಲ್ಲ ಏಕೆ?’ ಎಂದು ಪ್ರಶ್ನಿಸಿದರು.

‘ಅವರು ನಮ್ಮ ಹಿಂದು ಸೋದರರ ಮೇಲೆ ಹೀಗೆ ಗುಂಡುಗಳನ್ನು ಹಾರಿಸುತ್ತಿದ್ದರೆ ನಮ್ಮ ಭದ್ರತಾ ಸಿಬ್ಬಂದಿಗಳು ಏನು ಮಾಡುತ್ತಿದ್ದಾರೆ? ಪ್ರದೇಶದಲ್ಲಿ ಸಾವಿರಾರು ಭದ್ರತಾ ಸಿಬ್ಬಂದಿಗಳಿದ್ದರು, ಆದರೂ ಪ್ರವಾಸಿ ತಾಣಗಳಲ್ಲಿ ಯೋಧರಿರಲಿಲ್ಲ, ಪೋಲಿಸರಿರಲಿಲ್ಲ, ಪ್ರಥಮ ಚಿಕಿತ್ಸೆ ಸೌಲಭ್ಯ ಇರಲಿಲ್ಲ. ಅಲ್ಲಿ ಏನೂ ಇರಲಿಲ್ಲ’ ಎಂದರು.

‘ನಮ್ಮ ಮನೆಯ ಆಧಾರಸ್ತಂಭವು ಹೋಗಿದೆ. ನನ್ನ ಬೆಂಬಲ, ನನ್ನ ಶಕ್ತಿಯಾಗಿದ್ದ ಅವರು ಹೋಗಿದ್ದಾರೆ. ನನ್ನ ಶೈಲೇಶ್‌ರನ್ನು ನನಗೆ ವಾಪಸ್ ನೀಡಿ, ನನಗೆ ಬೇರೇನೂ ಬೇಕಿಲ್ಲ’ ಎಂದು ಹೇಳುತ್ತ ಶೀತಲ್‌ ಬೆನ್ ಅಲ್ಲಿಯೇ ಕುಸಿದರು.

ನಂತರ ಅವರು ಹೇಳಿದ್ದ ಮಾತು ನಿಜಕ್ಕೂ ಎಲ್ಲರ ಹೃದಯಗಳನ್ನು ತಟ್ಟಿತ್ತು; ಸರಕಾರವು ತನ್ನನ್ನು ಮಾತ್ರ ರಕ್ಷಿಸಿಕೊಳ್ಳಲು ಬಯಸಿದರೆ, ತನಗಾಗಿ ಮಾತ್ರ ಸೌಲಭ್ಯಗಳನ್ನು ಹೊಂದಿರಲು ಬಯಸಿದರೆ...ಸರಿ. ಆದರೆ ಇನ್ನು ಮಂದೆ ನಮ್ಮ ಮತಗಳನ್ನು ನಿರೀಕ್ಷಿಸಬೇಡಿ. ಈ ಸರಕಾರಕ್ಕೆ ನಾವು ಮತ್ತೆ ಮತ ನೀಡುವುದಿಲ್ಲ.

‘ನನಗೆ ನ್ಯಾಯ ಬೇಕು’ ಎಂದು ಅವರು ದೃಢವಾಗಿ ನುಡಿದರು, ಕೇವಲ ನನಗಾಗಿ ಮಾತ್ರ ಅಲ್ಲ, ನನ್ನ ಮಕ್ಕಳ ಭವಿಷ್ಯಕ್ಕಾಗಿ. ಅವರು ಕಷ್ಟ ಪಡಬಾರದು.

ಶೀತಲ್‌ ಬೆನ್‌ ಗೆ ಸಾಂತ್ವನ ಹೇಳಲು ಮುಂದಾದ ಸಚಿವ ಪಾಟೀಲ್ ಸರಕಾರವು ನೆರವಾಗುತ್ತದೆ ಎಂದು ಭರವಸೆ ನೀಡಲು ಪ್ರಯತ್ನಿಸಿದರು.

ಇದಕ್ಕೆ ಕೋಪದಿಂದಲೇ ಪ್ರತಿಕ್ರಿಯಿಸಿದ ಶೀತಲ್‌ ಬೆನ್, ಸರಕಾರವು ಹೇಳುತ್ತಲೇ ಇರುತ್ತದೆ, ನಾವದನ್ನು ಮಾಡುತ್ತೇವೆ, ನಾವಿದನ್ನು ಮಾಡುತ್ತೇವೆ ಎಂದು. ಅವರು ಮೊದಲಿನಿಂದಲೂ ಹೀಗೆಯೇ ಹೇಳುತ್ತಿದ್ದಾರೆ. ಈಗಾಗಲೇ ಇಂತಹ ತುಂಬ ಘಟನೆಗಳು ನಡೆದಿವೆ. ಆದರೆ ಇನ್ನೂ ಏನೂ ಮಾಡಲಾಗಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News