‘ರಾಷ್ಟ್ರೀಯ ಭದ್ರತೆ’ಗೆ ಧಕ್ಕೆ ಆರೋಪ; ಯೂಟ್ಯೂಬ್ ಸುದ್ದಿ ಚಾನೆಲ್ 4PMಗೆ ಭಾರತದಲ್ಲಿ ನಿಷೇಧ

ಹೊಸದಿಲ್ಲಿ: ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಆರೋಪದಲ್ಲಿ ಯೂಟ್ಯೂಬ್ ಸುದ್ದಿ ಚಾನೆಲ್ 4PM ಅನ್ನು ಭಾರತದಲ್ಲಿ ನಿಷೇಧಿಸಲಾಗಿದೆ.
ಸರ್ಕಾರದ ನಿರ್ದೇಶನಗಳ ಪ್ರಕಾರ ಚಾನೆಲ್ ಅನ್ನು ಮುಚ್ಚಲಾಗಿದೆ ಎಂದು ಮಂಗಳವಾರ ಬೆಳಿಗ್ಗೆ ಯೂಟ್ಯೂಬ್‌ನಿಂದ ಇಮೇಲ್ ಬಂದಿದೆ ಎಂದು ಚಾನೆಲ್‌ನ ಮಾಲಕ ಮತ್ತು ಪ್ರಧಾನ ಸಂಪಾದಕ ಸಂಜಯ್ ಶರ್ಮಾ ಹೇಳಿದ್ದಾರೆ.
ರಾಷ್ಟ್ರೀಯ ಭದ್ರತೆಯ ಬಗ್ಗೆ ನಮಗೆ ಕಾಳಜಿ ಇದೆ ಮತ್ತು ಸರ್ಕಾರಕ್ಕೆ ಪ್ರಶ್ನೆಗಳನ್ನು ಮಾತ್ರ ಕೇಳುತ್ತಿದ್ದೇನೆ ಎಂದು ಶರ್ಮಾ ಪ್ರತಿಕ್ರಿಯಿಸಿದ್ದಾರೆ.
ಸರ್ಕಾರದ ನಿಲುವಿಗೆ ಕಾರಣವೇನು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಕಳೆದ ಕೆಲವು ದಿನಗಳಿಂದ, ಪಹಲ್ಗಾಮ್ ದಾಳಿಯ ಕುರಿತು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಹಲವಾರು ವೀಡಿಯೊಗಳನ್ನು ಚಾನೆಲ್ ಅಪ್‌ಲೋಡ್ ಮಾಡಿದೆ.
ಯೂಟ್ಯೂಬ್ ಸುದ್ದಿ ಚಾನೆಲ್, "ಪಹಲ್ಗಾಮ್ ಗ್ರಾಮದ ರಹಸ್ಯ ಬಯಲಾಗಿದೆ. ರಾತ್ರೋರಾತ್ರಿ ಹಿಂತೆಗೆದುಕೊಂಡಿದ್ದೇಕೆ?", "ಅಮಿತ್ ಶಾ ಅವರಿಗೆ ರತ್ನಗಂಬಳಿಯ ಸ್ವಾಗತ ನೀಡಲಾಯಿತು. ಅವರು ಬಲಿಯಾದವರಿಗೆ ಗೌರವ ಸಲ್ಲಿಸಲು ಹೋಗಿದ್ದರೋ ಅಥವಾ ಪ್ರದರ್ಶನವನ್ನು ನೀಡಲು ಹೋಗಿದ್ದರೋ?", ಈ ರೀತಿಯ ಪ್ರಶ್ನೆಗಳನ್ನು ತನ್ನ ವಿಡಿಯೋದಲ್ಲಿ ಕೇಳುತ್ತಿತ್ತು.
4PM ಯುಪಿ ಮತ್ತು 4PM ರಾಜಸ್ಥಾನ ಸೇರಿದಂತೆ ಆರು ಇತರ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿತ ಚಾನೆಲ್ ಹೊಂದಿದೆ.
ಸರ್ಕಾರವು ಭಾರತದಲ್ಲಿ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದ ಮತ್ತು "ಬಂಡುಕೋರರು" ಎಂಬ ಪದದ ಬಳಕೆಯ ಬಗ್ಗೆ ಬಿಬಿಸಿ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡ ಬಳಿಕ ಈ ಬೆಳವಣಿಗೆ ನಡೆದಿದೆ.