ಬಾಡಿಗೆ ಫ್ಲಾಟ್ ಹುಡುಕಾಟ ವೇಳೆ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಹೊಸದಿಲ್ಲಿ: ಬಾಡಿಗೆ ಫ್ಲಾಟ್ ಹುಡುಕುವ ವೇಳೆ 30 ವರ್ಷದ ಮಹಿಳೆಯ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಉತ್ತರ ದೆಹಲಿಯ ಬುರಾರಿ ಪ್ರದೇಶದಲ್ಲಿ ನಡೆದಿದೆ. ಆರೋಪಿಗಳ ಪೈಕಿ ಒಬ್ಬ ರಿಯಲ್ ಎಸ್ಟೇಟ್ ಡೀಲರ್ ಎನ್ನಲಾಗಿದೆ.
ಈ ಘಟನೆ ಭಾನುವಾರ ನಡೆದಿದ್ದು, ಖಾಲಿ ಅಪಾರ್ಟ್ಮೆಂಟ್ ಗೆ ಮಹಿಳೆಯನ್ನು ಕರೆದೊಯ್ದು, ಅಮಲು ಪದಾರ್ಥ ಸೇರಿಸಿದ ನೀರು ಕುಡಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದರು ಎಂದು ಆರೋಪಿಸಲಾಗಿದೆ.
ದೂರು ನೀಡಿದ ಮಹಿಳೆ, ಬಾಡಿಗೆಗೆ ಫ್ಲಾಟ್ ಹುಡುಕುತ್ತಿದ್ದು, ಜಿತೇಂದ್ರ ಚೌಧರಿ ಎಂಬ ಆಸ್ತಿ ಡೀಲರ್ ಜತೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಬಾಡಿಗೆಗೆ ಲಭ್ಯವಿದೆ ಎಂದು ನಂಬಿಸಿ, ಆರೋಪಿ ಚೌಧರಿ ಮತ್ತು ಆತನ ಸಹಚರ, ಮಹಿಳೆಯನ್ನು ಖಾಲಿ ಫ್ಲಾಟ್ ಗೆ ಕರೆದೊಯ್ದರು. ಆ ಸ್ಥಳಕ್ಕೆ ತಲುಪಿದಾಗ ಮಹಿಳೆಗೆ ಅಮಲು ಪದಾರ್ಥ ಬೆರೆಸಿದ ನೀರು ಕುಡಿಸಿದರು ಎಂದು ಪೊಲೀಸರು ಹೇಳಿದ್ದಾರೆ.
ಅಮಲು ಪದಾರ್ಥ ಬೆರೆಸಿದ ನೀರು ಕುಡಿದ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದಾರೆ. ಆಗ ಆಕೆಯ ಮೇಲೆ ಇಬ್ಬರೂ ಅತ್ಯಾಚಾರ ಎಸಗಿದರು. ಬುರಾರಿ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.