ಅಂಬೇಡ್ಕರ್ ಬದುಕನ್ನು ಕಟ್ಟಿಕೊಡುವ ‘ದಿನಚರಿ’

Update: 2024-05-23 08:54 GMT
Editor : Thouheed | Byline : ಕಾರುಣ್ಯಾ

ಯುಗದ ನಾಯಕನಾಗಿ ಅಂಬೇಡ್ಕರ್ ಹೇಗೆ ಬೆಳೆದರು ಎನ್ನುವುದನ್ನು ಗ್ರಹಿಸಬೇಕಾದರೆ ಅವರ ದೈನಂದಿನ ದಿನಚರಿಗಳನ್ನು ಗಮನಿಸಬೇಕಾಗುತ್ತದೆ. ಒಂದು ವಿಶ್ವವಿದ್ಯಾನಿಲಯವಾಗಿ ಬೆಳೆದ ಅಂಬೇಡ್ಕರ್‌ರ ದೈನಂದಿನ ಬದುಕಿನ ಕ್ರಮಗಳ ಕುರಿತಂತೆ ಕುತೂಹಲವಿರುವುದು ಸಹಜ. ಅವರ ಬದುಕು, ಬರಹ, ಚಿಂತನೆಗಳನ್ನು ಕಟ್ಟಿಕೊಡುವ ಹಲವು ಕೃತಿಗಳು ಬೇರೆ ಬೇರೆ ಭಾಷೆಗಳಲ್ಲಿ ಬಂದಿವೆ. ಆದರೆ ಅವರ ದೈನಂದಿನ ಬದುಕಿನ ಕುತೂಹಲಕಾರಿ ದಿನಚರಿಗಳ ಬಗ್ಗೆ ಕೃತಿಗಳು ತೀರಾ ಅಪರೂಪ. ಅಂಬೇಡ್ಕರ್ ಅವರ ಬಹುಕಾಲದ ಒಡನಾಡಿ, ಅವರ ಆಪ್ತ ಸಹಾಯಕ, ಬಾಬಾ ಸಾಹೇಬರ ಗ್ರಂಥಾಲಯದ ನಿರ್ವಾಹಕರಾಗಿ ಕಾರ್ಯನಿರ್ವಹಿಸಿದ ದೇವಿ ದಯಾಳ್ ಅವರ ‘ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ದಿನಚರಿ’ ಈ ನಿಟ್ಟಿನಲ್ಲಿ ಒಂದು ಮಹತ್ವದ ಕೃತಿ. ಕನ್ನಡದ ಹೊಸ ತಲೆಮಾರಿನ ಮಹತ್ವದ ಸಂಶೋಧಕರಾದ ಆರಡಿ ಮಲ್ಲಯ್ಯ ಕಟ್ಟೇರ ಅವರು ಈ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ.

ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕೃತಿಯನ್ನು ರಚಿಸಲಾಗಿದೆಯಾದರೂ, ಅಂಬೇಡ್ಕರ್ ವಿಷಯದಲ್ಲಿ ಎಲ್ಲರೂ ವಿದ್ಯಾರ್ಥಿಗಳೇ ಆಗಿದ್ದಾರೆ. ಯಾಕೆಂದರೆ ಓದಿದಷ್ಟೂ ಮುಗಿಯದ ಕೃತಿ ಅವರು. ಅವರ ಬದುಕಿನ ದೈನಂದಿನ ದಿನಚರಿಯ ತುಣುಕುಗಳನ್ನು ಇಲ್ಲಿ ಕಥನ ರೂಪದಲ್ಲಿ ಆಯ್ದುಕೊಡಲಾಗಿದೆ. ಆದುದರಿಂದಲೇ ಈ ಪುಸ್ತಕ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಅಂಬೇಡ್ಕರ್ ಮತ್ತು ಅವರ ಕಾಲದ ಕುರಿತಂತೆ ಆಸಕ್ತಿಯಿರುವ ಎಲ್ಲ ಸಂಶೋಧಕರಿಗೂ ಮಾರ್ಗದರ್ಶಿಯಾಗಬಲ್ಲದು. ಅಂಬೇಡ್ಕರ್ ಅವರ ಸುದೀರ್ಘ ಲೇಖನದ ಅನುವಾದವೂ ಇಲ್ಲಿದೆ. 40 ವರ್ಷಗಳ ಕೆಳಗೆ ಬರೆದಿರುವ ಡೈರಿಯ ಆಧಾರದಲ್ಲಿ ಬಾಬಾ ಸಾಹೇಬರ ಸಂಪರ್ಕದಿಂದ ದೂರವಾದ ಬಳಿಕ ಸುಮಾರು 36-37 ವರ್ಷಗಳ ಆನಂತರ ಈ ಕೃತಿಯನ್ನು ಲೇಖಕರು ರಚಿಸಿದ್ದಾರೆ. ಇದು ಕೃತಿಯ ಹೆಗ್ಗಳಿಕೆಯೂ ಹೌದು, ಮಿತಿಯೂ ಹೌದು.

ಕೃತಿಯಲ್ಲಿ ಒಟ್ಟು ಆರು ಅಧ್ಯಾಯಗಳಿವೆ. ಇವುಗಳ ಜೊತೆಗೇ ಮೂಲ ಲೇಖಕರಾದ ದೇವಿ ದಯಾಳ್ ಅವರ ಸುದೀರ್ಘ ಅನುಭವ ಬರಹವೂ ಇದರಲ್ಲಿದೆ. ಅಂಬೇಡ್ಕರ್ ಜೊತೆಗಿನ ಹಲವು ಮಹತ್ವದ ದಿನಗಳನ್ನು, ಘಳಿಗೆಗಳನ್ನು ಅವರು ಅದರಲ್ಲಿ ಸ್ಮರಿಸಿಕೊಂಡಿದ್ದಾರೆ. ಮೊದಲ ಅಧ್ಯಾಯದ ಹೆಸರು ‘ನಾನು ಮಲಗುವ ಕೋಣೆಯೇ ನನ್ನ ಸಮಾಧಿ’. ಪೃಥ್ವಿರಾಜ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಅವರ ದೈನಂದಿನ ಆಗು ಹೋಗುಗಳು ಹೇಗಿದ್ದವು ಎನ್ನುವುದನ್ನು ಈ ಅಧ್ಯಾಯ ಹೇಳುತ್ತದೆ. ‘ಬಾಬಾ ಸಾಹೇಬರು ಕಾಲಿನ ಪಕ್ಕದಲ್ಲಿರುವ ಸ್ಟೂಲಿನ ಮೇಲೆಯೂ ತಕ್ಷಣ ಬೇಕಾಗುವ ಪುಸ್ತಕಗಳನ್ನು ಇಟ್ಟುಕೊಳ್ಳುತ್ತಿದ್ದರು. ಕುರ್ಚಿಯ ಹಿಂದಿರುವ ಅಲಮೇರದಲ್ಲಿ ಪ್ರಕಟಣೆಗೆ ಸಿದ್ಧ ಮಾಡಿರುವ ಪುಸ್ತಕಗಳಿಗೆ ಸಂಬಂಧಿಸಿ ಹಸ್ತಪ್ರತಿಗಳಿರುತ್ತಿದ್ದವು. ಅದರ ಪಕ್ಕದ ಅಲಮೇರಾದಲ್ಲಿ ಮರಾಠಿ ಮತ್ತು ಹಿಂದಿ ಪುಸ್ತಕಗಳಿದ್ದವು....’ ಹೀಗೆ ಪುಸ್ತಕಗಳ ಕೋಟೆ ಹೇಗೆ ಅಂಬೇಡ್ಕರ್‌ರನ್ನು ಸುತ್ತುವರಿದಿದ್ದವು ಎನ್ನುವುದನ್ನು ದಯಾಳ್ ನಿರೂಪಿಸುತ್ತಾ ಹೋಗುತ್ತಾರೆ. ಓದು ಅಂಬೇಡ್ಕರ್‌ಗೆ ಉಸಿರಾಟದಷ್ಟೇ ಅನಿವಾರ್ಯವಾಗಿತ್ತು. ಯಾವುದೇ ಲೇಖನಕ್ಕೆ ಅವರ ತಯಾರಿಯ ಬಗ್ಗೆಯೂ ರಸವತ್ತಾದ ವರ್ಣನೆಗಳಿವೆ. ಅಂಬೇಡ್ಕರ್ ಅವರ ಸಮಯ ಪಾಲನೆ, ಮಧ್ಯಾಹ್ನದ ಭೋಜನದ ರೀತಿ, ರಜಾದಿನಗಳನ್ನು ಕಳೆಯುವ ಬಗ್ಗೆ ಮೂರು ಅಧ್ಯಾಯಗಳಲ್ಲಿ ಕುತೂಹಲಕಾರಿ ವಿವರಗಳಿವೆ. ಉಳಿದ ಅಧ್ಯಾಯಗಳಲ್ಲಿ ಅವರ ಬದುಕು, ಚಿಂತನೆಗಳನ್ನು ತೆರೆದಿಡಲಾಗಿದೆ. ಅನುಬಂಧದಲ್ಲೂ ಹಲವು ಮಹತ್ವದ ಮಾಹಿತಿಗಳಿವೆ.

‘‘ಈ ಕೃತಿಯ ದೊಡ್ಡತನವೆಂದರೆ, ಇಂತಹ ವಿಷಯಗಳನ್ನು ನೀಡಿರುವ ಪುಸ್ತಕ ಇದೊಂದೆ. ಬಾಬಾ ಸಾಹೇಬರ ದೈನಂದಿನ ಬದುಕನ್ನು ನಮಗೆ ತೋರಿಸುತ್ತದೆಯಲ್ಲದೆ ಅವರ ಉನ್ನತವಾದ ಹವ್ಯಾಸ, ರೂಢಿಗಳನ್ನು ಈ ಪುಸ್ತಕ ನಮಗೆ ತೆರೆದಿಡುತ್ತದೆ. ಅಂಬೇಡ್ಕರ್‌ರನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಆ ಕಡೆ ವಿದ್ಯಾರ್ಥಿಗಳಿಗೂ ಈ ಕಡೆ ಸಂಶೋಧಕರಿಗೂ ಈ ಪುಸ್ತಕ ಉಪಯುಕ್ತ’’ ಎಂದು ಕೃತಿಯ ಬೆನ್ನುಡಿಯಲ್ಲಿ ಶಾಂತಿ ಸ್ವರೂಪ್ ಬೌದ್ಧ ಅವರು ಅಭಿಪ್ರಾಯ ಪಡುತ್ತಾರೆ.

ಅಹರ್ನಿಶಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. 160 ಪುಟಗಳ ಈ ಕೃತಿಯ ಮುಖಬೆಲೆ 180 ರೂಪಾಯಿ. ಆಸಕ್ತರು 94491 74662, 94486 28511 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕಾರುಣ್ಯಾ

contributor

Similar News

ಪತನದ ಕಳವಳ