ಬಿಜೆಪಿ ಮುಕ್ತ ದಕ್ಷಿಣ ಭಾರತ

ಇತ್ತೀಚೆಗೆ ನಡೆದ ತೆಲಂಗಾಣ ಚುನಾವಣೆಯಲ್ಲೂ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಮಂತ್ರ ಪಠಿಸಿ ಬಿಆರ್ಎಸ್ ಸರಕಾರದ ವಿರುದ್ಧ ಜೋರಾಗಿ ಪ್ರಚಾರ ಮಾಡಿದ್ದರೆ ಆಡಳಿತ ವಿರೋಧಿ ಅಲೆ ಬಿಜೆಪಿಗೆ ವರವಾಗುತ್ತಿತ್ತು. ಅಲ್ಲೂ ಬಿ.ಎಲ್. ಸಂತೋಷ್ ಮತ್ತವರ ತಂಡದ ತಂತ್ರಗಾರಿಕೆ ಹಾಗೂ ಕಾರ್ಯಾಚರಣೆ ಸೋತಿದೆ. ಸಂತೋಷ್ ಅವರು ತೆಲಂಗಾಣ ಉಸ್ತುವಾರಿ ವಹಿಸಿದ ಮೇಲೆಯೇ ಕಾಂಗ್ರೆಸ್ಗೆ ಅವಕಾಶದ ಬಾಗಿಲು ತೆರೆದಿದ್ದು. ಬಂಡಿ ಸಂಜಯ ಕುಮಾರ್ರನ್ನು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯಲಾಯಿತು. ಕೇಂದ್ರ ಮಂತ್ರಿ ಜಿ. ಕಿಶನ್ ರೆಡ್ಡಿ ರಾಜ್ಯಾಧ್ಯಕ್ಷರಾಗಿ ಜನಾಕರ್ಷಣೆ ಮಾಡಲೇ ಇಲ್ಲ. ಹಿರಿಯ ಜನಪ್ರಿಯ ನಟಿ ವಿಜಯಶಾಂತಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಉಗ್ರ ಹಿಂದುತ್ವ ಮುಸ್ಲಿಮ್ ದ್ವೇಷದ ಭಾಷಣವನ್ನು ಜನ ತಿರಸ್ಕರಿಸಿದರು.

Update: 2023-12-09 05:26 GMT

‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಘೋಷಣೆಯೊಂದಿಗೆ ೨೦೧೪ರ ಲೋಕಸಭಾ ಚುನಾವಣೆ ಎದುರಿಸಿದ ನರೇಂದ್ರ ಮೋದಿಯವರು ಎನ್.ಡಿ.ಎ. ಮಿತ್ರ ಪಕ್ಷಗಳ ಹಂಗಿಲ್ಲದೆ ಸ್ಥಿರ ಸರಕಾರ ರಚಿಸಿದರು. ಕಾಂಗ್ರೆಸೇತರ ಪಕ್ಷಗಳಿಗೆ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಸಾಧ್ಯವಾಗಿರಲೇ ಇಲ್ಲ. ೯೦ರ ದಶಕದಿಂದ ಈಚೆಗೆ ಕಾಂಗ್ರೆಸ್ ಪಕ್ಷಕ್ಕೂ ಸ್ವಂತ ಬಲದ ಮೇಲೆ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ವಾಜಪೇಯಿ ಅವರ ಜಂಟಲ್ಮ್ಯಾನ್ ಇಮೇಜ್, ಅಡ್ವಾಣಿಯವರ ಹಾರ್ಡ್ ಕೋರ್ ಹಿಂದುತ್ವ, ರಾಮ ರಥ ಯಾತ್ರೆ ಯಾವುದೂ ಬಿಜೆಪಿಗೆ ಕೇಂದ್ರದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ನೆರವಾಗಲಿಲ್ಲ. ವಾಜಪೇಯಿಯವರು ಪ್ರಧಾನಿ ಮತ್ತು ಲಾಲ್ಕೃಷ್ಣ ಅಡ್ವಾಣಿ ಅವರು ಉಪ ಪ್ರಧಾನಿ ಹುದ್ದೆ ಅಲಂಕರಿಸಿದ್ದಾಗ ಮುಂದಿನ ಪ್ರಧಾನಿ ರೆೇಸಿನಲ್ಲಿ ಹಲವಾರು ಜನರಿದ್ದರು. ಪ್ರಮೋದ್ ಮಹಾಜನ್, ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಮನೋಹರ್ ಪಾರಿಕ್ಕರ್, ಅನಂತಕುಮಾರ್ ಪ್ರಧಾನಿ ಹುದ್ದೆ ಅಲಂಕರಿಸುವವರ ಸಾಲಿನಲ್ಲಿ ನಿಂತಿದ್ದರು. ನರೇಂದ್ರ ಮೋದಿಯವರು ಲೆಕ್ಕಕ್ಕೇ ಇರಲಿಲ್ಲ. ‘ವಿಕಾಸ’ದ ಮಂತ್ರ ಜಪಿಸುತ್ತಾ ನೋಡು ನೋಡುತ್ತಿದ್ದಂತೆ ಮೋದಿ ಪ್ರಧಾನಿ ಹುದ್ದೆಗೇರಿದರು. ಆನಂತರ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ ನೇಪಥ್ಯಕ್ಕೆ ಸರಿದರು. ರಾಷ್ಟ್ರಪತಿ ಹುದ್ದೆಗೂ ಅವರ ಹೆಸರು ಪರಿಗಣನೆಗೆ ಬರಲಿಲ್ಲ. ಎರಡು ಅವಧಿ ಮುಗಿಸಿ ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಲು ಹೊರಟಿದ್ದಾರೆ. ಆಶ್ಚರ್ಯ ಸಂಗತಿ ಎಂದರೆ; ಇಡೀ ದಕ್ಷಿಣ ಭಾರತ ಬಿಜೆಪಿ ಕೈತಪ್ಪಿದೆ.

ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮುನ್ನವೂ ಭಾರತೀಯ ಜನತಾ ಪಕ್ಷ ಮತ್ತು ಸಂಘ ಪರಿವಾರದ ಮುಖಂಡರು ದಕ್ಷಿಣ ಭಾರತದ ರಾಜ್ಯಗಳಲ್ಲಿ ಕ್ರಿಯಾಶೀಲರಾಗಿದ್ದರು. ಅವಿಭಜಿತ ಆಂಧ್ರಪ್ರದೇಶದ ವೆಂಕಯ್ಯ ನಾಯ್ಡು ಅವರನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರನ್ನಾಗಿಸಿದ್ದರು(೨೦೦೨-೨೦೦೪). ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದಾಗಲೆಲ್ಲ ವೆಂಕಯ್ಯ ನಾಯ್ಡು ಅವರು ಪ್ರಮುಖ ಖಾತೆಯೊಂದಿಗೆ ಮಂತ್ರಿ ಸ್ಥಾನದಲ್ಲಿ ಇರುತ್ತಿದ್ದರು. ಕರ್ನಾಟಕದ ಅನಂತಕುಮಾರ್ ವಾಜಪೇಯಿ-ಅಡ್ವಾಣಿ ಅವರ ಕಾಲದಲ್ಲಿ ಬಲಗೈ ಬಂಟನ ಪಾತ್ರ ನಿರ್ವಹಿಸುತ್ತಿದ್ದರು. ಸರಕಾರದಲ್ಲಿ ಪ್ರಭಾವಿ ಮಂತ್ರಿ, ಪಕ್ಷದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಪಡೆಯುತ್ತಿದ್ದರು. ಅಷ್ಟು ಮಾತ್ರವಲ್ಲ ಕರ್ನಾಟಕ ಬಿಜೆಪಿಯ ಕಾರ್ಯವೈಖರಿಯನ್ನು ಅವರೇ ನಿರ್ಧರಿಸುತ್ತಿದ್ದರು. ತುಮಕೂರು ಲೋಕಸಭಾ ಕ್ಷೇತ್ರದ ಮೂರು ಅವಧಿಯ ಎಂಪಿ, ಎಸ್. ಮಲ್ಲಿಕಾರ್ಜುನಯ್ಯ ಅವರು ಲೋಕಸಭೆಯಲ್ಲಿ ಡೆಪ್ಯೂಟಿ ಸ್ಪೀಕರ್ ಹುದ್ದೆ ಪಡೆಯಲು ಸಾಧ್ಯವಾಗಿದ್ದು ಅನಂತಕುಮಾರ್-ಯಡಿಯೂರಪ್ಪ ಕಾರಣಕ್ಕೆ. ಅನಂತಕುಮಾರ್ ಹಿಂದುತ್ವ ಪ್ರತಿಪಾದಿಸಿದರೆ, ಯಡಿಯೂರಪ್ಪ ರೈತ ನಾಯಕನ ಮುಖವಾಡ ಧರಿಸಿದ್ದರು. ಅವರಿಬ್ಬರೂ ಎಷ್ಟೇ ಪ್ರಯತ್ನಿಸಿದರೂ ಕರ್ನಾಟಕದಲ್ಲಿ ೮೦-೯೦ರ ದಶಕದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಲೇ ಇಲ್ಲ. ಕಾರಣ ಬಿಜೆಪಿಯ ಹಿಂದುತ್ವದ ಅಜೆಂಡಾ. ಕರ್ನಾಟಕ ಮಾತ್ರವಲ್ಲ; ಅವಿಭಜಿತ ಆಂಧ್ರ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲೂ ಹಿಂದುತ್ವದ ರಾಜಕಾರಣಕ್ಕೆ ಮತದಾರ ಮನ್ನಣೆ ನೀಡಲಿಲ್ಲ.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಹತ್ತಿರ ಬರಲು ಸಾಧ್ಯವಾಗಿದ್ದು ಮೂರು ಕಾರಣಕ್ಕೆ. ಒಂದು ಜನತಾ ಪರಿವಾರದ ವಿಘಟನೆ. ರಾಮಕೃಷ್ಣ ಹೆಗಡೆ ಮತ್ತು ಎಚ್.ಡಿ. ದೇವೇಗೌಡ ಅವರ ಬಣ ರಾಜಕೀಯದ ಕಿತ್ತಾಟದಿಂದ ಜನತಾ ಪರಿವಾರದ ಅನೇಕ ಹಿರಿಯ ನಾಯಕರು ಕಾಂಗ್ರೆಸ್ ಮತ್ತು ಬಿಜೆಪಿಗೆ ವಲಸೆ ಹೋದರು; ಸಿದ್ಧಾಂತಗಳ ಹಂಗು ತೊರೆದು. ಸಿದ್ದರಾಮಯ್ಯ ಅವರ ಬಣ ಹೊರತುಪಡಿಸಿ ೨೦೦೪ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಜನತಾ ಪರಿವಾರದ ಬಹುಪಾಲು ನಾಯಕರು ಕಾಂಗ್ರೆಸ್, ಬಿಜೆಪಿಯಲ್ಲಿ ಹಂಚಿಹೋದರು. ರಾಮಕೃಷ್ಣ ಹೆಗಡೆಯವರ ಶಿಷ್ಯ ದಲಿತ ಎಡಗೈ ಸಮುದಾಯದ ರಮೇಶ್ ಜಿಗಜಿಣಗಿ ಸೇರಿದಂತೆ ಹಲವರು ಬಿಜೆಪಿ ಸೇರಿಕೊಂಡರು. ಸಿ.ಎಂ. ಉದಾಸಿ, ಚಂದ್ರಕಾಂತ ಬೆಲ್ಲದ ಸೇರಿದಂತೆ ಉತ್ತರ ಕರ್ನಾಟಕದ ಹಲವಾರು ಲಿಂಗಾಯತ ಮುಖಂಡರು ಬಿಜೆಪಿ ಪಾಲಾದರೆ ಸೈದ್ಧಾಂತಿಕ ಕಾರಣಕ್ಕೆ ಬಸವರಾಜ ರಾಯರೆಡ್ಡಿ ಮುಂತಾದವರು ಕಾಂಗ್ರೆಸ್ ಸೇರಿದರು. ೨೦೦೪ರ ಮಹಾಧ್ರುವೀಕರಣದಿಂದ ಆ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ೭೯ ಸ್ಥಾನಗಳನ್ನು ಗೆಲ್ಲುವ ಮೂಲಕ ಕರ್ನಾಟಕ ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಈ ಹಿಂದಿನ (೧೯೯೯) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ೪೪ ಸ್ಥಾನಗಳಿಗೆ ತೃಪ್ತಿ ಪಟ್ಟಿತ್ತು. ಜನತಾ ಪರಿವಾರದ ಬಹುಪಾಲು ಮುಖಂಡರು ಅದರಲ್ಲೂ ರಾಮಕೃಷ್ಣ ಹೆಗಡೆಯವರ ಶಿಷ್ಯರು ದೇವೇಗೌಡರ ಕಾರಣಕ್ಕೆ ಕಾಂಗ್ರೆಸ್-ಬಿಜೆಪಿ ಪಾಲಾಗಿದ್ದರೂ ಸಿದ್ದರಾಮಯ್ಯ ಅವರ ಕಾರಣಕ್ಕೆ ಕೆಲವರು ಜೆಡಿಎಸ್ನಲ್ಲಿ ಸೇರಿಕೊಂಡರು. ೧೯೯೯ರಲ್ಲಿ ಜೆಡಿಎಸ್ ಶಾಸಕರ ಬಲ ಕೇವಲ ೧೦ ಇತ್ತು. ಸಿದ್ದರಾಮಯ್ಯ, ಎಂ.ಪಿ. ಪ್ರಕಾಶ್, ಸಿಂಧ್ಯಾ, ವೈಜನಾಥ ಪಾಟೀಲ್, ಬಿ.ಆರ್. ಪಾಟೀಲ್ ಮುಂತಾದವರು ಜೆಡಿಎಸ್ನಲ್ಲಿ ಇದ್ದಿದ್ದರಿಂದ ೨೦೦೪ರ ವಿಧಾನಸಭೆಯಲ್ಲಿ ಆ ಪಕ್ಷದ ಶಾಸಕರ ಬಲ ೫೮ಕ್ಕೆ ಏರಿತ್ತು. ೧೯೯೯ರಿಂದ ೫ ವರ್ಷಗಳ ಕಾಲ ಕರ್ನಾಟಕದಲ್ಲಿ ಆಡಳಿತ ನಡೆಸಿದ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಪಕ್ಷ ೨೦೦೪ರ ಚುನಾವಣೆಯಲ್ಲಿ ಹೀನಾಯವಾಗಿ ಮುಗ್ಗರಿಸಿತು. ಕಾಂಗ್ರೆಸ್ ಪಕ್ಷದ ಸಂಖ್ಯಾಬಲ ೧೩೫ರಿಂದ ೬೫ಕ್ಕೆ ಕುಸಿಯಿತು.

೨೦೦೪ರ ಚುನಾವಣೆಯಲ್ಲಿ ಮಹಾಧ್ರುವೀಕರಣದಿಂದಾಗಿ ಬಿಜೆಪಿ ತನ್ನ ಶಾಸಕರ ಬಲವನ್ನು ೭೯ಕ್ಕೆ ಹೆಚ್ಚಿಸಿಕೊಂಡಿತ್ತಾದರೂ ಜಾತ್ಯತೀತ ಶಕ್ತಿಯ ಬಲವೇನು ಕುಗ್ಗಿರಲಿಲ್ಲ ಹಾಗಾಗಿ ೨೦೦೪ರಲ್ಲಿ ಕರ್ನಾಟಕಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬಂದಿತು. ಧರಂಸಿಂಗ್ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಆಗಿ ಉತ್ತಮ ಆಡಳಿತ ನೀಡುತ್ತಿದ್ದರು. ದಕ್ಷಿಣ ಭಾರತದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಎರಡನೇ ಕಾರಣ ಎಚ್.ಡಿ. ಕುಮಾರಸ್ವಾಮಿ ಅವರ ವಚನಭ್ರಷ್ಟತೆ. ಧರಂಸಿಂಗ್-ಸಿದ್ದರಾಮಯ್ಯ ನೇತೃತ್ವದ ಮೈತ್ರಿ ಸರಕಾರ ಮುಂದುವರಿದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ನೆಲೆಯೂರಲು ಸಾಧ್ಯವಾಗುತ್ತಿರಲಿಲ್ಲ. ಕ್ಷಿಪ್ರಕ್ರಾಂತಿಯ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರು ೨೦೦೬ರಲ್ಲಿ ಕರ್ನಾಟಕ; ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ಕಾಣುವಂತೆ ಮಾಡಿದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡು ರಾಜ್ಯಭಾರ ಶುರು ಮಾಡಿದರು. ಜೆಡಿಎಸ್-ಬಿಜೆಪಿ ಕೂಡಿಕೆಗೆ ಅನಂತಕುಮಾರ್ ಸಮ್ಮತಿ ಇರಲಿಲ್ಲ. ಹಿಂದುತ್ವ ಪ್ರತಿಪಾದಿಸುವ ಸಂಘ ಪರಿವಾರವೂ ಮನಸಾರೆ ಒಪ್ಪಿರಲಿಲ್ಲ. ದೇವೇಗೌಡರೂ ತಮಗೆ ಒಪ್ಪಿಗೆ ಇರಲಿಲ್ಲ ಎಂಬಂತೆ ಬಿಂಬಿಸಿಕೊಂಡರು. ೨೦ ತಿಂಗಳು ಅಧಿಕಾರ ನಡೆಸಿದ ಕುಮಾರಸ್ವಾಮಿಯವರು ಮುಂದಿನ ೨೦ ತಿಂಗಳಿಗೆ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರಿಸಿದರೂ ಬಿಜೆಪಿ ಆಂತರಿಕ ಕಚ್ಚಾಟದಿಂದಲೇ ನೆಲೆ ಕಳೆದುಕೊಳ್ಳುತ್ತಿತ್ತು. ಯಡಿಯೂರಪ್ಪ ನಾಯಕತ್ವ ಅಲ್ಲಿಗೆ ಕೊನೆಗೊಳ್ಳುತ್ತಿತ್ತು. ಕುಮಾರಸ್ವಾಮಿಯವರು ಮುಂದಿನ ೨೦ ತಿಂಗಳಿಗೆ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಮಾಡಿಕೊಡಲಿಲ್ಲ. ೧೯೮೯ರಲ್ಲಿ ಕಾಂಗ್ರೆಸ್ಗೆ ಅತ್ಯಧಿಕ ಬಹುಮತ ತಂದು ಕೊಟ್ಟ (೧೭೮ ಶಾಸಕರು) ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲರನ್ನು ಪಕ್ಷ ಒಂದೇ ವರ್ಷದಲ್ಲಿ ಅಧಿಕಾರದಿಂದ ಕೆಳಗಿಳಿಸಿದ್ದಕ್ಕೆ ಆ ಸಮುದಾಯ ಕೆರಳಿತ್ತು. ದಿನಬೆಳಗಾಗುವುದರಲ್ಲಿ ದುರಂತ ನಾಯಕ ಯಡಿಯೂರಪ್ಪ ಲಿಂಗಾಯತ ನಾಯಕರಾದರು. ೨೦೦೮ರ ಚುನಾವಣೆಯಲ್ಲಿ ವಚನಭ್ರಷ್ಟತೆ ಅಸ್ತ್ರ-ಲಿಂಗಾಯತ ಕಾರ್ಡ್ ಬಳಸಿಯೂ ಬಿಜೆಪಿ ಶಾಸಕರ ಬಲ ೧೧೦ಕ್ಕೆ ನಿಂತಿತು. ಹಿಂದುತ್ವದ ಹಿಡನ್ ಅಜೆಂಡಾ ಹೊಂದಿರಬಹುದು ಎಂದು ಬಿಜೆಪಿಗೆ ಸರಳ ಬಹುಮತವನ್ನು ಕರ್ನಾಟಕದ ಮತದಾರ ನೀಡಲಿಲ್ಲ.

ಆಪರೇಷನ್ ಕಮಲದ ಮೂಲಕ ೨೦೦೮ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಯಡಿಯೂರಪ್ಪ ಹಸಿರು ಶಾಲು ಧರಿಸಿ ಪ್ರಮಾಣವಚನ ಸ್ವೀಕರಿಸಿದರು. ರೈತ ಮತ್ತು ಜನಸಾಮಾನ್ಯರ ಸರಕಾರ ಎಂದು ಬಿಂಬಿಸಿಕೊಳ್ಳಲು ಯತ್ನಿಸಿದರು. ಹಿಂದೂ-ಮುಸ್ಲಿಮರು ಅಣ್ಣತಮ್ಮಂದಿರಂತೆ ಬದುಕಬೇಕು. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಬೇಕು. ಅಭಿವೃದ್ಧಿಯಲ್ಲಿ ಈ ನಾಡು ಮಾದರಿ ರಾಜ್ಯವಾಗಬೇಕು ಎಂದೆಲ್ಲ ಹೇಳುವ ಮೂಲಕ ಹಿಂದುತ್ವದ ಅಜೆಂಡಾವನ್ನು ಹಿಂದೆ ಸರಿಸಿದರು. ೨೦೦೯ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಮೊದಲ ಬಾರಿಗೆ ೧೯ ಎಂಪಿಗಳು ಬಿಜೆಪಿ ಟಿಕೆಟ್ ಮೇಲೆ ಗೆದ್ದರು. ಐದು ವರ್ಷಗಳ ಕಾಲ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿ ಮುಂದುವರಿದಿದ್ದರೆ ರಾಜ್ಯದಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಯೂರುತ್ತಿತ್ತು. ಅನಂತ ಕುಮಾರ್, ಬಿ.ಎಲ್. ಸಂತೋಷ್ ಅವರಿಗೆ ತಮ್ಮ ಮಾತು ಕೇಳುವ, ಹಿಂದುತ್ವದ ಅಜೆಂಡಾ ಜಾರಿಗೊಳಿಸುವ ದುರ್ಬಲ ಮುಖ್ಯಮಂತ್ರಿ ಬೇಕಿತ್ತು. ಯಡಿಯೂರಪ್ಪ ಜನಪ್ರಿಯ ಮತ್ತು ಎಲ್ಲಾ ಸಮುದಾಯಗಳ ಮುಖ್ಯಮಂತ್ರಿ ಆಗಲು ಹೊರಟರು. ಹೈಕಮಾಂಡ್ ಮೂಲಕ ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು ಯತ್ನಿಸಿದರು. ಅದು ಸಾಧ್ಯವಾಗದೆ ಹೋದಾಗ ಜೈಲು ಪಾಲು ಮಾಡಿ ಕೊನೆಗೆ ರಾಜೀನಾಮೆ ಕೊಡುವಂತೆ ಮಾಡಿದರು.

ಅಷ್ಟೊತ್ತಿಗೆ ಲಿಂಗಾಯತ ನಾಯಕನಾಗಿ, ಜನನಾಯಕನಾಗಿ ಬೆಳೆದಿದ್ದ ಯಡಿಯೂರಪ್ಪ ೨೦೧೩ರ ವಿಧಾನಸಭಾ ಚುನಾವಣೆ ಹೊತ್ತಿಗೆ ಕೆಜೆಪಿ ಕಟ್ಟಿ ಬಿಜೆಪಿಗೆ ಸಡ್ಡು ಹೊಡೆದು ಶಾಸಕರ ಬಲ ೪೦ಕ್ಕೆ ಕುಸಿಯುವಂತೆ ಮಾಡಿದರು. ಪ್ರಾದೇಶಿಕ ಪಕ್ಷ ಜೆಡಿಎಸ್ನ ಶಾಸಕರ ಸಂಖ್ಯಾಬಲವೂ ೪೦ ಇತ್ತು. ೨೦೧೮ರಿಂದ ೫ ವರ್ಷಗಳ ಕಾಲ ಸಿದ್ದರಾಮಯ್ಯನವರು ಅತ್ಯುತ್ತಮ ಆಡಳಿತವೇನೋ ನೀಡಿದರು. ಆದರೆ ಕೊನೆಗೆ ವೀರಶೈವ -ಲಿಂಗಾಯತ ಬಾಣಬಿಟ್ಟು ತಿರುಗುಬಾಣದ ಪೆಟ್ಟಿನಿಂದ ಮುಗ್ಗರಿಸಿದರು. ೨೦೧೮ರಲ್ಲೂ ಯಡಿಯೂರಪ್ಪ ಕಾರಣಕ್ಕೆ ಬಿಜೆಪಿ ೧೦೪ ಶಾಸಕರನ್ನು ಹೊಂದುವಂತಾಯಿತು. ೨೦೧೮ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಸರಕಾರದಲ್ಲಿ ಸಮನ್ವಯದ ಕೊರತೆ ಇದ್ದಿದ್ದರಿಂದ ಅಧಿಕಾರ ಕಳೆದುಕೊಂಡಿತು. ಮತ್ತೆ ಆಪರೇಷನ್ ಕಮಲದ ಮೂಲಕ ಕರ್ನಾಟಕದಲ್ಲಿ (೨೦೧೯) ಅಧಿಕಾರದ ಚುಕ್ಕಾಣಿ ಹಿಡಿದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಬರ-ನೆರೆ-ಕೊರೋನದ ದಿನಗಳಲ್ಲೂ ಅಸಹಕಾರ ತೋರಿದ್ದು ಬಿ.ಎಲ್. ಸಂತೋಷ್ ಮತ್ತವರ ತಂಡ. ಆ ತಂಡದ ಮಾತು ಕೇಳಿದ ಹೈಕಮಾಂಡ್ ಕರ್ನಾಟಕದ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲಿಲ್ಲ. ಯಡಿಯೂರಪ್ಪನವರನ್ನು ಕಿತ್ತೆಸೆದು ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸಿದರು. ಬೊಮ್ಮಾಯಿಯವರ ಮೂಲಕ ಹಿಂದುತ್ವದ ಅಜೆಂಡಾ ಜಾರಿಗೊಳಿಸಲು ಯತ್ನಿಸಿದರು. ಕರ್ನಾಟಕದ ಸಂಸ್ಕೃತಿಗೆ ಒಗ್ಗದ ಮತೀಯ ರಾಜಕಾರಣದ ಪ್ರಯೋಗ ಮಾಡಿ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಮುಗ್ಗರಿಸಿದರು.

ಲಿಂಗಾಯತ ನಾಯಕನನ್ನು ಮುಂದಿಟ್ಟುಕೊಂಡು ಅಭಿವೃದ್ಧಿ ಮಂತ್ರ ಜಪಿಸಿ ಸೋಷಿಯಲ್ ಇಂಜಿನಿಯರಿಂಗ್ ತಕ್ಕಮಟ್ಟಿಗೆ ಅಳವಡಿಸಿಕೊಂಡಿದ್ದರ ಫಲವಾಗಿ ಬಿಜೆಪಿ ಸ್ವಲ್ಪಮಟ್ಟಿಗೆ ಕರ್ನಾಟಕದ ಮತದಾರರ ಪ್ರೀತಿಗೆ ಪಾತ್ರವಾಗಿತ್ತು. ಬಿ.ಎಲ್. ಸಂತೋಷ್ ಅವರ ತಂತ್ರಗಾರಿಕೆ ಕರ್ನಾಟಕದಲ್ಲಿ ಮಾತ್ರವಲ್ಲ, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿ ವಿಫಲವಾಗಿದೆ. ತಮಿಳುನಾಡಿನಲ್ಲಿ ಅಧಿಕಾರ ಹಿಡಿಯಲು ಹಲವಾರು ಜನ ಡಮ್ಮಿ ಜನನಾಯಕರ ಮೂಲಕ ಪ್ರಯತ್ನಿಸಿ ಬಿ.ಎಲ್. ಸಂತೋಷ್ ಅವರು ವಿಫಲರಾಗಿದ್ದರು. ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಡಾ. ತಮಿಳ್ಇಸೈ ಸೌಂದರರಾಜನ್ ಅವರನ್ನು ನೇಮಿಸಲಾಗಿತ್ತು ತಮಿಳ್ಇಸೈ ತಾವು ಗೆಲ್ಲಲಿಲ್ಲ. ಬೇರೆಯವರ ಗೆಲುವಿಗೂ ಕಾರಣವಾಗಲಿಲ.್ಲ ಸತತ ಸೋಲಿಗೆ ಕಾರಣರಾದ ಡಾ. ತಮಿಳ್ಇಸೈ ಸೌಂದರರಾಜನ್ ಅವರನ್ನು ತೆಲಂಗಾಣದ ರಾಜ್ಯಪಾಲರನ್ನಾಗಿಸಿದರು. ಈಗ ತಮಿಳುನಾಡಿನ ರಾಜ್ಯಾಧ್ಯಕ್ಷರಾಗಿರುವವರು ಕರ್ನಾಟಕ ಕೇಡರಿನ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ. ಅವರ ಅರ್ಹತೆಯೆಂದರೆ ಬಿ.ಎಲ್. ಸಂತೋಷ ಅವರ ಶಿಷ್ಯ ಎಂಬುದು. ಬಿ.ಎಲ್. ಸಂತೋಷ್ ಅವರ ಮಾರ್ಗದರ್ಶನ ಮತ್ತು ತಂತ್ರಗಾರಿಕೆಯಲ್ಲಿ ಕೆ. ಅಣ್ಣ್ಣಾಮಲೈ ತಮಿಳುನಾಡಿನಲ್ಲಿ ವಿಫಲರಾಗಿದ್ದಾರೆ. ಸೈದ್ಧಾಂತಿಕ ವಿಷಯದಲ್ಲಿ ಕರ್ನಾಟಕಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ತಮಿಳುನಾಡು ಬಿಜೆಪಿಯ ಹಿಂದುತ್ವವನ್ನು, ಅಣ್ಣಾಮಲೈ ಅವರ ತಿಕ್ಕಲು ನಾಯಕತ್ವವನ್ನು ಎಂದಿಗೂ ಬೆಂಬಲಿಸದು. ಅಣ್ಣಾಮಲೈ ಅವರ ಬಗ್ಗೆ ತಮಿಳುನಾಡು ಬಿಜೆಪಿಯಲ್ಲಿ ಸಾಕಷ್ಟು ಅಸಮಾಧಾನ ಇದೆ. ಮಿತ್ರ ಪಕ್ಷ ಎಐಡಿಎಂಕೆ ಅಣ್ಣಾಮಲೈ ಕಾರಣಕ್ಕೆ ಸಂಬಂಧ ಕಡಿದುಕೊಳ್ಳುವುದಾಗಿ ಹೇಳಿಕೊಂಡಿದೆ. ಹಿಂದುತ್ವ ಮತ್ತು ರಾಷ್ಟ್ರೀಯತೆಯನ್ನು ತಮಿಳು ಜನತೆ ಒಪ್ಪುವುದು ಕಷ್ಟ ಎಂಬುದು ಸಾಬೀತಾಗಿದೆ. ಅಭಿವೃದ್ಧಿ ರಾಜಕಾರಣ, ಬಡವರ ಪರ ಯೋಜನೆಗಳು ಮಾತಾಡಿದರೆ ಬಿಜೆಪಿಗೆ ಆರಂಭಿಕ ನೆಲೆಯಾದರೂ ಸಿಗಬಹುದಿತ್ತು.

ಕೇರಳದಲ್ಲೂ ಬಿಜೆಪಿ ನೆಲೆ ಕಂಡುಕೊಳ್ಳಲು ಬಿ.ಎಲ್. ಸಂತೋಷ್ ಮೂಲಕ ಸಾಕಷ್ಟು ಶ್ರಮಿಸಿದೆ. ಅದರ ಭಾಗವಾಗಿಯೇ ರಾಜೀವ್ ಚಂದ್ರಶೇಖರ್ ಅವರಿಗೆ ರಾಜ್ಯಸಭಾ ಸ್ಥಾನ ಮತ್ತು ಮಂತ್ರಿಗಿರಿ ದೊರೆತಿದೆ. ಮೆಟ್ರೋಮ್ಯಾನ್ ಎಂದೇ ಹೆಸರು ಮಾಡಿದ ೯೧ ವರ್ಷ ವಯಸ್ಸಿನ ಈ. ಶ್ರೀಧರನ್ ಅವರ ನೇತೃತ್ವದಲ್ಲಿ ಕೇರಳ ವಿಧಾನಸಭಾ ಚುನಾವಣೆಯನ್ನು ಎದುರಿಸಲಾಯಿತು. ವಯಸ್ಸಿನ ಕಾರಣಕ್ಕೆ ಕರ್ನಾಟಕದಲ್ಲಿ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವ ಪ್ರಯತ್ನ ನಡೆಯುವಾಗ ಕೇರಳದಲ್ಲಿ ಈ. ಶ್ರೀಧರನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲಾಗಿತ್ತು. ಚುನಾವಣೆಯಲ್ಲಿ ಅವರೂ ಸೋತರು ಮತ್ತು ಪಕ್ಷವೂ ನೆಲಕಚ್ಚಿತು. ಕೇರಳದಲ್ಲಿ ಸೋಲುಕಂಡ ಈ. ಶ್ರೀಧರನ್ ಅವರೇ ‘‘ಲವ್ಜಿಹಾದ್ ಕೇರಳದಲ್ಲಿ ಗಂಭೀರ ಸಮಸ್ಯೆಯಲ್ಲ. ಅತಿಯಾದ ಹಿಂದುತ್ವ ಬಿಜೆಪಿ ಕೈಬಿಡಬೇಕು. ಎಲ್ಲರ ಹಿತ ಕಾಯುವ ಸಂದೇಶ ರವಾನೆಯಾಗಬೇಕು. ರಾಜ್ಯಾಧ್ಯಕ್ಷರನ್ನು ಮತ್ತೆ ಮತ್ತೆ ಬದಲಾಯಿಸುವುದು ಸರಿಯಲ್ಲ. ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಹಿಂದುತ್ವದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಅಂತ ಮೋದಿಯವರೇ ಹೇಳುವಾಗ ನಾವು ಸ್ಥಳೀಯವಾಗಿ ಹಿಂದುತ್ವದ ಪ್ರಚಾರ ಪ್ರಸ್ತಾಪಿಸಿ ಜನರ ಕಣ್ಣಲ್ಲಿ ಸಣ್ಣವರಾಗುತ್ತಿದ್ದೇವೆ’’ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ತೆಲಂಗಾಣ ಚುನಾವಣೆಯಲ್ಲೂ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಮಂತ್ರ ಪಠಿಸಿ ಬಿಆರ್ಎಸ್ ಸರಕಾರದ ವಿರುದ್ಧ ಜೋರಾಗಿ ಪ್ರಚಾರ ಮಾಡಿದ್ದರೆ ಆಡಳಿತ ವಿರೋಧಿ ಅಲೆ ಬಿಜೆಪಿಗೆ ವರವಾಗುತ್ತಿತ್ತು. ಅಲ್ಲೂ ಬಿ.ಎಲ್. ಸಂತೋಷ್ ಮತ್ತವರ ತಂಡದ ತಂತ್ರಗಾರಿಕೆ ಹಾಗೂ ಕಾರ್ಯಾಚರಣೆ ಸೋತಿದೆ. ಸಂತೋಷ್ ಅವರು ತೆಲಂಗಾಣ ಉಸ್ತುವಾರಿ ವಹಿಸಿದ ಮೇಲೆಯೇ ಕಾಂಗ್ರೆಸ್ಗೆ ಅವಕಾಶದ ಬಾಗಿಲು ತೆರೆದಿದ್ದು. ಬಂಡಿ ಸಂಜಯ ಕುಮಾರ್ರನ್ನು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯಲಾಯಿತು. ಕೇಂದ್ರ ಮಂತ್ರಿ ಜಿ. ಕಿಶನ್ ರೆಡ್ಡಿ ರಾಜ್ಯಾಧ್ಯಕ್ಷರಾಗಿ ಜನಾಕರ್ಷಣೆ ಮಾಡಲೇ ಇಲ್ಲ. ಹಿರಿಯ ಜನಪ್ರಿಯ ನಟಿ ವಿಜಯಶಾಂತಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಉಗ್ರ ಹಿಂದುತ್ವ ಮುಸ್ಲಿಮ್ ದ್ವೇಷದ ಭಾಷಣವನ್ನು ಜನ ತಿರಸ್ಕರಿಸಿದರು. ಉವೈಸಿ ಪಕ್ಷಕ್ಕೆ ೭ ಸ್ಥಾನ ದೊರೆತರೆ ಬಿಜೆಪಿಗೆ ೮ ಶಾಸಕರು ಸಿಕ್ಕರು. ಕರ್ನಾಟಕದಲ್ಲಿ ವಿಜಯೇಂದ್ರ-ಆರ್.ಅಶೋಕ್ ವಿರುದ್ಧ ಸಂತೋಷ್ ಪಡೆ ಕತ್ತಿ ಝಳಪಿಸುತ್ತಿದೆ.ಬಸನಗೌಡ ಪಾಟೀಲ ಯತ್ನಾಳ್ ಕ್ರಿಯಾಶೀಲರಾಗಿದ್ದಾರೆ. ಅಂತೂ ಇಂತೂ ದಕ್ಷಿಣ ಭಾರತದ ರಾಜ್ಯಗಳು ಬಿಜೆಪಿಯಿಂದ ಬಚಾವ್. ಸಂತೋಷ್ ತಂತ್ರಗಾರಿಕೆ ಮುಂದುವರಿಯುತ್ತಲೇ ಇರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಡಾ. ರಾಜಶೇಖರ ಹತಗುಂದಿ

ಹಿರಿಯ ಬರಹಗಾರ, ಪತ್ರಕರ್ತ

Similar News