ಕರಾವಳಿಯ ಸಾಂಸ್ಕೃತಿಕ ಉತ್ಕರ್ಷ!!

ಈ ಯಕ್ಷಗಾನ, ನಾಟಕಗಳ ಕಥಾವಸ್ತು, ಗುಣಮಟ್ಟ ಅವುಗಳ ಆಶಯ ಸಂದೇಶ, ಪರಂಪರೆಯ ಚೌಕಟ್ಟಿನ ಪಾಲನೆ ಇತ್ಯಾದಿ ಏನಾದರೂ ಇರಲಿ. ಯಕ್ಷಗಾನ, ನಾಟಕಗಳ ಮೂಲಕ ಬದುಕು ಕಟ್ಟಿಕೊಳ್ಳುವ ದೊಡ್ಡ ಸಂಖ್ಯೆಯ ಕಲಾವಿದರು ಕರಾವಳಿಯಲ್ಲಿ ಇದ್ದಾರೆ ಅನ್ನುವುದೇ ನೆಮ್ಮದಿಯ ಸಂಗತಿ.;

Update: 2025-01-31 09:36 IST
ಕರಾವಳಿಯ ಸಾಂಸ್ಕೃತಿಕ ಉತ್ಕರ್ಷ!!
  • whatsapp icon

ಊರಿಗೆ ಬಂದರೆ ಮೊದಲು ಪತ್ರಿಕೆಗಳಲ್ಲಿ ನೋಡುವುದು ಯಕ್ಷಗಾನ, ನಾಟಕಗಳ ಜಾಹೀರಾತುಗಳನ್ನು. ಮೊನ್ನೆಯ ಸಂಚಿಕೆಯ ಪುಟ ತಿರುವಿ ನೋಡುತ್ತಿದ್ದಾಗ ಯಕ್ಷಗಾನ ಮತ್ತು ನಾಟಕ ಪ್ರದರ್ಶನಗಳ ಜಾಹೀರಾತು ನೋಡಿ ಆಶ್ಚರ್ಯವೇ ಆಯಿತು.

ಒಟ್ಟು ನಲುವತ್ತು ಯಕ್ಷಗಾನ ಮೇಳಗಳ ಬಯಲಾಟ ಹಾಗೂ ಇಪ್ಪತ್ತು ನಾಟಕ ತಂಡಗಳಿಂದ ಕನ್ನಡ ತುಳು ನಾಟಕಗಳು!!

ನಾವೆಲ್ಲ ಊರಲ್ಲಿ ಶಾಲೆ ಕಾಲೇಜು ಓದುತ್ತಿದ್ದಾಗ 10-12 ಯಕ್ಷಗಾನ ಮೇಳಗಳಿದ್ದವು. ಈಗ ಮೇಳಗಳ ಸಂಖ್ಯೆ ನಲುವತ್ತಕ್ಕೇರಿದೆ. ಇವುಗಳ ಪೈಕಿ ಮೂರು ದೇವಸ್ಥಾನಗಳ ಹರಕೆಯಾಟ ಮೇಳದ ಸಂಖ್ಯೆ 14.(ಕಟೀಲು 6, ಮಂದಾರ್ತಿ 5, ಮತ್ತು ಮಾರಣಕಟ್ಟೆ 3). ಧರ್ಮಸ್ಥಳ, ಸಾಲಿಗ್ರಾಮ, ಪೆರ್ಡೂರು, ಅಮೃತೇಶ್ವರಿ, ಕಟೀಲು, ಮಂದಾರ್ತಿ, ಮಾರಣಕಟ್ಟೆ, ಇಡಗುಂಜಿ - ಈ ಹಳೆಯ ಮೇಳಗಳ ಬಯಲಾಟಗಳನ್ನು ಬಾಲ್ಯದಲ್ಲಿ ಸಾಕಷ್ಟು ನೋಡಿದ ನೆನಪಿದೆ. ಹಿಂದೆಲ್ಲ ನಮಗೆ ಪರಿಚಿತವಾದ ಪೌರಾಣಿಕ ಕಥೆಗಳು ಜೊತೆಗೆ ಅಮೃತ ಸೋಮೇಶ್ವರರಂತಹ ಹಿರಿಯರು ಬರೆದ ತುಳು ದೈವ ಕಾರಣಿಕ ವ್ಯಕ್ತಿಗಳ ಜಾನಪದ ಕಥಾನಕವನ್ನು ನೋಡಿದ್ದುಂಟು.ಆಗ ದಳವಾಯಿ ದುಗ್ಗಣ್ಣ, ಕೋಟಿ ಚೆನ್ನಯ ಮುಂತಾದ ತುಳು ಪ್ರಸಂಗಗಳಿಗೆ ಕರ್ನಾಟಕ ಮೇಳ ಪ್ರಸಿದ್ಧವಾಗಿತ್ತು. ಡೇರೆ ಮೇಳಗಳ ಮೂಲಕ ಯಕ್ಷಗಾನ ಪ್ರದರ್ಶನ ಆರಂಭಗೊಂಡಾಗಲೇ ಯಕ್ಷಗಾನದ ವಾಣಿಜ್ಯೀಕರಣ ಶುರುವಾಗಿರುವುದು ಹಾಗೂ ಅದರ ನಂತರದ ಯಕ್ಷಗಾನದ ರಂಗಸ್ಥಳ, ವೇಷಭೂಷಣ, ಕಥಾನಕ ಹೀಗೆ ಎಲ್ಲ ಆಯಾಮಗಳಲ್ಲೂ ಢಾಳಾದ ವಾಣಿಜ್ಯೀಕರಣದ ಪ್ರಭಾವಗಳನ್ನು ಗುರುತಿಸಬಹುದು.

ಯಾವುದೇ ಸೃಜನಶೀಲ ಕಲೆ ಕಾಲದ ಪರಿಸರದ ಕೂಸಾಗಿ ಕಾಲಕ್ಕೆ ಹೊಸ ವೇಷ ಧರಿಸುತ್ತದೆ. ಯಕ್ಷಗಾನವೂ ಅದಕ್ಕೆ ಹೊರತಲ್ಲ. ಕಾಲ ಬದಲಾದಂತೆ, ಯಕ್ಷಗಾನವೂ ತಾಂತ್ರಿಕವಾಗಿ ಮಾತ್ರವಲ್ಲ, ಆಧುನಿಕರ ಹೊಸ ಹೊಸ ಅಭಿರುಚಿಗಳಿಗೂ ಒಗ್ಗಿಕೊಂಡಂತಿದೆ. ಈಗಿನ ಪ್ರಸಂಗಗಳ ಹೆಸರು ನೋಡಿ: ಶುಭ ಲಕ್ಷಣ, ಪ್ರಶ್ನಾರ್ಥಕ, ಪ್ರೇಮಾಕ್ಷಿ, ಬಂಟನ ಬಲಿಸುತ್ತು, ದಾರೆದ ಮಣೆ, ಸ್ವರ್ಣ ತುಲಾಭಾರ, ರಾಗ ಚಂದ್ರಿಕೆ, ಮೇಘ ಮಂಜರಿ..!!

ವಾಣಿಜ್ಯೀಕರಣದ ಲಾಭ

ಹೆಚ್ಚು ಕಡಿಮೆ ಆರು ತಿಂಗಳ ಕಾಲ ನಡೆಯುವ ಈ ದೈನಂದಿನ ಯಕ್ಷಗಾನ ಪ್ರದರ್ಶನವನ್ನು, ಪ್ರದರ್ಶನವೊಂದಕ್ಕೆ ಸರಾಸರಿ ಮುನ್ನೂರು ಮಂದಿ ನೋಡಿದರೂ 40 ಮೇಳಗಳ ಪ್ರದರ್ಶನವನ್ನು ಪ್ರತಿದಿನ 12,000 ಪ್ರೇಕ್ಷಕರು, ಆರು ತಿಂಗಳಲ್ಲಿ 12,000x30x6=21ಲಕ್ಷ ಪ್ರೇಕ್ಷಕರು ನೋಡುತ್ತಾರೆಂದಾಯ್ತು!! ಡೇರೆ ಮೇಳಗಳ ಪ್ರದರ್ಶನ ನೋಡುವವರ ಸಂಖ್ಯೆ ಇನ್ನೂ ಹೆಚ್ಚಿರಬಹುದು. ಹಾಗಾಗಿ ಅಂದಾಜು 25 ಲಕ್ಷ ಯಕ್ಷಗಾನ ಪ್ರೇಕ್ಷಕರಿದ್ದಾರೆ ಅನ್ನಬಹುದು.

ಯಕ್ಷಗಾನ ಕರಾವಳಿಯದೇ ಕಲಾ ಪ್ರಕಾರವಾಗಿರುವುದರಿಂದ, ಕಲಾಭಿಮಾನಿಗಳ ನಿರಂತರ ಪ್ರೋತ್ಸಾಹದಿಂದ ಈ ಬಗೆಯ ಉತ್ಕರ್ಷ ಕಂಡಿರುವುದು ತೀರ ಆಶ್ಚರ್ಯವೇನಲ್ಲ.

ಆದರೆ, ಅದೇ ಮಾದರಿಯಲ್ಲಿ ಈಗ ತುಳು ನಾಟಕಗಳು ಕರಾವಳಿಯನ್ನು ಆವರಿಸಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. 20 ತುಳುನಾಟಕ ತಂಡಗಳು ಪ್ರತಿದಿನವೂ ಒಂದಿಲ್ಲೊಂದು ಕಡೆ ನಾಟಕ ಪ್ರದರ್ಶಿಸುತ್ತಿರುವುದು ಸಾಂಸ್ಕೃತಿಕವಾಗಿ ಒಳ್ಳೆಯ ಲಕ್ಷಣವೇ ಹೌದು. ಈ ಜಾಹೀರಾತುಗಳ ಕಡೆ ಸುಮ್ಮನೆ ಕಣ್ಣಾಡಿಸಿ, ಒಂದೊಂದು ನಾಟಕದ ಪ್ರಯೋಗಗಳ ಸಂಖ್ಯೆಯನ್ನೂ ನೋಡಿ. ಶಿವದೂತೆ ಗುಳಿಗೆ 698ನೇ ಪ್ರದರ್ಶನ, ಆತೇ ಪನೋಡಾತೆ 217, ಶಾಂಭವಿ 191, ಕಥೆ ಎಡ್ಡೆ ಉಂಡು 189, ಮಂತ್ರ ದೇವತೆ 69, ಕದಂಬ 88 ಹೀಗೇ ಸಾಗುತ್ತದೆ ಪ್ರದರ್ಶನಗಳ ಸಂಖ್ಯೆ.!! ಪ್ರತಿದಿನ ಅಲ್ಲಲ್ಲಿ ನಡೆಯುವ ಇಂತಹ ನಾಟಕಗಳನ್ನು ನೋಡುವವರ ಸಂಖ್ಯೆ ಏನಿಲ್ಲವೆಂದರೂ 20x500=10,000 ಇರಬಹುದೇನೋ. ತುಳು ಭಾಷೆಯ ಜೋವಿಯಲ್ ಧಾಟಿ, ಲಾಲಿತ್ಯ ಹಾಸ್ಯನಾಟಕಗಳಿಗೆ ಹೇಳಿಮಾಡಿಸಿದಂತಿರುವುದು, ಕರಾವಳಿ ಮಂದಿ ಹೆಚ್ಚಾಗಿ ಹಾಸ್ಯನಾಟಕ ಪ್ರಿಯರು ಅನ್ನುವ ಅಂಶ ಕೂಡ ತುಳು ನಾಟಕಗಳ ಸದ್ಯ ಜನಪ್ರಿಯ ಟ್ರೆಂಡಿಗೆ ಕಾರಣವಿರಬಹುದು.

ಈ ಯಕ್ಷಗಾನ, ನಾಟಕಗಳ ಕಥಾವಸ್ತು, ಗುಣಮಟ್ಟ ಅವುಗಳ ಆಶಯ ಸಂದೇಶ, ಪರಂಪರೆಯ ಚೌಕಟ್ಟಿನ ಪಾಲನೆ ಇತ್ಯಾದಿ ಏನಾದರೂ ಇರಲಿ. ಯಕ್ಷಗಾನ, ನಾಟಕಗಳ ಮೂಲಕ ಬದುಕು ಕಟ್ಟಿಕೊಳ್ಳುವ ದೊಡ್ಡ ಸಂಖ್ಯೆಯ ಕಲಾವಿದರು ಕರಾವಳಿಯಲ್ಲಿ ಇದ್ದಾರೆ ಅನ್ನುವುದೇ ನೆಮ್ಮದಿಯ ಸಂಗತಿ. 40 ಮೇಳದಲ್ಲಿ ಸರಾಸರಿ 20 ಮಂದಿ ಅಂದರೂ ದಿನವೊಂದಕ್ಕೆ 800 ಕಲಾವಿದರನ್ನು (ಇತರ ಸಿಬ್ಬಂದಿ ಸೇರಿ) ಯಕ್ಷಗಾನ ಸಾಕುತ್ತದೆ. ನಾಟಕ ತಂಡಗಳ ಮೂಲಕ ಇನ್ನೊಂದು 200-300 ಕಲಾವಿದರು ಅಂದರೂ ದಿನವೊಂದಕ್ಕೆ ಸಾವಿರಕ್ಕೂ ಹೆಚ್ಚು ಕಲಾವಿದರು ಬದುಕು ಕಟ್ಟಿಕೊಳ್ಳುತ್ತಾರೆ. ಬಹುಶಃ ಕರಾವಳಿಯ ಈ ಮೂರು ಜಿಲ್ಲೆಗಳ ಹೊರತಾಗಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕಲಾವಿದರನ್ನು ಸಾಕಿ ಸಲಹುವ ಜಿಲ್ಲೆಗಳು ಕರ್ನಾಟಕದಲ್ಲಿ ಬೇರೆಲ್ಲೂ ಇರಲಿಕ್ಕಿಲ್ಲವೇನೋ. ಈ ಕಾರಣಕ್ಕಾಗಿ ಕರಾವಳಿಯ ಬಹುದೊಡ್ಡ ಸಂಖ್ಯೆಯ ಕಲಾಭಿಮಾನಿಗಳನ್ನು ಅಭಿನಂದಿಸಲೇ ಬೇಕು.

ಈಗ, ಈ ಎರಡು ಕಲಾ ಪ್ರಕಾರಗಳ ಉತ್ಕರ್ಷದ ಹಿನ್ನೆಲೆಯಲ್ಲಿ, ಸಾಮಾಜಿಕವಾಗಿ ಕರಾವಳಿಗೆ ಅಂಟಿಕೊಂಡಿರುವ ಪಿಡುಗುಗಳನ್ನು ವಿಶ್ಲೇಷಿಸಬಹುದೇನೋ. ಕೋಮು ದ್ವೇಷಗಳ ಪ್ರಯೋಗ ಶಾಲೆ ಅನ್ನುವುದು ಕರಾವಳಿಗೆ ತಗಲಿರುವ ದೊಡ್ಡ ಕಳಂಕ ಮತ್ತು ಆರೋಪ. ಈ ಆರೋಪವನ್ನು ಸಾಬೀತು ಪಡಿಸುವಂತೆ ದಿನವೂ ಒಂದಿಲ್ಲೊಂದು ಕೋಮುದ್ವೇಷದ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಒಂದೆಡೆ ಕೋಮು ವಿಷವನ್ನು ಮೈತುಂಬಿಕೊಂಡಿರುವ ಕೋಮು ಪಡೆಗಳು. ಇನ್ನೊಂದೆಡೆ ಸಾಂಸ್ಕೃತಿಕವಾಗಿ ಕರಾವಳಿಯ ಬದುಕನ್ನು ಆರೋಗ್ಯಕರವಾಗಿ ಇಡಲು ಶ್ರಮಿಸುತ್ತಿರುವ ಯಕ್ಷಗಾನ, ನಾಟಕಗಳ ಕಲಾತಂಡಗಳು. ಪರಸ್ಪರ ವೈರುಧ್ಯದ ಸಂಗತಿ ಅನ್ನಿಸಬಹುದು. ಆದರೆ ನಾನು ಇದನ್ನು ಹೀಗೆ ನೋಡ ಬಯಸುತ್ತೇನೆ. ಬಹುಶಃ ಯಕ್ಷಗಾನ, ನಾಟಕಗಳಂತಹ ಸಮೃದ್ಧ ಸಾಂಸ್ಕೃತಿಕ, ಸೌಹಾರ್ದ ಪರಂಪರೆಯ ಕಾರಣದಿಂದಾಗಿ ಕೋಮುಪಡೆಗಳ ಅಟ್ಟಹಾಸ ಅವುಗಳು ನಿರೀಕ್ಷಿಸಿದಷ್ಟು ಭಯಾನಕವಾಗಿಲ್ಲ ಅಥವಾ ಕೋಮು ವಿಷವನ್ನು ಹಬ್ಬಿಸಲು ಕೆಲವರು ಈ ಯಕ್ಷಗಾನ, ನಾಟಕ ಮಾಧ್ಯಮಗಳನ್ನು ಬಳಸಿಕೊಳ್ಳಲು ಯತ್ನಿಸುತ್ತಿದ್ದರೂ ದೊಡ್ಡ ಸಂಖ್ಯೆಯ ಕಲಾಭಿಮಾನಿಗಳು ಅದನ್ನು ಬೆಂಬಲಿಸುವುದಿಲ್ಲ. ರಾಜಕೀಯವಾಗಿ ಕರಾವಳಿ ಜನರು ಹಿಂದುತ್ವ ಪ್ರತಿಪಾದನೆಯ ಪಕ್ಷಗಳನ್ನು ಗೆಲ್ಲಿಸುತ್ತಾ ಬಂದಿರಬಹುದು. ಆದರೆ ರಾಜಕೀಯ ಪಕ್ಷಗಳ ಅಜೆಂಡಾಗಳು ವ್ಯಾಪಕವಾಗಿ ಜನರ ವೈಯಕ್ತಿಕ ಬದುಕಿನ ಭಾಗವಾಗದಂತೆ, ದೈನಂದಿನ ಬದುಕಿನಲ್ಲಿ ಕೋಮು ವಿಷದ ಜ್ವಾಲೆ ಸೋಕದಂತಹ ವಿವೇಕದ ಎಚ್ಚರವನ್ನು ಇವತ್ತಿಗೂ ಕರಾವಳಿಯ ಬಹುತೇಕ ಮಂದಿ ಕಾಪಾಡಿಕೊಂಡು ಬಂದಿದ್ದಾರೆ ಅಂತಲೇ ನನಗನ್ನಿಸುತ್ತದೆ.

ಈ ನಡುವೆ ದೈವ ದೇವರುಗಳ ಮೇಲಿನ ನಂಬಿಕೆ ಕೂಡ ಕರಾವಳಿಯನ್ನು ಅಳತೆ ಮೀರಿ ವ್ಯಾಪಿಸಿದೆ ಅನ್ನುವುದೂ ಸತ್ಯ. ಊರು ಪರವೂರುಗಳಲ್ಲಿ ದುಡಿದು ಕೋಟ್ಯಧಿಪತಿಗಳಾದ ಕರಾವಳಿ ಮೂಲದವರ ಕಾರಣದಿಂದ ಕರಾವಳಿಯ ಪ್ರತಿಯೊಂದು ದೇವಾಲಯ, ದೈವಸ್ಥಾನಗಳಿಗೂ ಬಹುದೊಡ್ಡ ಕಾರಣಿಕದ ನಂಬಿಕೆಗಳ ಇತಿಹಾಸ ಪ್ರಾಪ್ತವಾಗಿದೆ. ಇದು ಜನರ ಧಾರ್ಮಿಕ ನಂಬಿಕೆಯ ಪ್ರಶ್ನೆಯಾಗಿರುವುದರಿಂದ ನಾನು ಅವುಗಳ ವಿಶ್ಲೇಷಣೆಗೆ ಹೋಗುವುದಿಲ್ಲ. ಮೂರು ದೇವಸ್ಥಾನಗಳ 14 ಮೇಳಗಳ ಹರಕೆಯಾಟದ ಹಿಂದೆ ಧಾರ್ಮಿಕ ನಂಬಿಕೆಗಳು ಇದ್ದಿರಬಹುದಾದರೂ, (ದೇವಿ ವೈಭವದ ಸನ್ನಿವೇಶಗಳ ಹೊರತಾಗಿ) ಅವುಗಳ ಪ್ರದರ್ಶನಗಳು ಕೂಡಾ ಯಕ್ಷಗಾನದ ಕಲಾ ಚೌಕಟ್ಟಿನೊಳಗೆ ನಡೆಯುತ್ತವೆ ಅನ್ನುವುದೇ ಸಮಾಧಾನದ ಸಂಗತಿ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಗಿರಿಧರ ಕಾರ್ಕಳ

contributor

Similar News