ಬಿಜೆಪಿಗೆ ‘ಭಿನ್ನ’ ನಾಯಕರೇ ಕಂಟಕ...

ತಮ್ಮ ರಾಜಕೀಯ ಅಸ್ತಿತ್ವದ ಪ್ರಶ್ನೆ ಎದುರಾದಾಗ ದೇಶ, ಅಭಿವೃದ್ಧಿ ಅಷ್ಟೇ ಯಾಕೆ ಮೋದಿ ಕೂಡಾ ಹಿನ್ನೆಲೆಗೆ ಸರಿದು ಕೇವಲ ಸ್ವಾರ್ಥ ವಿಜೃಂಭಿಸುತ್ತದೆ. ಯತ್ನಾಳ್, ಈಶ್ವರಪ್ಪ, ಸದಾನಂದ ಗೌಡ ಆ ಕಾರಣಕ್ಕೆ ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಬಿಜೆಪಿಯ ಬಲಿಷ್ಠ ಹೈಕಮಾಂಡ್ ಯಾವ ಕ್ರಮವನ್ನೂ ಜರುಗಿಸಲಾರದು ಎಂಬ ಆತ್ಮವಿಶ್ವಾಸ ಅವರಲ್ಲಿದೆ. ಕರ್ನಾಟಕದ ಮತದಾರ ಏನು ಬೇಕಾದರೂ ಸಹಿಸಿಕೊಳ್ಳಬಲ್ಲ. ಆದರೆ ಯಾವುದೇ ಒಂದು ಪಕ್ಷದ ಒಳಜಗಳವನ್ನು ಒಪ್ಪಿಕೊಳ್ಳುವುದಿಲ್ಲ.

Update: 2024-04-20 05:19 GMT

ಭಾರತೀಯ ಜನತಾ ಪಕ್ಷದ ನೀತಿ ನಿಲುವುಗಳು ಏನೇ ಇರಲಿ; ಒಂದು ಕಾಲದಲ್ಲಿ ಅದು ಶಿಸ್ತು ಮತ್ತು ಬದ್ಧತೆಗೆ ಹೆಸರಾಗಿತ್ತು. 1980ರಲ್ಲಿ ಹುಟ್ಟಿಕೊಂಡ ಬಿಜೆಪಿ ಕೇಂದ್ರದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಸಾಧ್ಯವಾದದ್ದು ಶಿಸ್ತುಬದ್ಧ ಸಂಘಟನಾ ಸಾಮರ್ಥ್ಯದಿಂದ. ಜನತಾ ಪರಿವಾರದ ಹಲವು ಪಕ್ಷಗಳು ಮತ್ತು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲು 70ರ ದಶಕದಿಂದಲೇ ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದರು. ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ಚೌಧರಿ ಚರಣ್ಸಿಂಗ್ ಅಷ್ಟೇ ಏಕೆ ಜನ ಸಂಘದ ನಾನಾಜಿ ದೇಶ್ಮುಖ್ ಸೇರಿದಂತೆ ಹಲವಾರು ಕಾಂಗ್ರೆಸ್ನ ವಂಶಾಡಳಿತದ ವಿರುದ್ಧ ಬಹುದೊಡ್ಡ ಸಮರವನ್ನೇ ಸಾರಿದ್ದರು. ತುರ್ತು ಪರಿಸ್ಥಿತಿ ಸೇರಿದಂತೆ ಹಲವು ಘಟನೆಗಳನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷದ ಬಲ ಕುಗ್ಗಿಸುವಲ್ಲಿ ಯಶಸ್ವಿಯಾಗಿದ್ದರೇ ಹೊರತು ಸ್ವಂತ ಬಲದ ಮೇಲೆ ಅಧಿಕಾರ ಹಿಡಿದು ‘ಸ್ಥಿರ’ ಸರಕಾರ ನೀಡುವಲ್ಲಿ ವಿಫಲವಾಗಿದ್ದರು. ಕಾರಣ ಸ್ಪಷ್ಟವಿತ್ತು: ಕಾಂಗ್ರೆಸ್ ವಿರೋಧಿ ಶಕ್ತಿಗಳಲ್ಲಿ ಶಿಸ್ತು, ಪರಸ್ಪರ ನಂಬಿಕೆ ಮತ್ತು ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿತ್ತು. ಕಾಂಗ್ರೆಸ್ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸುವಲ್ಲಿ ಮಾಜಿ ಪ್ರಧಾನಿ ವಿ.ಪಿ. ಸಿಂಗ್ ಅವರು ಯಶಸ್ವಿಯಾದರೂ ಪರ್ಯಾಯ ಶಕ್ತಿಯನ್ನು ಮುನ್ನಡೆಸುವಲ್ಲಿ ವಿಫಲರಾದರು.

ಹಾಗೆ ನೋಡಿದರೆ; 1999ರಲ್ಲಿ ಅಸ್ತಿತ್ವಕ್ಕೆ ಬಂದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಮೊದಲ ಕಾಂಗ್ರೆಸೇತರ ಸಮ್ಮಿಶ್ರ ಸರಕಾರ ಯಶಸ್ವಿಯಾಗಿ ಐದು ವರ್ಷಗಳ ಕಾಲ ಆಡಳಿತ ನಡೆಸಿತ್ತು. ಅದಕ್ಕೆ ಕಾರಣ; ಅಟಲ್ ಬಿಹಾರಿ ವಾಜಪೇಯಿ ಅವರ ಉದಾರವಾದಿ ನಾಯಕತ್ವ, ಬಿಜೆಪಿಗೆ ಬಳುವಳಿಯಾಗಿ ಬಂದ ಸಂಘ ಪರಿವಾರದ ಶಿಸ್ತು ಮತ್ತು ಬದ್ಧತೆ. ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಮೇಲೆ ಅಮಿತ್ ಶಾ ಪಕ್ಷದ ಸಂಘಟನೆಯ ಹೊಣೆ ಹೊತ್ತ ನಂತರ ಬಿಜೆಪಿ ಅಂದರೆ ಶಿಸ್ತು ಎನ್ನುವಂತಾಯಿತು. 2014 ಮತ್ತು 2019ರ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸ್ವಂತ ಬಲದ ಮೇಲೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಬಲಿಷ್ಠ ಹೈಕಮಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಚಾಣಕ್ಯ ಖ್ಯಾತಿಯ ಅಮಿತ್ ಶಾ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸಿದ ಮೇಲಂತೂ ‘ಶಿಸ್ತಿನ ಪಕ್ಷ’ ಎಂಬ ಮಾತಿಗೆ ಮತ್ತಷ್ಟು ಬಲ ಬಂತು. ಕೇಂದ್ರ ಸರಕಾರದಲ್ಲಾಗಲೀ, ಭಾರತೀಯ ಜನತಾ ಪಕ್ಷದಲ್ಲಾಗಲೀ ‘ಭಿನ್ನ’ ಮಾತಿಗೆ ಅವಕಾಶವೇ ಇರಲಿಲ್ಲ. ಬಲಿಷ್ಠ ಹೈಕಮಾಂಡ್ ಬಲದ ಮೇಲೆಯೇ ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚವ್ಹಾಣ್, ಛತ್ತೀಸ್ಗಡದ ರಮಣ್ ಸಿಂಗ್ ಮತ್ತು ರಾಜಸ್ಥಾನದ ವಸುಂಧರಾರಾಜೇ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಲೇ ಇಲ್ಲ. ಹೊಸ ಮುಖಗಳಿಗೆ ಅವಕಾಶ ನೀಡಿದರು. ಮೂರು ಬಾರಿ ಮುಖ್ಯಮಂತ್ರಿಯಾದವರನ್ನು ಬದಲಿಸಿದಾಗಲೂ ಬಿಜೆಪಿಯಲ್ಲಿ ಭಿನ್ನಮತ ಕಾಣಿಸಿಕೊಳ್ಳಲಿಲ್ಲ.

ಆದರೆ ಕರ್ನಾಟಕದಲ್ಲಿ ಬಿಜೆಪಿಯೆಂದರೆ; ಭಿನ್ನಮತೀಯರ ಪಕ್ಷ ಎಂಬಂತಾಗಿದೆ. ಬಿಜೆಪಿಯೊಳಗಿನ ಬಣ ರಾಜಕೀಯ ರಾಮಕೃಷ್ಣ ಹೆಗಡೆಯವರ ಕಾಲದ ಜನತಾ ಪರಿವಾರವನ್ನು ನೆನಪಿಸುವಂತಿದೆ. ಅಷ್ಟಕ್ಕೂ ಕರ್ನಾಟಕದಲ್ಲಿ ಜನತಾ ಪರಿವಾರದವರು ಅತ್ಯುತ್ತಮ ಸರಕಾರ ನೀಡಿಯೂ ನಿರ್ನಾಮವಾದದ್ದು ಚಿಲ್ಲರೆ ಬಣ ರಾಜಕಾರಣದ ದೆಸೆಯಿಂದ. ಕರ್ನಾಟಕದ ಬಿಜೆಪಿ ವಿಷಯದಲ್ಲಿ ಮೋದಿ-ಅಮಿತ್ ಶಾ ಜೋಡಿ ಸಮರ್ಪಕ ನಿರ್ಧಾರ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. 2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಅಷ್ಟು ಮಾತ್ರವಲ್ಲ ಮುಂದಿನ ಮುಖ್ಯಮಂತ್ರಿ ಎಂದು ಚುನಾವಣಾ ಪ್ರಚಾರದುದ್ದಕ್ಕೂ ಖುದ್ದು ಮೋದಿ-ಅಮಿತ್ ಶಾ ಅವರೇ ಹೇಳುತ್ತಾ ಹೋದರು. ಅಷ್ಟೊತ್ತಿಗೆ ಯಡಿಯೂರಪ್ಪನವರಿಗೆ 76 ವರ್ಷ ವಯಸ್ಸಾಗಿತ್ತು. ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿ ಬಿಜೆಪಿಯ ರಾಜ್ಯಾಧ್ಯಕ್ಷನನ್ನಾಗಿಸಿದರೂ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪನವರಿಗೆ ಮುಕ್ತ ಸ್ವಾತಂತ್ರ್ಯ ನೀಡಲಿಲ್ಲ. ಅಷ್ಟಕ್ಕೂ ಆಗ ಹಲವು ಭಾಗ್ಯಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಮಣಿಸುವುದು ಸಾಧ್ಯವಿರಲಿಲ್ಲ. ಆಗ ಬಿಜೆಪಿ ನೇತೃತ್ವವನ್ನು ಯಡಿಯೂರಪ್ಪ ವಹಿಸಿಕೊಂಡಿದ್ದರಿಂದ ಕಾಂಗ್ರೆಸ್ಗೆ ಸೋಲಾಯಿತು. ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪನವರಿಗೆ ಸ್ವಾತಂತ್ರ್ಯ ನೀಡಿದ್ದರೆ; ಬಿಜೆಪಿ ಸರಳ ಬಹುಮತಕ್ಕೆ ಹತ್ತಿರವಾಗುತ್ತಿತ್ತು. ಯಡಿಯೂರಪ್ಪನವರನ್ನು ನಿರ್ಣಾಯಕ ಗಳಿಗೆಯಲ್ಲಿ ಕಟ್ಟಿ ಹಾಕಿದ್ದರಿಂದ ಬಿಜೆಪಿ ಶಾಸಕರ ಬಲ 104ಕ್ಕೆ ನಿಂತಿತು. ಒಲ್ಲದ ಮನಸ್ಸಿನಿಂದ ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂತು.

ರಾಜ್ಯದಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂಬ ತತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವೇನೋ ರಚನೆಯಾಯಿತು. ಆದರೆ ಅದು ಕಾಂಗ್ರೆಸ್ ಹಿರಿಯ ಮುಖಂಡ ಸಿದ್ದರಾಮಯ್ಯನವರಿಗೆ ಸುತರಾಂ ಇಷ್ಟವಿರಲಿಲ್ಲ. 2019ರ ಲೋಕಸಭಾ ಚುನಾವಣೆಯ ಹೊತ್ತಿಗೆ ಮೈತ್ರಿ ಸರಕಾರ ಆಡಳಿತ ನಡೆಸುತ್ತಿದ್ದುದರಿಂದ ಉಭಯ ಪಕ್ಷಗಳು ಚುನಾವಣಾ ಮೈತ್ರಿಯನ್ನು ಅನಿವಾರ್ಯವಾಗಿ ಮಾಡಿಕೊಂಡವು. ಬಿಜೆಪಿ ಹೈಕಮಾಂಡ್ ಮತ್ತೆ ಯಡಿಯೂರಪ್ಪನವರ ಮೊರೆ ಹೋಯಿತು. ಲೋಕಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ನೀಡಿದರೆ ಮುಖ್ಯಮಂತ್ರಿ ಆಗುವ ಅವಕಾಶವಿದೆ ಎಂದು ಭಾವಿಸಿದ ಯಡಿಯೂರಪ್ಪ ಆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದರು. ಮೋದಿ-ಯಡಿಯೂರಪ್ಪ ಅವರ ನಾಮ ಬಲ, ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿನ ಎದ್ದು ಕಾಣುತ್ತಿದ್ದ ಒಡಕು ರಾಜ್ಯದಲ್ಲಿ ಬಿಜೆಪಿಗೆ ವರವಾಗಿ ಪರಿಣಮಿಸಿತು. 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಬಿಜೆಪಿ ಪಾಲಾದವು. ಕಾಂಗ್ರೆಸ್-ಜೆಡಿಎಸ್ ತಲಾ ಒಂದು ಸ್ಥಾನಗಳಲ್ಲಿ ಮಾತ್ರ ಗೆದ್ದು ಹೀನಾಯ ಸೋಲಿನ ರುಚಿ ಅನುಭವಿಸಿದವು. ಸುಮಲತಾ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಂಪರ್ ಬೆಳೆ ತೆಗೆಯಲು ಯಡಿಯೂರಪ್ಪ ಅವರನ್ನು ಬಳಸಿಕೊಂಡ ಬಿಜೆಪಿ ಅರೆಮನಸ್ಸಿನಿಂದ ಆಪರೇಷನ್ ಕಮಲಕ್ಕೆ ಅನುಮತಿ ನೀಡಿತ್ತು. ಕಾಂಗ್ರೆಸ್ ಮುಖಂಡರ ಸಹಕಾರದಿಂದಲೇ ಆಪರೇಷನ್ ಕಮಲ ಸಾಂಗವಾಗಿ ನಡೆಯಿತು; ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಆದರೆ ಮಂತ್ರಿಮಂಡಲ ರಚನೆಯಿಂದ ಹಿಡಿದು ಎಲ್ಲಾ ಹಂತದಲ್ಲಿಯೂ ಯಡಿಯೂರಪ್ಪನವರಿಗೆ ಮುಕ್ತ ಸ್ವಾತಂತ್ರ್ಯ ನೀಡಲಿಲ್ಲ. ಸೋತ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಶಾಕ್ ನೀಡಿತು. ರಾಜ್ಯದಲ್ಲಿ ನೆರೆಹಾವಳಿ, ಬರ, ಕೊರೋನ ಬಂದಾಗಲೂ ಬಿಜೆಪಿ ಹೈಕಮಾಂಡ್, ಕೇಂದ್ರ ಸರಕಾರ ಯಡಿಯೂರಪ್ಪನವರಿಗೆ ಸಹಕಾರ ನೀಡಲಿಲ್ಲ. ವಿಧಾನಪರಿಷತ್ ಮತ್ತು ರಾಜ್ಯಸಭಾ ಸದಸ್ಯರ ಆಯ್ಕೆಯಲ್ಲೂ ಯಡಿಯೂರಪ್ಪನವರ ಮಾತಿಗೆ ಮನ್ನಣೆ ನೀಡುತ್ತಿರಲಿಲ್ಲ.

2019ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಗಳಿಗೆಯಿಂದಲೇ ಅವರ ಪದಚ್ಯುತಿಯ ಮಾತುಗಳು ಕೇಳಿ ಬರತೊಡಗಿದವು. ಎರಡು ವರ್ಷ ಪೂರೈಸುತ್ತಲೇ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸಲಾಯಿತು. ವಯಸ್ಸಿನ ನೆಪದಲ್ಲಿ ಯಡಿಯೂರಪ್ಪನವರನ್ನು ಕಿತ್ತುಹಾಕಿದ ಬಿಜೆಪಿ ಹೈಕಮಾಂಡ್ ಕೇರಳ ವಿಧಾನ ಸಭೆಯ ಚುನಾವಣೆಯಲ್ಲಿ ಇ. ಶ್ರೀಧರನ್ ಅವರು 80 ವರ್ಷ ಪೂರೈಸಿದ್ದರೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತ್ತು. ಯಡಿಯೂರಪ್ಪ ಜಾಗಕ್ಕೆ ಬಸವರಾಜ ಬೊಮ್ಮಾಯಿಯವರನ್ನು ತರಲಾಯಿತು. ಅವರು ಬಿಜೆಪಿ ಸಂಘಟನೆಯಲ್ಲಿ ದುಡಿದ ಅನುಭವ ಪಡೆದಿರಲಿಲ್ಲ. ಕಾಣದ ಕೈಗಳು ಬೊಮ್ಮಾಯಿ ಯವರನ್ನು ನಿಯಂತ್ರಿಸತೊಡಗಿದವು. ಯಡಿಯೂರಪ್ಪ ಕಣ್ಣೀರು ಹಾಕುತ್ತಾ ಹೊರನಡೆದರು. ಎರಡು ವರ್ಷಗಳ ಆಡಳಿತದಲ್ಲಿ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸಲಿಲ್ಲ. ಮತಾಂತರ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ, ಪಠ್ಯಪುಸ್ತಕದಲ್ಲಿ ಕೋಮುವಾದಿ ವಿಚಾರಗಳನ್ನು ತಂದು ವಿವಾದವನ್ನು ಮೈ ಮೇಲೆ ಎಳೆದುಕೊಳ್ಳಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅಭಿವೃದ್ಧಿ ಕುರಿತು ಮಾತನಾಡ ದಂತೆ ಫರ್ಮಾನು ಹೊರಡಿಸಿದರು. 2023ರ ಚುನಾವಣಾ ಸಂದರ್ಭದಲ್ಲಿ ಹಿಂದೂ-ಮುಸ್ಲಿಮ್ ಸಂಘರ್ಷದ ಮಾತುಗಳು ಮುನ್ನೆಲೆಗೆ ಬಂದವು. ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಅವರನ್ನು ದೂರ ಇಡಲಾಯಿತು. ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ ಸೇರಿದಂತೆ ಹಲವರಿಗೆ ಟಿಕೆಟ್ ನಿರಾಕರಿಸಲಾಯಿತು. ಹೊಸ ಪ್ರಯೋಗದ ಫಲವಾಗಿ ರಾಜ್ಯದಲ್ಲಿ ಬಿಜೆಪಿ ಮುಗ್ಗರಿಸಿತು. ಮೋದಿ-ಅಮಿತ್ ಶಾ ಪ್ರಚಾರಕ್ಕೆ ರಾಜ್ಯದ ಜನತೆ ಕಿವಿಗೊಡಲಿಲ್ಲ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯವಾಗಿ ಸೋಲಾಗಿದ್ದರಿಂದ ಹೈಕಮಾಂಡ್ ಮತ್ತೆ ಯಡಿಯೂರಪ್ಪ ಕೈಗೆ ಕಾರುಬಾರು ನೀಡಿದೆ. ಅವರ ಮಗ ವಿಜಯೇಂದ್ರರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಂಪರ್ ಬೆಳೆ ತೆಗೆಯಲು ಲೆಕ್ಕ ಹಾಕಿದೆ. ಮೋದಿ-ಯಡಿಯೂರಪ್ಪ ಬಲದ ಜೊತೆಗೆ ದೇವೇಗೌಡರ ಜೆಡಿಎಸ್ನೊಂದಿಗೆ ಕೈಜೋಡಿಸಿದ ಬಿಜೆಪಿ ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಉಮೇದಿನಲ್ಲಿದೆ. ಆದರೆ ಬಿಜೆಪಿಗೆ ಭಿನ್ನ ನಾಯಕರೇ ಕಂಟಕವಾಗಿ ಪರಿಣಮಿಸಿದ್ದಾರೆ. ಹಾಗೆ ನೋಡಿದರೆ; ಕರ್ನಾಟಕದ ಬಿಜೆಪಿಯಲ್ಲಿ ಭಿನ್ನಮತ ಹೊಸದೇನಲ್ಲ. ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಕಾಣಿಸಿಕೊಂಡಾಗಲೆಲ್ಲ ‘‘ಜನತಾ ಪರಿವಾರ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಬಿಜೆಪಿಗೆ ವಲಸೆ ಬಂದವರು ಭಿನ್ನಮತ ಮಾಡುತ್ತಾರೆ. ಯಾಕೆಂದರೆ ಅವರಿಗೆ ಸಂಘ ಪರಿವಾರದ ಸಂಸ್ಕಾರ ದೊರೆತಿರುವುದಿಲ್ಲ. ಸಂಘ ಪರಿವಾರದಲ್ಲಿ ಶಿಸ್ತು, ಬದ್ಧತೆ, ತ್ಯಾಗ, ದೇಶಭಕ್ತಿಯ ಸಂಸ್ಕಾರ ನೀಡಲಾಗುತ್ತದೆ. ಸಂಘ ಮೂಲದ ಬಿಜೆಪಿ ನಾಯಕರು ಭಿನ್ನಮತೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ’’ ಎಂದೇ ನಂಬಿಸಲಾಗಿತ್ತು. ಆದರೆ ಈಗ ಸಂಘ ಪರಿವಾರದಿಂದ ಬೆಳೆದು ಬಂದ ಬಿಜೆಪಿ ನಾಯಕರೇ ಮೋದಿ ಹೆಸರು ಹೇಳುತ್ತಲೇ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ.

ಬಿಜೆಪಿಯ ಸ್ಟಾರ್ ಪ್ರಚಾರಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಚಾರಕ್ಕೆ ಹೋದಲ್ಲೆಲ್ಲ ರಾಜ್ಯಾಧ್ಯಕ್ಷ ವಿಜಯೇಂದ್ರ, ಹಿರಿಯ ನಾಯಕ ಯಡಿಯೂರಪ್ಪ ವಿರುದ್ಧ ನಾಲಿಗೆ ಹರಿಬಿಡುತ್ತಲೇ ಇದ್ದಾರೆ. ಮೋದಿಯವರನ್ನು ಹೊಗಳಿದಂತೆ ಮಾಡಿ ಅಪ್ಪ ಮಕ್ಕಳನ್ನು ಹೀನಾಮಾನವಾಗಿ ನಿಂದಿಸುವುದೇ ಸ್ಟಾರ್ ಪ್ರಚಾರಕನ ನಿತ್ಯ ಕಾಯಕವಾಗಿದೆ. ಯತ್ನಾಳ್ ‘‘ನಾನೇ ಮುಂದಿನ ಮುಖ್ಯಮಂತ್ರಿ, ನಾನೇ ವಿರೋಧ ಪಕ್ಷದ ನಾಯಕ. ಲೋಕಸಭಾ ಚುನಾವಣೆಯ ನಂತರ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಳ್ಳುತ್ತಾನೆೆ’’ ಎಂದು ಪಕ್ಷಕ್ಕೆ ಮುಜುಗರವಾಗುವಂತೆ ಮಾತನಾಡುತ್ತಲೇ ಇದ್ದಾರೆ. ಮೋದಿ, ಅಮಿತ್ ಶಾ, ಬಲಿಷ್ಠ ಬಿಜೆಪಿ ಹೈಕಮಾಂಡ್ ಯಾವುದನ್ನೂ ಲೆಕ್ಕಿಸದ ಯತ್ನಾಳ್ಗೆ ಕಾಣದ ಕೈಯ ಬೆಂಬಲ ಇದ್ದಿರಲೇಬೇಕು. ಮೋದಿ- ಅಮಿತ್ ಶಾ ಎದುರು ಬಾಯಿ ತೆಗೆಯದ ಯತ್ನಾಳ್ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಇಷ್ಟು ಗಟ್ಟಿಯಾಗಿ ಮಾತನಾಡುತ್ತಾರೆಂದರೆ ಲೋಕಸಭೆಯ ಚುನಾವಣೆಯಲ್ಲಿ ಬಿಜೆಪಿಗೆ ಕಡಿಮೆ ಸೀಟ್ ಬರಲಿ ಎಂಬ ಆಶಯ ಹೊಂದಿರುತ್ತಾರೆ. ಈಶ್ವರಪ್ಪ ತನ್ನ ಮಗನಿಗೆ ಟಿಕೆಟ್ ತಪ್ಪಿದ್ದಕ್ಕೆ ಶಿವಮೊಗ್ಗದಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರನ್ನು ಸೋಲಿಸುವ ಪಣ ತೊಟ್ಟಿದ್ದಾರೆ. ಅಷ್ಟು ಮಾತ್ರವಲ್ಲ, ಪ್ರತಿದಿನ ವಿಜಯೇಂದ್ರ, ಯಡಿಯೂರಪ್ಪನವರನ್ನು ವಾಚಾಮಗೋಚರವಾಗಿ ಟೀಕಿಸುವುದೇ ಕಾಯಕ ಮಾಡಿಕೊಂಡಿದ್ದಾರೆ.

ಕೊಪ್ಪಳದ ಸಂಗಣ್ಣ ಕರಡಿ ಹೊರತುಪಡಿಸಿ ಸಂಘ ಪರಿವಾರಕ್ಕೆ ಸೇರದ ಬಹುತೇಕ ಬಿಜೆಪಿ ಮುಖಂಡರು ಯಡಿಯೂರಪ್ಪ ಮಾತಿಗೆ ಮನ್ನಣೆ ನೀಡಿ ಬಂಡಾಯದಿಂದ ಹಿಂದೆ ಸರಿದಿದ್ದಾರೆ. ಮಾಧುಸ್ವಾಮಿ, ಎಸ್.ಆರ್. ವಿಶ್ವನಾಥ್, ಪ್ರಭು ಚವ್ಹಾಣ್, ಶರಣು ಸಲಗರ, ಬಸವರಾಜ ಮೆತ್ತಿಮೂಡ, ಬಿ.ವಿ. ನಾಯಕ, ದೇವೀಂದ್ರಪ್ಪ, ಬೆಳಗಾವಿಯ ಅನೇಕ ಮುಖಂಡರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಸಂಘ ಪರಿವಾರ ಮೂಲದ ಬಿಜೆಪಿಯ ಮುಖಂಡರು ಕರ್ನಾಟಕದಲ್ಲಿ ಕಡಿಮೆ ಲೋಕಸಭಾ ಸ್ಥಾನಕ್ಕಾಗಿ ಯತ್ನಿಸುತ್ತಿದ್ದಾರೆ. ವಿಶೇಷವಾಗಿ ಯಡಿಯೂರಪ್ಪ, ವಿಜಯೇಂದ್ರ ಅವರ ನಾಯಕತ್ವ ಒಪ್ಪದವರು ಪಣತೊಟ್ಟವರಂತೆ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಕಾರ್ಯನಿರ್ವಹಿಸುತ್ತಿದ್ದಾರೆ. ಚುನಾವಣೆಗೂ ಮುಂಚೆ ಉಗ್ರ ಹಿಂದುತ್ವದ ಭಾಷಣಕ್ಕೆ ಹೆಸರಾಗಿದ್ದ ಚಕ್ರವರ್ತಿ ಸೂಲಿಬೆಲೆ, ಅನಂತಕುಮಾರ್ ಹೆಗಡೆ, ನಳಿನ್ ಕುಮಾರ್ ಕಟೀಲು, ಸಿ.ಟಿ. ರವಿ ಹೆಚ್ಚು ಕಡಿಮೆ ಸೈಲೆಂಟ್ ಆಗಿದ್ದಾರೆ. ಮೊದಲಿನ ಉತ್ಸಾಹ ಕಾಣುತ್ತಿಲ್ಲ. ಪ್ರತಾಪ ಸಿಂಹ ಮೈಸೂರಿನಲ್ಲಿ ಮನಸಾರೆ ಕೆಲಸ ಮಾಡುತ್ತಿಲ್ಲ. ಯದುವೀರ್ ಅವರಿಗೆ ಟಿಕೆಟ್ ದೊರೆತಾಗ ಆಡಿದ ಮಾತುಗಳು ಪ್ರತಾಪ ಸಿಂಹ ಎದೆಯಲ್ಲಿ ಅನುರಣಿಸುತ್ತಿವೆ. ಸಂಗಣ್ಣ ಕರಡಿಯವರನ್ನು ಕಾಂಗ್ರೆಸ್ಗೆ ಕರೆತಂದ ಲಕ್ಷ್ಮಣ ಸವದಿ ಅವರ ಉದ್ದೇಶವೂ ಯಡಿಯೂರಪ್ಪ- ವಿಜಯೇಂದ್ರ ಅವರನ್ನು ದುರ್ಬಲಗೊಳಿಸುವುದು ಮತ್ತು ಯಾರನ್ನೋ ‘ಸಂತೋಷ’ಪಡಿಸುವುದಾಗಿದೆ. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಈ ಹೊತ್ತಿಗೂ ಶೋಭಾ ಕರಂದ್ಲಾಜೆ ಅವರನ್ನು ಗೆಲ್ಲಿಸುವ ಮನಸ್ಥಿತಿಯಲ್ಲಿ ಇಲ್ಲ. ಚುನಾವಣಾ ಪ್ರಚಾರದ ಭಾಷಣ ಮಾಡಿದರೂ ತಮಗಾದ ಅನ್ಯಾಯವನ್ನೇ ಮತದಾರರ ಎದುರು ಹಂಚಿಕೊಳ್ಳುತ್ತಿದ್ದಾರೆ. ಸಿ.ಟಿ. ರವಿ ಪಕ್ಷದ ಸಂಘಟನೆಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡರೂ ತನಗಾದ ಅನ್ಯಾಯದ ಬಗ್ಗೆ ಎಲ್ಲೆಡೆ ಹೇಳುತ್ತಿರುತ್ತಾರೆ.

ಬಸನಗೌಡ ಪಾಟೀಲ್ ಯತ್ನಾಳ್, ಕೆ. ಎಸ್. ಈಶ್ವರಪ್ಪ, ಸದಾನಂದ ಗೌಡ, ಪ್ರತಾಪ ಸಿಂಹ, ಅನಂತಕುಮಾರ್ ಹೆಗಡೆ, ನಳಿನ್ ಕುಮಾರ್ ಕಟೀಲು, ಈರಣ್ಣ ಕಡಾಡಿ, ಮಹೇಶ್ ಟೆಂಗಿನಕಾಯಿ, ಚಕ್ರವರ್ತಿ ಸೂಲಿಬೆಲೆ ಮುಂತಾದವರು ದೇಶಭಕ್ತರ ಭಾಷಣ ಮಾಡುವುದರಲ್ಲಿ, ತ್ಯಾಗ ಬಲಿದಾನದ ಪೋಸು ಕೊಡುವುದರಲ್ಲಿ ನಿಸ್ಸೀಮರು. ಆದರೆ ಅವರ ಗುರಿಯಿರುವುದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರ ಬಲಿ ಪಡೆಯುವುದರಲ್ಲಿ. ಈ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದಿಂದ ಹೆಚ್ಚು ಸಂಸದರು ಗೆದ್ದರೆ ವಿಜಯೇಂದ್ರ ನಾಯಕನಾಗಿ ನೆಲೆಯೂರುತ್ತಾರೆ. ಆತ ನೆಲೆಯೂರಿದರೆ ಸಂಘಮೂಲದ ಬಿಜೆಪಿ ನಾಯಕರ ‘ಸಂತೋಷ’ ಖಾಯಂ ಆಗಿ ಮಾಯವಾಗುತ್ತದೆ. ಹಾಗಾಗಿ ಅವರೆಲ್ಲ ಬಹುದೊಡ್ಡ ರಿಸ್ಕ್ ತೆಗೆದುಕೊಂಡು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಈಶ್ವರಪ್ಪ, ಯತ್ನಾಳ್, ಸದಾನಂದ ಗೌಡ, ವಿಜಯೇಂದ್ರ-ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಗುಡುಗುತ್ತಿದ್ದಾರೆ. ಆದರೆ ಉಳಿದವರು ಬಿಜೆಪಿಗೆ ಡ್ಯಾಮೇಜ್ ಮಾಡಲು ಒಳಗೊಳಗೆ ಮಸಲತ್ತು ಮಾಡುತ್ತಿದ್ದಾರೆ. ಬಿಜೆಪಿಯ ಭಿನ್ನ ನಾಯಕರಿಗೆ ಈ ಚುನಾವಣೆ ಫಲಿತಾಂಶ ಅಳಿವು-ಉಳಿವಿನ ಪ್ರಶ್ನೆಯಾಗಿ ಕಾಣುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಶಕ್ತ್ಯಾನುಸಾರ ಬಿಜೆಪಿಗೆ ಗೋರಿ ತೋಡಲು ಯತ್ನಿಸುತ್ತಿದ್ದಾರೆ.

ತಮ್ಮ ರಾಜಕೀಯ ಅಸ್ತಿತ್ವದ ಪ್ರಶ್ನೆ ಎದುರಾದಾಗ ದೇಶ, ಅಭಿವೃದ್ಧಿ ಅಷ್ಟೇ ಯಾಕೆ ಮೋದಿ ಕೂಡಾ ಹಿನ್ನೆಲೆಗೆ ಸರಿದು ಕೇವಲ ಸ್ವಾರ್ಥ ವಿಜೃಂಭಿಸುತ್ತದೆ. ಯತ್ನಾಳ್, ಈಶ್ವರಪ್ಪ, ಸದಾನಂದ ಗೌಡ ಆ ಕಾರಣಕ್ಕೆ ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಬಿಜೆಪಿಯ ಬಲಿಷ್ಠ ಹೈಕಮಾಂಡ್ ಯಾವ ಕ್ರಮವನ್ನೂ ಜರುಗಿಸಲಾರದು ಎಂಬ ಆತ್ಮವಿಶ್ವಾಸ ಅವರಲ್ಲಿದೆ. ಕರ್ನಾಟಕದ ಮತದಾರ ಏನು ಬೇಕಾದರೂ ಸಹಿಸಿಕೊಳ್ಳಬಲ್ಲ. ಆದರೆ ಯಾವುದೇ ಒಂದು ಪಕ್ಷದ ಒಳಜಗಳವನ್ನು ಒಪ್ಪಿಕೊಳ್ಳುವುದಿಲ್ಲ. ಕರ್ನಾಟಕದಲ್ಲಿ ಜನತಾ ಪರಿವಾರ, ಕಾಂಗ್ರೆಸ್, ಬಿಜೆಪಿ ಅಧಿಕಾರ ಕಳೆದುಕೊಂಡಿದ್ದೇ ಬಣ ರಾಜಕೀಯ ಮತ್ತು ‘ಒಳಜಗಳ’ದಿಂದಾಗಿ. ಅನಂತಕುಮಾರ್ ಹೆಗಡೆ ಅನಾಯಾಸವಾಗಿ ಆರು ಬಾರಿ ಸಂಸದರಾಗಿದ್ದರು. ಆರೆಸ್ಸೆಸ್ ಮೂಲದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ನೀಡಿದ್ದು ಆ ಉಗ್ರ ಹಿಂದುತ್ವವಾದಿಗೆ ಸಹಿಸಲು ಆಗುತ್ತಿಲ್ಲ. ಇನ್ನು ಅನಂತ ಕುಮಾರ್ ಹೆಗಡೆಯವರ ‘ದೇಶಪ್ರೇಮ’, ಹಿಂದೂ ಪ್ರೀತಿ ಯಾವ ಬಗೆಯದು ಎಂಬುದು ಸಾಮಾನ್ಯರಲ್ಲಿ ಸಾಮಾನ್ಯರಿಗೂ ಅರ್ಥವಾಗುತ್ತದೆ.

ಹಿಂದುತ್ವ, ದೇಶಪ್ರೇಮ, ತ್ಯಾಗ ಬಲಿದಾನದ ಬುರುಡೆ ಭಾಷಣ ಮಾಡುವ ಯತ್ನಾಳ್, ಈಶ್ವರಪ್ಪ, ಸದಾನಂದ ಗೌಡ, ಚಕ್ರವರ್ತಿ ಸೂಲಿಬೆಲೆ, ಅನಂತಕುಮಾರ್ ಹೆಗಡೆಯವರಿಗೆ ಸ್ಥಾನಮಾನ ನೀಡಿದ ಪಕ್ಷದ ಬಗ್ಗೆ, ಆ ಪಕ್ಷದ ನಾಯಕರ ಬಗ್ಗೆ ಕನಿಷ್ಠ ಪ್ರೀತಿ-ಗೌರವ ಇಲ್ಲವೆಂದರೆ ಇವರು ದೇಶದ ಜನರನ್ನು ಹೇಗೆ ಪ್ರೀತಿಸಿಯಾರು? ಕಾಂಗ್ರೆಸ್ ನಾಯಕರಿಗಿಂತಲೂ ಈ ಸಂಘ ಮೂಲದ ಬಿಜೆಪಿ ನಾಯಕರು ಹೆಚ್ಚು ಸ್ವಾರ್ಥಿಗಳು ಮತ್ತು ಅಧಿಕಾರ ಲೋಲುಪರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹುಸಿ ದೇಶಭಕ್ತರ ಬಗ್ಗೆ ಎಚ್ಚರಿಕೆ ಇರಲಿ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News

ನಾಸ್ತಿಕ ಮದ